ಕೊಹ್ಲಿ ಅಗ್ರಸ್ಥಾನ ಅಬಾಧಿತ

Update: 2019-08-27 18:32 GMT

► ಅಗ್ರ-10ರೊಳಗೆ ಪ್ರವೇಶಿಸಿದ ಬುಮ್ರಾ

ದುಬೈ, ಆ.27: ಭಾರತ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ವಿರುದ್ಧ ಆರು ಅಂಕಗಳ ಮುನ್ನಡೆ ಸಾಧಿಸಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇದೇ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹೆಡ್ಡಿಂಗ್ಲೆಯಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್‌ಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟಿದ್ದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭಾರೀ ಭಡ್ತಿ ಪಡೆದಿದ್ದಾರೆ. ಬ್ಯಾಟ್ಸ್ ಮನ್ ಹಾಗೂ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಸ್ಟೋಕ್ಸ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನ ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಕೊಹ್ಲಿ 910 ಅಂಕ ಪಡೆದಿದ್ದಾರೆ. 904 ಅಂಕ ಗಳಿಸಿರುವ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಹಾಗೂ ಚೇತೇಶ್ವರ ಪೂಜಾರ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

 ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ನಲ್ಲಿ 81 ಹಾಗೂ 102 ರನ್ ಗಳಿಸಿದ್ದ ಭಾರತದ ಉಪ ನಾಯಕ ಅಜಿಂಕ್ಯ ರಹಾನೆ 10 ಸ್ಥಾನ ಭಡ್ತಿ ಪಡೆದು 11ನೇ ಸ್ಥಾನಕ್ಕೇರಿದರು. ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಭಾರತದ ವೇಗಿ ಬುಮ್ರಾ ಬೌಲರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ವಿರುದ್ಧ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ಬುಮ್ರಾ 9 ಸ್ಥಾನ ಭಡ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News