ಸಿಂಧು ಭಾರತದ ಹೆಮ್ಮೆ: ಪ್ರಧಾನಿ

Update: 2019-08-27 18:44 GMT

ಹೊಸದಿಲ್ಲಿ, ಆ.27: ಯುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ನಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಭಾರತದ ಮಾತ್ರವಲ್ಲ ಇಡೀ ಬ್ಯಾಡ್ಮಿಂಟನ್ ಜಗತ್ತಿನ ಕಣ್ಮಣಿ ಎನಿಸಿಕೊಂಡಿದ್ದಾರೆ. ಪಿ.ವಿ. ಸಿಂಧು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ನಲ್ಲಿ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ್ತಿಯಾಗಿ ದಾಖಲೆ ಬರೆದಿದ್ದಾರೆ. ಬಾಸೆಲ್‌ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಸ್ವದೇಶಕ್ಕೆ ಆಗಮಿಸಿದ ಸಿಂಧು ರಾಜಧಾನಿಯಲ್ಲಿ ಆನೇಕ ಅಭಿನಂದನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

 24ರ ಹರೆಯದ ಸಿಂಧು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಸಿಂಧು ಅಭಿನಂದಿಸಿದ ಪ್ರಧಾನಿ ಮೋದಿ ಅವರು ಚಿನ್ನದ ಪದಕದ ಜೊತೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಸಿಂಧು ಭಾರತದ ಹೆಮ್ಮೆ ಎಂದು ಕೊಂಡಾಡಿದ್ದಾರೆ. ಸಿಂಧು ಅವರ ಭವಿಷ್ಯದ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ. ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ.ಗೋಪಿಚಂದ್ ಮತ್ತು ಅವರ ನೂತನ ಕೋಚ್ ದಕ್ಷಿಣ ಕೊರಿಯದ ಅಂತರ್‌ರಾಷ್ಟ್ರೀಯ ಕೋಚ್ ಕಿಮ್ ಜಿ ಹ್ಯೂನ್ ಮಾರ್ಗದರ್ಶನದಲ್ಲಿ ಸಿಂಧು ತರಬೇತಿ ಪಡೆದು ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಜಯಿಸಿದ್ದಾರೆ.

ಇದಕ್ಕೂ ಮೊದಲು ಸಿಂಧು, ಗೋಪಿಚಂದ್, ಕಿಮ್ ಜಿ ಹ್ಯೂನ್ ಮತ್ತು ಸಿಂಧು ಅವರ ತಂದೆ ಪಿ.ವಿ.ರಮಣ್ ಅವರು ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ಒಟ್ಟಿಗೆ ಬೆಳಗ್ಗಿನ ಉಪಹಾರ ಸೇವಿಸಿದರು.

 ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಹಿಮಂತಾ ಬಿಸ್ವಾ ಶರ್ಮಾ , ಕೇಂದ್ರ ಕ್ರೀಡಾ ಕಾರ್ಯ ದರ್ಶಿ ರಾಧೇ ಶ್ಯಾಮ್ ಜುಲಾನಿಯಾ ಮತ್ತು ಭಾರತದ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಸಂದೀಪ್ ಪ್ರಧಾನ್ ಉಪಸ್ಥಿಯತರಿದ್ದರು. ಬಾಸೆಲ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಸಿಂಧು ಅವರಿಗೆ ಕ್ರೀಡಾ ಸಚಿವರು 10ಲಕ್ಷ ರೂ. ಮೊತ್ತದ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

  ಸ್ವಿಟ್ಝರ್ಲೆಂಡ್‌ನಲ್ಲಿ ರವಿವಾರ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾ ಅವರನ್ನು 21-7, 21-7 ಅಂತರದಿಂದ ಮಣಿಸಿ ಮೊದಲ ಬಾರಿ ವಿಶ್ವ ಚಾಂಪಿಯನ್ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದರು.

  ಸಿಂಧು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಪದಕ ಜಯಿಸಿದ್ದಾರೆ. 2013 ಮತ್ತು 2014ರಲ್ಲಿ ಕಂಚು, 2017 ಮತ್ತು 2018ರಲ್ಲಿ ಬೆಳ್ಳಿ ಹಾಗೂ 2019ರಲ್ಲಿ ಚಿನ್ನ ಪಡೆದಿದ್ದಾರೆ. ಇದರೊಂದಿಗೆ ಅವರು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಪದಕ ಜಯಿಸಿದ ಮಾಜಿಒಲಿಂಪಿಕ್ ಚಾಂಪಿಯನ್ ಚೀನಾದ ಝಾಂಗ್ ನಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಝಾಂಗ್ ನಿಂಗ್ 2001 ರಿಂದ 2007ರ ತನಕ 1 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News