ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗಿದೆ ಮಂಗಳೂರಿನ ನಂಟು

Update: 2019-08-28 12:19 GMT

ಮಂಗಳೂರು, ಆ. 28 : ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಅಚ್ಚರಿಯ ಆಯ್ಕೆಯಾಗಿರುವ ಡಾ. ಸಿಎನ್ ಅಶ್ವಥನಾರಾಯಣ ಅವರಿಗೂ ಮಂಗಳೂರಿಗೂ ಹತ್ತಿರದ ನಂಟಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಅಶ್ವಥ್ ನಾರಾಯಣ ಅವರು ವೈದ್ಯಕೀಯ ಶಿಕ್ಷಣ ಪಡೆದಿದ್ದು ಮಂಗಳೂರಿನಲ್ಲಿ ಎಂಬುದು ವಿಶೇಷ.

ಶಿಕ್ಷಕರಾಗಿ ಬಳಿಕ ಶಿಕ್ಷಣ ಇಲಾಖೆಯಲ್ಲಿ ಉಪ ಅಧೀಕ್ಷಕರಾಗಿ ನಿವೃತ್ತರಾದ ಟಿ ಕೆ ನಾರಾಯಣಪ್ಪ ಅವರ ಪುತ್ರರಾದ ಅಶ್ವಥ್ ನಾರಾಯಣ ಅವರು ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಪ್ರೌಢ ಶಿಕ್ಷಣ ಹಾಗು ಪಿಯು ಕಲಿತಿದ್ದು ಶಿವಮೊಗ್ಗದಲ್ಲಿ. ಬಳಿಕ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅವರು ಎಂಬಿಬಿಎಸ್ ಪದವಿ ಅಧ್ಯಯನ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಗಲೇ ನಾಯಕತ್ವದ ಗುಣ ತೋರಿಸಿದ್ದರು.

" ಡಾ. ಅಶ್ವಥ ನಾರಾಯಣ ಅವರು ಮಂಗಳೂರಿನ  ಕೆಎಂಸಿಯಲ್ಲಿ ಎಂಬಿಬಿಎಸ್ ಕಲಿಯುತ್ತಿರುವಾಗಲೇ ಅತ್ಯಂತ ಸಕ್ರಿಯ ವಿದ್ಯಾರ್ಥಿ ನಾಯಕರಾಗಿ ಬೆಳೆದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರೂ ಇಂದಿಗೂ ಮಂಗಳೂರಿನ ನಂಟು ಬಿಟ್ಟಿಲ್ಲ. ಇಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಗೆಳೆಯರಿದ್ದಾರೆ. ಬಳಿಕ ರಾಜ್ಯ ವೈದ್ಯರ ಸಂಘದ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಅರೋಗ್ಯ ವಿವಿಯ ಸೆನೆಟ್ ಹಾಗು ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

(ನೂತನ ಡಿಸಿಎಂ ಡಾ. ಸಿಎನ್ ಅಶ್ವಥನಾರಾಯಣ ಜೊತೆ ಡಾ. ಯು.ಟಿ. ಇಫ್ತಿಕಾರ್ ಅಲಿ)

1996 ರಲ್ಲಿ ಬೆಂಗಳೂರಿನಲ್ಲಿ ತಮ್ಮ ತಾಯಿಯ ಹೆಸರಲ್ಲಿ ಪದ್ಮಶ್ರೀ ಕಾಲೇಜ್ ಆಫ್ ಫಿಸಿಯೊತೆರಪಿ ಪ್ರಾರಂಭಿಸಿದರು. ಈಗ ಅದು ಹಲವು ಕಾಲೇಜುಗಳ ಸಮೂಹವಾಗಿದೆ. ಆಗ ಬಹಳ ವಿನಯ, ಪರೋಪಕಾರಿ ಮನೋಭಾವದ ಅವರು ಈಗಲೂ ಹಾಗೇ ಇದ್ದಾರೆ" ಎಂದು ರಾಜೀವ್ ಗಾಂಧಿ ಅರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಯು ಟಿ ಇಫ್ತಿಕಾರ್ ಅಲಿ ನೆನಪಿಸಿಕೊಂಡಿದ್ದಾರೆ.

2004 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಡಾ. ಅಶ್ವಥ ನಾರಾಯಣ ಅವರು ಆ ಬಳಿಕ 2008 ರಿಂದ ಸತತ ಮೂರು ಬಾರಿ ಅಲ್ಲಿಂದ ಗೆದ್ದಿದ್ದಾರೆ. ಈಗ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಉನ್ನತ ಶಿಕ್ಷಣ, ಐಟಿ ಬಿಟಿ ಹಾಗು ವಿಜ್ಞಾನ ತಂತ್ರಜ್ಞಾನ ಖಾತೆಗಳನ್ನು ನಿಭಾಯಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News