ಉಪ್ಪುತಿನ್ನಿಸಿದವರಿಗೆ ನೀರು ಕುಡಿಸಬೇಕು

Update: 2019-08-28 18:37 GMT

ಮಾನ್ಯರೇ,

ನಮ್ಮ ದೇಶದಲ್ಲಿ ಶಾಲಾ ಮಕ್ಕಳು ಸರಕಾರಿ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿ ಊಟ ಸೇವಿಸಿ ಅಸ್ವಸ್ಥರಾಗುವ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿಗೆ ಉತ್ತರ ಪ್ರದೇಶದ ಮಿರ್ಝಾಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ನೂರಾರು ವಿದ್ಯಾರ್ಥಿಗಳು ಶಾಲೆಯ ಮಧ್ಯಾಹ್ನದ ಬಿಸಿ ಊಟ ಸೇವಿಸುವ ವೀಡಿಯೊ ಎಲ್ಲೆಡೆ ಹರಡಿದೆ. ಈ ದೃಶ್ಯ ನಿಜಕ್ಕೂ ಮನ ಕಲಕುವಂತೆ ಇದೆ. ಮಕ್ಕಳು ರೊಟ್ಟಿ ಜತೆ ಉಪ್ಪನ್ನು ಹಚ್ಚಿ ಯಾವುದೇ ತಕರಾರು ಇಲ್ಲದೇ ತಿನ್ನುತ್ತಿದ್ದಾರೆ. ಹಸಿವಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ಕೆಲಸವೇ ಸರಿ. ಹೊಟ್ಟೆ ಖಾಲಿ ಇರುವಾಗ ನಾಲಿಗೆಗೆ ಕಹಿ, ಖಾರ, ಉಪ್ಪು ಯಾವ ರುಚಿಯೂ ತಿಳಿಯುವುದಿಲ್ಲ. ಹಾಗಾಗಿ ಮಕ್ಕಳು ರುಚಿಯ ವ್ಯತ್ಯಾಸ ತಿಳಿಯದೆ ಕೇವಲ ಹಸಿವಿಗಾಗಿ ಆಹಾರ ಸೇವಿಸುತ್ತಿದ್ದಾರೆ.

ಕೇಂದ್ರ ಸರಕಾರದ ಮಧ್ಯಾಹ್ನ ಊಟದ ಯೋಜನೆಯಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಕ್ರಮ ಜಾರಿಗೆ ತರಲಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಅನ್ನ, ಸಾರು, ರೊಟ್ಟಿ, ತರಕಾರಿ ಹಾಗೂ ವಿಶೇಷ ದಿನಗಳಲ್ಲಿ ಹಾಲು ಮತ್ತು ಬಾಳೆ ಹಣ್ಣು ಕೊಡಲಾಗುತ್ತದೆ ಎಂಬುದು ಕೂಡಾ ಆಹಾರಪಟ್ಟಿಯಲ್ಲಿ ಇದೆ. ಆದರೆ ಈ ವೀಡಿಯೊ ಆಹಾರ ಪಟ್ಟಿಯನ್ನು ಅಣಕಿಸಿದೆ. ಈ ಬಡ ಮಕ್ಕಳ ಅನ್ನದ ತುತ್ತನ್ನು ಕಿತ್ತು ತಿಂದ ತಿಮಿಂಗಿಲಗಳ ಮೇಲೆ ಸರಕಾರ ಇನ್ನಾದರೂ ಬಲೆ ಬೀಸಬೇಕು. ಇಂತಹ ಪ್ರಕರಣಗಳಲ್ಲಿ ಕಾಟಾಚಾರಕ್ಕೆ ಕೇವಲ ತಳಮಟ್ಟದವರನ್ನು ಹಿಡಿದು ಪ್ರಕರಣ ಮುಗಿಸುವ ತಂತ್ರ ಎಲ್ಲರಿಗೂ ತಿಳಿದಿರುವಂತಹದ್ದೇ. ಇದನ್ನೇ ಸರಕಾರ ಕಠಿಣ ಕ್ರಮ ಎಂದು ಕೈ ತೊಳೆದುಕೊಳ್ಳುತ್ತದೆ. ಆದರೆ ಪದೇ ಪದೇ ಮರುಕಳಿಸುವ ಈ ಘಟನೆಗಳು ‘ನವಭಾರತ’ಕ್ಕೆ ಕಪ್ಪುಚುಕ್ಕಿಯಾಗದೇ?.

ಹೀಗಾಗಿ ಇನ್ನಾದರೂ ಸರಕಾರ ಇಂತಹ ಪ್ರಕರಣಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಲಿ.

-ಝೈನಬ್ ಎಂ. ಖಾದ್ರಿ ವಿಜಯಪುರ

Similar News