ಡೆಂಗ್, ಮಲೇರಿಯಾ ನಿಯಂತ್ರಣಕ್ಕೆ ಬರಲಿ

Update: 2019-08-28 18:38 GMT

ಮಾನ್ಯರೇ,

ಬೆಂಗಳೂರು, ಮಂಗಳೂರು, ಉಡುಪಿ ಹಾಗೂ ಇನ್ನಿತರ ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಗ್, ಮಲೇರಿಯಾ ಪ್ರಕರಣಗಳು ಹೆಚ್ಚಾಗಿ, ಕಾಯಿಲೆಯ ತೀವ್ರತೆಗೆ ಹಲವು ಜನರು ಬಲಿಯಾಗಿದ್ದಾರೆ. ಸ್ವಚ್ಛ ನಗರವೆಂದು ಕರೆಯಲ್ಪಡುವ ಮಂಗಳೂರಿನಲ್ಲಿ ಡೆಂಗ್, ಮಲೇರಿಯಾದಂತಹ ಕಾಯಿಲೆಗಳು ಹೆಚ್ಚಾಗಿರುವುದು ಆತಂಕ ಹುಟ್ಟಿಸುತ್ತದೆ. ಮಂಗಳೂರಿನಲ್ಲೂ ಕೊಳಚೆ ಪ್ರದೇಶಗಳೇನು ಕಡಿಮೆ ಇಲ್ಲ. ಅಲ್ಲದೆ ನಗರದ ಕೆಲವೆಡೆ ಚರಂಡಿ ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಇರದೆ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ವರ್ಷಂಪ್ರತಿ ಇಂತಹ ರೋಗ-ರುಜಿನಗಳ ಸಮಸ್ಯೆ ಉಲ್ಭಣಗೊಳ್ಳುವ ವಿಷಯ ತಿಳಿದಿದ್ದರೂ ಮನಪಾ ಹಾಗೂ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದಿಲ್ಲ. ಹಿಂದೆಲ್ಲಾ ಮನಪಾ ವತಿಯಿಂದ ಆಯಾಯ ವಾರ್ಡ್‌ಗಳಿಗೆ ವ್ಯಕ್ತಿಯೋರ್ವ ಹೆಗಲಲ್ಲಿ ಔಷಧಿಯ ಸಿಲಿಂಡರ್ ಇಟ್ಟುಕೊಂಡು ಬಂದು ಔಷಧಿ ಸಿಂಪಡಿಸುತ್ತಿದ್ದ. ಆಗ ಸ್ವಲ್ಪ ಮಟ್ಟಿಗಾದರೂ ಸೊಳ್ಳೆಗಳ ತೀವ್ರತೆ ಕಡಿಮೆ ಇದ್ದು, ಡೆಂಗ್, ಮಲೇರಿಯಾಗಳ ಪ್ರಕರಣ ಹತೋಟಿಯಲ್ಲಿತ್ತು. ಆದರೆ ಒಂದೆರಡು ವರ್ಷಗಳಿಂದ ಔಷಧಿ ಸಿಂಪರಣೆ ಸ್ಥಗಿತಗೊಂಡಿದೆ. ಈ ಬಗ್ಗೆ ಕೇಳಿದರೆ ರಾಸಾಯನಿಕ ಸ್ಟಾಕ್‌ನಲ್ಲಿಲ್ಲ ಎಂಬ ಉಡಾಫೆೆ ಉತ್ತರ ಸಿಗುತ್ತದೆ.

ಆದ್ದರಿಂದ ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಎಚ್ಚರಿಕೆ ವಹಿಸಿ ಡೆಂಗ್, ಮಲೇರಿಯಾ ಪ್ರಕರಣಗಳು ಮರೆಯಾಗುವಂತೆ ಕ್ರಮವಹಿಸಬೇಕಾಗಿದೆ. ಸೊಳ್ಳೆ ನಿಗ್ರಹದಂತಹ ವ್ಯವಸ್ಥೆಗಳನ್ನು ನಿಭಾಯಿಸಲು ಸರಿಯಾದ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ಇದುವರೆಗಿನ ನಿರ್ಲಕ್ಷ ಮುಂದಿನ ದಿನಗಳಲ್ಲಿ ಮರುಕಳಿಸದಿರಲಿ.

-ಜೆ. ಎಫ್. ಡಿ’ಸೋಜಾ, ಅತ್ತಾವರ

Writer - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News