ಎಚ್ಐವಿ ಸೋಂಕು ತಗಲಿರುವ ಬಗ್ಗೆ ತಪ್ಪು ವರದಿ: ಖಾಸಗಿ ಕ್ಲಿನಿಕ್ ನ ಅಚಾತುರ್ಯದಿಂದ ಮಹಿಳೆ ಸಾವು

Update: 2019-08-29 07:04 GMT

ಶಿಮ್ಲಾ, ಆ.29: ಹಿಮಾಚಲ ಪ್ರದೇಶದಲ್ಲಿ ಖಾಸಗಿ ಕ್ಲಿನಿಕ್ ವೊಂದರಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಎಚ್ ಐವಿ ಸೋಂಕು ತಗಲಿದೆಯೆಂದು ತಪ್ಪು  ವರದಿ ನೀಡಿದ ಕಾರಣದಿಂದಾಗಿ ಆಘಾತಗೊಂಡ ಮಹಿಳೆ ಮೃತಪಟ್ಟಿದ್ದು, ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಜೈರಾಮ್ ಠಾಕೂರ್ ಈ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.

ಶಿಮ್ಲಾದ ಖಾಸಗಿ ಕ್ಲಿನಿಕ್ ನಲ್ಲಿ ಮಹಿಳೆಯೊಬ್ಬರನ್ನು ನಾನಾ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಅಲ್ಲಿ ವರದಿ ಬಂದಾಗ ಮಹಿಳೆಗೆ ಆಘಾತ ಕಾದಿತ್ತು. ಆ ಮಹಿಳೆಗೆ ಎಚ್ ಐವಿ ಸೋಂಕು ತಗಲಿದೆಯೆಂದು ಕ್ಲಿನಿಕ್ ನಿಂದ ನೀಡಲಾದ ವರದಿಯಲ್ಲಿ ಹೇಳಲಾಗಿತ್ತು. 

ಇದರಿಂದ ಮಾನಸಿಕ ಆಘಾತಕ್ಕೊಳಗಾದ  ಮಹಿಳೆ ಕೋಮಾಕ್ಕೆ ಜಾರಿದ್ದರು. ಬಳಿಕ ಚಿಕಿತ್ಸೆಗಾಗಿ ಶಿಮ್ಲಾದ ಕಮಲಾ ನೆಹರೂ ಆಸ್ಪತ್ರೆಗೆ (ಕೆ ಎನ್ ಎಚ್ )ದಾಖಲಿಸಲಾಗಿತ್ತು. ಬಳಿಕ ಸರಕಾರಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ನಡೆಸಿದಾಗ ಮಹಿಳೆಗೆ ಎಚ್ ಐವಿ ಸೋಂಕು ಬಾಧಿಸಿಲ್ಲ. ಖಾಸಗಿ ಕ್ಲಿನಿಕ್ ನಲ್ಲಿ ತಪ್ಪಾಗಿ ನಿರ್ಣಯಿಸಿ  ವರದಿ ನೀಡಿರುವುದು ಬೆಳಕಿಗೆ ಬಂದಿತ್ತು.

ಕ್ಲಿನಿಕ್ ನ ವರದಿಯ ಹಿನ್ನೆಲೆಯಲ್ಲಿ ಮಾನಸಿಕ ಆಘಾತಕ್ಕೊಳಗಾಗಿದ್ದ ಮಹಿಳೆಯನ್ನು ಹೆಚ್ಚಿನ ಚಿಕತ್ಸೆಗಾಗಿ ಶಿಮ್ಲಾದ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ( ಐಜಿಎಂಸಿ) ದಾಖಲಿಸಲಾಗಿದ್ದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ  ಮೃತಪಟ್ಟಿದ್ದರು.

ಖಾಸಗಿ ಕ್ಲಿನಿಕ್ ನೀಡಿದ ತಪ್ಪು ವರದಿಯ ಹಿನ್ನೆಲೆಯಲ್ಲಿ ಮೃತಪಟ್ಟ ಪ್ರಕರಣದ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಧ್ವನಿ ಎತ್ತಿರುವ ರೊಹ್ರು ಕ್ಷೇತ್ರದ ಕಾಂಗ್ರೆಸ್ ಶಾಸಕ ಮೋಹನ್ ಲಾಲ್ ಬ್ರಕ್ಟಾ ಅವರು ಮಹಿಳೆಯ ಸಾವಿಗೆ ಕಾರಣವಾದ ಖಾಸಗಿ ಕ್ಲಿನಿಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಾವಿಗೀಡಾದ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News