2019ರಲ್ಲಿ 71,543 ಕೋಟಿ ರೂ. ತಲುಪಿದ ಬ್ಯಾಂಕ್ ವಂಚನೆ ಮೊತ್ತ, ಶೇ.74ರಷ್ಟು ಏರಿಕೆ: ಆರ್‌ ಬಿಐ

Update: 2019-08-29 15:33 GMT

ಹೊಸದಿಲ್ಲಿ, ಆ.29: 2017-18ನೇ ಹಣಕಾಸು ವರ್ಷದ 41,167 ಕೋ.ರೂ.ಗೆ ಹೋಲಿಸಿದರೆ 2018-19ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಶೇ.15ರಷ್ಟು ಮತ್ತು ವಂಚನೆ ಮೊತ್ತದಲ್ಲಿ ಶೇ.74ರಷ್ಟು ಏರಿಕೆಯಾಗಿದ್ದು, ಅದೀಗ 71,543 ಕೋ.ರೂ.ಗಳಿಗೆ ತಲುಪಿದೆ ಎಂದು ಆರ್‌ಬಿಐ ಗುರುವಾರ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಇದೇ ವೇಳೆ, ಆರ್‌ಬಿಐನಿಂದ ಸರಕಾರಕ್ಕೆ 1.76 ಲ.ಕೋ.ರೂ.ಗಳ ದಾಖಲೆ ಹಣ ವರ್ಗಾವಣೆಯ ಬಳಿಕ ಯಾವುದೇ ತುರ್ತು ಸಂದರ್ಭವನ್ನು ಎದುರಿಸಲು ಬಳಕೆಯಾಗುವ ಬ್ಯಾಂಕಿನ ಮೀಸಲು ನಿಧಿಯು ಜೂನ್ 30ಕ್ಕೆ ಇದ್ದಂತೆ 1.96 ಲ.ಕೋ.ರೂ.ಗೆ ಕುಸಿದಿದೆ ಎಂದೂ ವರದಿಯು ಹೇಳಿದೆ.

ವಂಚನೆಯ ದಿನಾಂಕ ಮತ್ತು ಬ್ಯಾಂಕುಗಳಿಂದ ಅದರ ಪತ್ತೆಯ ನಡುವೆ ಸರಾಸರಿ ಅವಧಿ 22 ತಿಂಗಳುಗಳಷ್ಟಿದೆ ಎಂದು ವರದಿಯು ಬೆಟ್ಟು ಮಾಡಿದೆ. 2017-18ನೇ ಸಾಲಿನಲ್ಲಿ 5,916 ಬ್ಯಾಂಕ್ ವಂಚನೆ ಪ್ರಕರಣಗಳು ವರದಿಯಾಗಿದ್ದರೆ, ವರದಿ ವರ್ಷದಲ್ಲಿ ಇವುಗಳ ಸಂಖ್ಯೆ 6,801ಕ್ಕೇರಿದೆ.

ಬ್ಯಾಂಕ್ ಸಾಲಗಳ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಹೊಂದಿರುವ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹೆಚ್ಚಿನ ವಂಚನೆ ಪ್ರಕರಣಗಳು ನಡೆದಿದ್ದು, ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳು ನಂತರದ ಸ್ಥಾನಗಳಲ್ಲಿವೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ 2018-19ರಲ್ಲಿ 64,509.43 ಕೋ.ರೂ.ಗಳ ಮೊತ್ತದ 3,766 ಪ್ರಕರಣಗಳು ವರದಿಯಾಗಿದ್ದರೆ, ಹಿಂದಿನ ವರ್ಷದಲ್ಲಿ 2,885 ಪ್ರಕರಣಗಳಲ್ಲಿ 38,260.8 ಕೋ.ರೂ.ವಂಚನೆ ನಡೆದಿತ್ತು.

2018-19ರಲ್ಲಿ ವಂಚನೆಗೊಳಗಾಗಿರುವ ಮೊತ್ತದ ಹೆಚ್ಚಿನ ಪಾಲು ಸಾಲಗಳಿಗೆ ಸಂಬಂಧಿಸಿದ್ದರೆ,ಬ್ಯಾಂಕಿನ ಆಯವ್ಯಯ ಪಟ್ಟಿಯಲ್ಲಿ ತೋರಿಸಿರದ ಆಸ್ತಿ ಮತ್ತು ಬಾಧ್ಯತೆಗಳಲ್ಲಿ ವಂಚನೆಯ ಪಾಲು ಹಿಂದಿನ ಹಣಕಾಸು ವರ್ಷಕ್ಕಿಂತ ಕಡಿಮೆಯಾಗಿದೆ. 2018-19ರಲ್ಲಿ ಕಾರ್ಡ್‌ಗಳು/ಅಂತರ್ಜಾಲ ಬ್ಯಾಂಕಿಂಗ್ ಮತ್ತು ಠೇವಣಿಗಳಿಗೆ ಸಂಬಂಧಿಸಿದ ವಂಚನೆಗಳ ಪ್ರಮಾಣ ಒಟ್ಟು ವಂಚನೆ ಮೊತ್ತದ ಕೇವಲ ಶೇ.0.3ರಷ್ಟಿದೆ ಎಂದು ವರದಿಯು ತಿಳಿಸಿದೆ.

72 ವಂಚನೆ ಮತ್ತು ಫೋರ್ಜರಿ ಪ್ರಕರಣಗಳಲ್ಲಿ ವಂಚನೆ ಮೊತ್ತದ ಹೆಚ್ಚಿನ ಪಾಲು ಸಿಕ್ಕಿಕೊಂಡಿದ್ದು, ಹಣ ದುರುಪಯೋಗ ಮತ್ತು ನಂಬಿಕೆ ದ್ರೋಹ ಪ್ರಕರಣಗಳು ನಂತರದ ಸ್ಥಾನಗಳಲ್ಲಿವೆ. ಒಂದು ಲಕ್ಷ ರೂ.ಗಿಂತ ಕಡಿಮೆ ಮೊತ್ತದ ವಂಚನೆಯ ಪ್ರಮಾಣ ಒಟ್ಟು ಮೊತ್ತದ ಕೇವಲ ಶೇ.0.1ರಷ್ಟಿದೆ ಎಂದೂ ವರದಿಯು ಹೇಳಿದೆ.

ಕುಸಿದ ಮೀಸಲು ನಿಧಿ

2018,ಜೂ.30ಕ್ಕೆ 2,32,108 ಕೋ.ರೂ.ಗಳಿದ್ದ ಆರ್‌ ಬಿಐ ಮೀಸಲು ನಿಧಿಯು ಸರಕಾರಕ್ಕೆ 1,76,501 ಕೋ.ರೂ.ವರ್ಗಾವಣೆಯ ಬಳಿಕ 2019,ಜೂ.30ಕ್ಕೆ ಇದ್ದಂತೆ 1,96,344 ಕೋ.ರೂ.ಗಿಳಿದಿದೆ ಎಂದು ವರದಿಯು ತಿಳಿಸಿದೆ.

ಆರ್‌ ಬಿಐನಿಂದ ಸರಕಾರಕ್ಕೆ ವರ್ಗಾವಣೆಯಾಗಿರುವ 1,76,501 ಕೋ.ರೂ. ಮೊತ್ತವು 2018-19ನೇ ಸಾಲಿಗೆ ಮಿಗತೆ ಮೊತ್ತ 1,23,414 ಕೋ.ರೂ. ಮತ್ತು ಸೋಮವಾರ ಬ್ಯಾಂಕಿನ ಕೇಂದ್ರ ಮಂಡಳಿಯ ಸಭೆಯಲ್ಲಿ ಅಂಗೀಕರಿಸಲಾದ ಪರಿಷ್ಕೃತ ಆರ್ಥಿಕ ಬಂಡವಾಳ ಮಾರ್ಗಸೂಚಿ (ಇಸಿಎಫ್)ಯಂತೆ ಹೆಚ್ಚುವರಿ ಒದಗಣೆಗಾಗಿ ಮೀಸಲಿರಿಸಿದ್ದ 53,637 ಕೋ.ರೂ.ಗಳನ್ನು ಒಳಗೊಂಡಿದೆ. ವರ್ಗಾವಣೆಗೊಂಡಿರುವ ಮೊತ್ತವು ಐದು ವರ್ಷಗಳ ಸರಾಸರಿಯಾದ 53,000 ಕೋ.ರೂ.ಗಳ ಮೂರು ಪಟ್ಟಿಗೂ ಅಧಿಕವಾಗಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News