ಹೆತ್ತವರ ಈ 5 ಅಭ್ಯಾಸಗಳು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ

Update: 2019-08-29 15:56 GMT

ತಮ್ಮ ಮಕ್ಕಳನ್ನು ಮುದ್ದು ಮಾಡಲು ಬಯಸದ ಹೆತ್ತವರಿಲ್ಲ,ಆದರೆ ಅತಿಯಾದ ಮುದ್ದು ಮಗುವಿನ ಬೆಳವಣಿಗೆಯ ಆರಂಭಿಕ ವರ್ಷಗಳಲ್ಲಿ ಸಮಸ್ಯೆಯಾಗಬಹುದು ಎನ್ನುವುದು ನಿಮಗೆ ಗೊತ್ತೇ? ಹೆತ್ತವರು ಆಗಾಗ್ಗೆ ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳು ಮಗುವಿನ ಮನಸ್ಸಿನ ಮೇಲೆ ದೀರ್ಘಕಾಲಿಕ ಪರಿಣಾಮಗಳನ್ನುಂಟು ಮಾಡುತ್ತವೆ. ಈ ತಪ್ಪುಗಳು ಮಗುವಿನ ಬೆಳವಣಿಗೆಯಲ್ಲಿ ಕೆಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತವೆ.

 ಮಗುವಿನ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುವುದಲ್ಲ,ಅದು ತನ್ನ ಹೆತ್ತವರು ಮತ್ತು ಕುಟುಂಬದ ಇತರ ಸದಸ್ಯರ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯುವಂತೆ ಮಾಡುವುದೂ ಅಗತ್ಯವಾಗಿದೆ. ತಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ಹೆತ್ತವರು ಮಾಡಬಾರದ ಕೆಲವು ತಪ್ಪುಗಳ ಕುರಿತು ಮಾಹಿತಿಯಿಲ್ಲಿದೆ....

ಹೆಲಿಕಾಪ್ಟರ್ ಪೇರೆಂಟಿಂಗ್

 ಹೆತ್ತವರು ತಮ್ಮ ಮಗುವಿನ ಚಲನವಲನಗಳು ಮತ್ತು ಚಟುವಟಿಕೆಗಳ ಮೇಲೆ ನಿಕಟ ನಿಗಾಯಿಡುವುದನ್ನು ‘ಹೆಲಿಕಾಪ್ಟರ್ ಪೇರೆಂಟಿಂಗ್ ’ ಎಂದು ಕರೆಯಲಾಗುತ್ತದೆ. ಹೆತ್ತವರು ಹೆಚ್ಚಾಗಿ ತಮ್ಮ ಮಕ್ಕಳು ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿರುವಾಗ ಈ ಕೆಲಸವನ್ನು ಮಾಡುತ್ತಿರುತ್ತಾರೆ. ತಮ್ಮ ಮಕ್ಕಳ ಬಗ್ಗೆ ಅತಿಯಾದ ರಕ್ಷಣಾತ್ಮಕ ಧೋರಣೆ ಅವರದಾಗಿರುತ್ತದೆ ಮತ್ತು ಸದಾ ತಮ್ಮ ಮಕ್ಕಳು ಎಲ್ಲಿದ್ದಾರೆ ಎಂಬ ಜಿಜ್ಞಾಸೆಯಲ್ಲಿಯೇ ಇರುತ್ತಾರೆ. ಇದು ಮಕ್ಕಳಿಗೆ ಕಿರಿಕಿರಿಯನ್ನುಂಟು ಮಡುತ್ತದೆ ಮತ್ತು ಹಲವಾರು ಸಂದರ್ಭಗಳಲ್ಲಿ ಅವರು ಸುಳ್ಳು ಹೇಳುವಂತೆ ಮಾಡುತ್ತದೆ. ಇದರಿಂದ ಮಕ್ಕಳು ತಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎನ್ನುವುದು ತಿಳಿಯದೆ ತೊಳಲಾಡುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಮಕ್ಕಳು ಹೆತ್ತವರನ್ನು ಅವಲಂಬಿಸಿರುತ್ತಾರೆ ಮತ್ತು ಇದು ನಿರ್ಧಾರವನ್ನು ತೆಗೆದುಕೊಳ್ಳುವ ಅವರ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಹೆತ್ತವರು ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಅವರು ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಬೇಕೇ ಹೊರತು ಪ್ರತಿ ಸಣ್ಣ ವಿಷಯಕ್ಕೂ ಅವರ ಮೇಲೆ ಮುಗಿಬೀಳಬಾರದು.

ಇತರರೊಂದಿಗೆ ಹೋಲಿಕೆ ಬೇಡ

ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಿ ಹೀಗಳೆಯುವುದು ಹೆತ್ತವರು ಮಾಡುವ ಪ್ರಮುಖ ತಪ್ಪು ಆಗಿದೆ. ಇದು ಮಕ್ಕಳಲ್ಲ್ಲಿ ನೋವನ್ನುಂಟು ಮಾಡುವುದು ಮಾತ್ರವಲ್ಲ,ಇತರರನ್ನುಹೋಲಿಸಿ ಅವರ ಕೊರತೆಗಳನ್ನು ಪಟ್ಟಿ ಮಾಡುವುದರಿಂದ ಅವರ ಆತ್ಮಗೌರವಕ್ಕೂ ಧಕ್ಕೆಯುಂಟಾಗುತ್ತದೆ. ಇದು ಮಕ್ಕಳು ಇತರ ಮಕ್ಕಳ ಬಗ್ಗೆ ದ್ವೇಷ ಬೆಳೆಸಿಕೊಳ್ಳಲು ಕಾರಣವಾಗುತ್ತದೆ ಮತ್ತು ಹೆತ್ತವರ ಬಗ್ಗೆ ಪ್ರೀತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಹೆತ್ತವರ ಈ ಅಭ್ಯಾಸವು ಮಕ್ಕಳಲ್ಲಿ ತಾವು ನಿರುಪಯುಕ್ತರು ಎಂಬ ಭಾವನೆಯನ್ನೂ ಉಂಟು ಮಾಡಬಲ್ಲದು. ಹೀಗಾಗಿ ಹೆತ್ತವರು ಇತರ ಮಕ್ಕಳೊಂದಿಗೆ ಹೋಲಿಸುವ ಬದಲು ತಮ್ಮ ಮಕ್ಕಳ ಸಾಧನೆಯ ಬಗ್ಗೆ ವಿವರಿಸಿ ಹೇಳಬೇಕು ಮತ್ತು ಅವರ ತಪ್ಪುಗಳನ್ನು ಸುಧಾರಿಸಲು ಪ್ರಯತ್ನಿಸಬೇಕು.

ಅಣಕಿಸಬೇಡಿ

ಹಲವಾರು ಸಂದರ್ಭಗಳಲ್ಲಿ ಹೆತ್ತವರು ತಮಗೆ ಗೊತ್ತಿಲ್ಲದೆಯೇ ಮಕ್ಕಳ ರೂಪ,ತೂಕ,ಚರ್ಮದ ಬಣ್ಣ ಅಥವಾ ವರ್ತನೆಯ ಬಗ್ಗೆ ಟೀಕೆಗಳನ್ನೋ ಅಣಕಗಳನ್ನೋ ಮಾಡುತ್ತಿರುತ್ತಾರೆ. ಇದರಿಂದ ತಮ್ಮನ್ನು ಹಂಗಿಸಲಾಗುತ್ತಿದೆ ಎಂಬ ಭಾವನೆ ಮಕ್ಕಳಲ್ಲಿ ಮೂಡತೊಡಗುತ್ತದೆ. ಮಕ್ಕಳನ್ನು ಹಂಗಿಸಲು ಹೆತ್ತವರು ಎಂದೂ ಯೋಚಿಸದಿದ್ದರೂ ಅವರ ಈ ವರ್ತನೆ ಮಕ್ಕಳನ್ನು ಬೆಳೆಸುವುದರಲ್ಲಿ ಕೆಲವು ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಇಂತಹ ಪ್ರಕರಣಗಳಲ್ಲಿ ಮಕ್ಕಳು ಆತಂಕ,ಒತ್ತಡ,ಗೀಳು ವರ್ತನೆ ಮತ್ತು ಖಿನ್ನತೆಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ.

ಎಲ್ಲದಕ್ಕೂ ಹುಚ್ಚು ಪ್ರಶಂಸೆ ಬೇಡ

 ಮಕ್ಕಳು ಯಶಸ್ಸು ಸಾಧಿಸಿದಾಗ ಮತ್ತು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸಬೇಕು ನಿಜ. ಆದರೆ ಮಕ್ಕಳ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ವಿನಾಕಾರಣ ಹೊಗಳುವುದು ದೀರ್ಘಾವಧಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಹೆತ್ತವರು ಆಗಾಗ್ಗೆ ತಮ್ಮ ಮಕ್ಕಳ ಕುರಿತು ಅತಿಯಾದ ರಕ್ಷಣಾತ್ಮಕ ಧೋರಣೆ ಪ್ರದರ್ಶಿಸುತ್ತಿರುತ್ತಾರೆ,ಇದರಿಂದ ತಾವು ಯಾವಾಗಲೂ ಸರಿ ಎಂಬ ಭಾವನೆಯನ್ನು ಮಕ್ಕಳು ಬೆಳೆಸಿಕೊಳ್ಳುವಂತಾಗುತ್ತದೆ. ಇದು ಮಕ್ಕಳ ಚಿಂತನಾ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ ಹಾಗೂ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅವರಿಗೆ ಕಷ್ಟ ವಾಗುತ್ತದೆ. ತರಗತಿಗಳಲ್ಲಿ ಒಳ್ಳೆಯ ಅಂಕಗಳ ಗಳಿಕೆ,ಸ್ವಚ್ಛತೆಯನ್ನು ಕಾಯ್ದುಕೊಳ್ಳುವಿಕೆ ಇತ್ಯಾದಿ ಒಳ್ಳೆಯ ಕೆಲಸಗಳಿಗೆ ಮಕ್ಕಳನ್ನು ಪ್ರಶಂಸಿಸಬೇಕು,ಆದರೆ ಅವರು ತಪ್ಪು ಕೆಲಸಗಳನ್ನು ಮಾಡಿದಾಗ ಅದನ್ನು ಎತ್ತಿತೋರಿಸಿ ಬೈಯಲು ಹಿಂಜರಿಕೆ ಬೇಡ. ಒಳ್ಳೆಯ ಕೆಲಸಗಳ ಮೂಲಕ ಹೊಗಳಿಕೆಯನ್ನು ಗಳಿಸುವುದು ಎಷ್ಟು ಮುಖ್ಯ ಎನ್ನುವುದನ್ನು ಹೆತ್ತವರು ಮಕ್ಕಳಿಗೆ ತಿಳಿಸಬೇಕು.

ಕೂಗಬೇಡಿ

ತಾವು ಬೊಬ್ಬೆ ಹೊಡೆದರೆ ಮಕ್ಕಳು ಸರಿಯಾಗುತಾರೆ ಎಂದು ಹೆತ್ತವರು ತಿಳಿದುಕೊಂಡಿದ್ದರೆ ಅವರು ಭ್ರಮಾ ಲೋಕದಲ್ಲಿದ್ದಾರೆ ಎಂದೇ ಅರ್ಥ. ಬೊಬ್ಬೆ ಹೊಡೆಯುವ ಹೆತ್ತವರ ಅಭ್ಯಾಸವು,ಒಂದೇ ಮಕ್ಕಳು ಅದಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ ಇಲ್ಲವೇ ಸಲಹೆ ಕೋರಿ ನಿಮ್ಮ ಬಳಿಗೆ ಬರಲೂ ಅವರು ಹೆದರಿಕೊಳ್ಳುವಂತೆ ಮಾಡುತ್ತದೆ. ಮನೆಯಲ್ಲಿ ಬೊಬ್ಬೆ,ಜಗಳಗಳಿಂದ ಕೂಡಿದ ವಾತಾವರಣದಲ್ಲಿ ಬೆಳೆದ ಮಕ್ಕಳು ಅದನ್ನೇ ಕಲಿತುಕೊಳ್ಳುತ್ತಾರೆ ಮತ್ತು ಸಿಟ್ಟು ಬಂದಾಗ ಅದನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News