ಭಯೋತ್ಪಾದನೆ ಬೆದರಿಕೆ: ಕೊಯಮತ್ತೂರಿನ 5 ಸ್ಥಳಗಳಲ್ಲಿ ಎನ್‌ಐಎ ದಾಳಿ

Update: 2019-08-29 18:09 GMT

ಚೆನ್ನೈ, ಆ. 29: ಭಯೋತ್ಪಾದಕರು ದೇಶದ ಒಳಗೆ ಪ್ರವೇಶಿಸಿದ್ದಾರೆ ಎಂಬ ಬೇಹು ಗಾರಿಕೆ ಮಾಹಿತಿ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಟ್ಟೆಚ್ಚರ ವಹಿಸಿರುವ ನಡುವೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೊಯಂಬತ್ತೂರು ಜಿಲ್ಲೆಯ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಐಸಿಸ್‌ನೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಗಾಕ್ಕೆ ಒಳಗಾಗಿರುವ ಉಮರ್ ಫಾರೂಕ್, ಸನಬಾರ್ ಅಲಿ, ಸಮೀನಾ ಮುಬಿನ್, ಮುಹಮ್ಮದ್ ಯಾಸಿರ್ ಹಾಗೂ ಸದ್ದಾಂ ಹುಸೈನ್‌ಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ.

ಜೂನ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಐಸಿಸ್‌ನ ತಮಿಳುನಾಡು ಘಟಕದ ರೂವಾರಿ ಎಂದು ಹೇಳಲಾದ ಮುಹಮ್ಮದ್ ಅಜರುದ್ದೀನ್‌ನನ್ನು ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಹಾಗೂ ಐಸಿಸ್ ನಂಟು ಶಂಕೆಯಲ್ಲಿ ಇಂದು ದಾಳಿ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಲಷ್ಕರೆ ತಯ್ಯಬ ಸಂಘಟನೆಗೆ ಸೇರಿದ 6 ಸದಸ್ಯರು ರಾಜ್ಯ ಪ್ರವೇಶಿಸಿರುವ ಬಗ್ಗೆ ಬೇಹುಗಾರಿಕೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಭಯೋತ್ಪಾದಕ ಸಂಘಟನೆಗೆ ಸೇರಿದ 6 ಮಂದಿ ಸದಸ್ಯರು ಶ್ರೀಲಂಕಾ ಸಮುದ್ರದ ಮೂಲಕ ರಾಜ್ಯ ಪ್ರವೇಶಿಸಿದ್ದಾರೆ ಎಂದು ಬೇಹುಗಾರಿಕೆ ವರದಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಹಾಗೂ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಗುಂಪಿನಲ್ಲಿ ಓರ್ವ ಪಾಕಿಸ್ತಾನ ಪ್ರಜೆ ಹಾಗೂ ಐವರು ಶ್ರೀಲಂಕಾದ ತಮಿಳು ಮುಸ್ಲಿಮರು ಒಳಗೊಂಡಿದ್ದಾರೆ ಎಂದು ಮಾಹಿತಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News