×
Ad

'ಆನ್‌ಲೈನ್ ಸಲೂನ್' ವಿರುದ್ಧ ಪ್ರತಿಭಟನೆ: ಸೇವೆ ಸ್ಥಗಿತಗೊಳಿಸಲು ಸರಕಾರಕ್ಕೆ ಆಗ್ರಹ

Update: 2019-08-30 21:53 IST

ಬೆಂಗಳೂರು, ಆ.30: ಆನ್‌ಲೈನ್ ಸಲೂನ್ ಸೇವೆ ಪರಿಣಾಮ, ಪಾರಂಪರಿಕ ವೃತ್ತಿಯಲ್ಲಿರುವ ಲಕ್ಷಾಂತರ ಮಂದಿ ಸವಿತಾ ಸಮಾಜದ ಸದಸ್ಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಉಂಟಾಗಿದ್ದು, ಈ ಕೂಡಲೇ ಆನ್‌ಲೈನ್ ಸೇವೆ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಗರದ ಪುರಭವನದ ಮುಂದಾಗ ಜಮಾಯಿಸಿದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸದಸ್ಯರು, ಸ್ಥಳದಲ್ಲಿ ತಲೆ ಕೂದಲು ಬೋಳಿಸುವ ಮುಖಾಂತರ ಆನ್‌ಲೈನ್ ಸೇವೆ ವಿರೋಧಿಸಿ ಆಕ್ರೋಶ ಹೊರಹಾಕಿದರು.

ಕಳೆದ 30-40 ವರ್ಷಗಳಿಂದ ಮಳಿಗೆಗಳಲ್ಲಿ ನಾಲ್ಕು ಕನ್ನಡಿಗಳನ್ನಿಟ್ಟು ಪಾರದರ್ಶಕವಾಗಿ ವೃತ್ತಿಯನ್ನು ಮಾಡಿಕೊಂಡು ಬಂದಿದ್ದೇವೆ. ಮೋಸ ಮಾಡದ ವೃತ್ತಿಯೆಂದರೆ ಕ್ಷೌರಿಕ ವೃತ್ತಿ. ಇದನ್ನು ಆನ್‌ಲೈನ್ ವ್ಯವಸ್ಥೆಯಲ್ಲಿ ದುರುಪಯೋಗ ಪಡಿಸಿಕೊಂಡರೆ ವೃತ್ತಿವಂತರಿಗೆ ಅಗೌರವ ತೋರಿದಂತೆ. ಬಂಡವಾಳಶಾಹಿಗಳಿಂದ ನಾಗರಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಆನ್‌ಲೈನ್ ವ್ಯವಸ್ಥೆ ಹಣಕಾಸು ವರ್ಗಾವಣೆಯಲ್ಲಿ ಮಾತ್ರ ಬಳಕೆಯಾಗಬೇಕು. ಕುಲ ವೃತ್ತಿಯ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಆನ್‌ಲೈನ್ ವ್ಯವಸ್ಥೆಯಲ್ಲಿ ಹಲವಾರು ಸಾಮಾಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕೊಡುವುದು ಸಾಮಾನ್ಯ. ಆದರೆ, ಹಲವು ಬಂಡವಾಳಶಾಹಿ ಕಂಪೆನಿಗಳು ನಗರದಲ್ಲಿ ಆನ್‌ಲೈನ್‌ನಲ್ಲಿ ಸಲೂನ್ ಸೇವೆ ತೆರೆದಿವೆ. ಈ ಸೇವೆಯನ್ನು ಮನೆಯ ಒಳಗೆ ಹೋಗಿ ಮಾಡುವುದರಿಂದ ಅನೈತಿಕ ಚಟುವಟಿಕೆಗಳು ನಡೆಯುವ ಸಂಭವವಿದೆ. ಈಗಾಗಲೇ ಕೆಲವೊಂದು ಸಂಸ್ಥೆಗಳು ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಜಗಜ್ಜಾಹೀರಾತಾಗಿದೆ. ಹಾಗಾಗಿ ಸರಕಾರ ಆನ್‌ಲೈನ್ ಹೋಮ್ ಸರ್ವೀಸ್ ಹೆಸರಿನ ಸಲೂನ್ ಸೇವೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎಂ.ಸಿ.ವೇಣುಗೋಪಾಲ್, ನರೇಶ್, ಸಂಘಟನೆ ರಾಜ್ಯಾಧ್ಯಕ್ಷ ಯು.ಕೃಷ್ಣಮೂರ್ತಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News