ಅವೈಜ್ಞಾಕವಾಗಿ ಗುಂಡಿ ಮುಚ್ಚಿದರೆ ಅಧಿಕಾರಿ, ಗುತ್ತಿಗೆದಾರರಿಗೆ ದಂಡ: ಮೇಯರ್ ಗಂಗಾಂಬಿಕೆ

Update: 2019-08-30 17:42 GMT

ಬೆಂಗಳೂರು, ಆ.30: ರಾಜಧಾನಿಯಲ್ಲಿ ಸಮರ್ಪಕವಾಗಿ ರಸ್ತೆ ಗುಂಡಿ ಮುಚ್ಚಲಾಗಿದೆಯೇ ಎಂದು ಸೆ.6ರಿಂದ ಅನಿರೀಕ್ಷಿತ ತಪಾಸಣೆ ಪ್ರಾರಂಭಿಸಲಾಗುತ್ತಿದ್ದು, ಅವೈಜ್ಞಾನಿಕವಾಗಿ ಗುಂಡಿ ಮುಚ್ಚಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಬಿಬಿಎಂಪಿ ಕಚೇರಿಯಲ್ಲಿ ಏರ್ಪಡಿಸಿದ್ದ ರಸ್ತೆ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಒಂದು ಗುಂಡಿ ಕೂಡ ಕಾಣಿಸಬಾರದು ಎಂದು ಹೈಕೋರ್ಟ್ ಪಾಲಿಕೆಗೆ ಸೂಚನೆ ನೀಡಿದೆ. ಆದರೂ ರಸ್ತೆ ಗುಂಡಿಗಳು ಸಮರ್ಪಕವಾಗಿ ಮುಚ್ಚಿಲ್ಲ. ಗುಂಡಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು. ಜೊತೆಗೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಸೂಚನೆ ನೀಡಬೇಕು. ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಬರುವ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕೈಗೆತ್ತಿಕೊಂಡಿರುವ ಪರಿಣಾಮ ಆ ರಸ್ತೆಗಳ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರಿಂದಲೇ ಮಾಡಿಸಬೇಕು ಎಂದು ಸೂಚನೆ ನೀಡಿದರು.

ರಸ್ತೆ ಗುಂಡಿಗಳು ಬಿದ್ದಿರುವ ಬಗ್ಗೆ ಸಹಾಯ ಆ್ಯಪ್ (sahaaya app)  ನಲ್ಲಿ ಸಾರ್ವಜನಿಕರು ದಾಖಲಿಸಿರುವ ದೂರುಗಳನ್ನು ಸಂಗ್ರಹಿಸಿ ಸ್ಥಳ ಪರಿವೀಕ್ಷಣೆ ಮಾಡಿ ತಕ್ಷಣ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಅದಕ್ಕೆ ಪಾಲಿಕೆ ಪ್ರಧಾನ ಅಭಿಯಂತರ ಎಂ.ಆರ್.ವೆಂಕಟೇಶ್ ರವರು ಪ್ರತಿಕ್ರಿಯಿಸಿ, ನಿರ್ವಹಣಾ ಅವಧಿ ಬಾಕಿಯಿರುವ ರಸ್ತೆಗಳಲ್ಲಿ ಗುತ್ತಿಗೆದಾರರಿಂದಲೇ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ. ಅವಧಿ ಮುಗಿದ ಕಡೆ ಪಾಲಿಕೆಯಿಂದ ಮುಚ್ಚಲಾಗುತ್ತಿದೆ ಎಂದು ಹೇಳಿದರು.

ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದಲ್ಲಿ ಎಂಜಿನಿಯರ್‌ಗಳಿಗೆ ಒಂದು ಗುಂಡಿಗೆ 1 ಸಾವಿರ ರೂ. ದಂಡ ವಿಧಿಸಲಾಗುವುದು. ಅಲ್ಲದೆ, ಸಹಾಯ ಆ್ಯಪ್‌ನಲ್ಲಿ ದಾಖಲಾಗುವ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

-ಎಂ.ಆರ್.ವೆಂಕಟೇಶ್, ಪಾಲಿಕೆಯ ಪ್ರಧಾನ ಎಂಜಿನಿಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News