ಅಸ್ಸಾಂನ ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟ: 19 ಲಕ್ಷಕ್ಕೂ ಅಧಿಕ ಮಂದಿ ಹೊರಕ್ಕೆ

Update: 2019-08-31 14:45 GMT

ಗುವಾಹಟಿ,ಆ.31: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಂತಿಮ ಪಟ್ಟಿಯು ಶನಿವಾರ ಬೆಳಿಗ್ಗೆ ಪ್ರಕಟಗೊಂಡಿದ್ದು,19 ಲಕ್ಷಕ್ಕೂ ಅಧಿಕ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ತಾವು ಭಾರತೀಯ ಪ್ರಜೆಗಳು ಎನ್ನುವುದನ್ನು ಸಾಬೀತುಗೊಳಿಸುವ ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಮೇಲ್ಮನವಿಗಳನ್ನು ಸಲ್ಲಿಸಲು 120 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಶಾಸನಬದ್ಧ ಪ್ರಜೆಗಳನ್ನು ಗುರುತಿಸುವುದು ಮತ್ತು ಅಕ್ರಮ ವಲಸಿಗರನ್ನು ನಿವಾರಿಸುವುದು ಎನ್‌ಆರ್‌ಸಿಯ ಉದ್ದೇಶವಾಗಿದ್ದು,ಅಂತಿಮ ಪಟ್ಟಿಯು 3.11 ಕೋಟಿ ಜನರ ಹೆಸರುಗಳನ್ನೊಳಗೊಂಡಿದೆ. ಇದು ದೇಶದಲ್ಲಿ 1951ರ ಬಳಿಕ ಪ್ರಕಟಗೊಂಡಿರುವ ಇಂತಹ ಎರಡನೇ ಪಟ್ಟಿಯಾಗಿದೆ. ಸರಕಾರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬೆನ್ನಲ್ಲೇ ಹೊರಬಿದ್ದಿರುವ ಎನ್‌ಆರ್‌ಸಿ ಪ್ರಧಾನಿ ನರೇಂದ್ರ ಮೋದಿಯವರ ದ್ವಿತೀಯ ಅಧಿಕಾರಾವಧಿಯ ಬೃಹತ್ ಕ್ರಮಗಳಲ್ಲಿ ಒಂದಾಗಿದೆ.

ಕಾನೂನಿನಲ್ಲಿಯ ಎಲ್ಲ ಅವಕಾಶಗಳೂ ಬಾಗಿಲು ಮುಚ್ಚಿಕೊಳ್ಳುವವರೆಗೆ ಎನ್‌ಆರ್‌ಸಿಯಲ್ಲಿ ಹೆಸರುಗಳಿಲ್ಲದವರನ್ನು ವಿದೇಶಿಯರೆಂದು ಘೋಷಿಸಲಾಗುವುದಿಲ್ಲ ಎಂದು ಸರಕಾರವು ತಿಳಿಸಿದೆ.

ಅಂತಿಮ ಪಟ್ಟಿಯಲ್ಲಿ ಹೆಸರುಗಳಿಲ್ಲದವರು ವಿದೇಶಿಯರ ನ್ಯಾಯಾಧಿಕರಣದಲ್ಲಿ ಮೇಲ್ಮನವಿಗಳನ್ನು ಸಲ್ಲಿಸಬಹುದು. ಪ್ರತಿಯೊಬ್ಬರ ಅಹವಾಲುಗಳನ್ನು ಆಲಿಸಲು ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಎನ್‌ಆರ್‌ಸಿ ಸಮನ್ವಯಕಾರ ಪ್ರತೀಕ ಹಜೇಲಾ ಅವರು,ಮೇಲ್ಮನವಿಗಳ ಸಲ್ಲಿಕೆಗೆ ಗಡುವನ್ನು 60ರಿಂದ 120 ದಿನಗಳಿಗೆ ವಿಸ್ತರಿಸಲಾಗಿದೆ ಎಂದಿದ್ದಾರೆ.

 ಎನ್‌ಆರ್‌ಸಿಯಿಂದ ಹೊರಗುಳಿದವರಲ್ಲಿ ರಾಜ್ಯದ ಎರಡನೇ ಅತ್ಯಂತ ಪ್ರಭಾವಿ ಪ್ರತಿಪಕ್ಷವಾಗಿರುವ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್)ನ ಶಾಸಕ ಅನಂತ ಕುಮಾರ ಮಾಲೋ ಅವರೂ ಸೇರಿದ್ದಾರೆ.

ಜನರು ತಮ್ಮ ಹೆಸರುಗಳು ಅಂತಿಮ ಪೌರತ್ವ ಪಟ್ಟಿಯಲ್ಲಿವೇ ಎನ್ನುವುದನ್ನು ತಿಳಿದುಕೊಳ್ಳಲು ಎನ್‌ಆರ್‌ಸಿಯ ಅಧಿಕೃತ ಜಾಲತಾಣವನ್ನು ಪರಿಶೀಲಿಸಬಹುದು. ಬೆಳಿಗ್ಗೆ ಪಟ್ಟಿ ಪ್ರಕಟಗೊಂಡ ಬೆನ್ನಿಗೇ ಈ ಜಾಲತಾಣ ಅಪಾರ ದಟ್ಟಣೆಯಿಂದಾಗಿ ಸ್ಥಗಿತಗೊಂಡಿತ್ತು. ಜನರು ತಮ್ಮ ಹೆಸರುಗಳನ್ನು ಪರಿಶೀಲಿಸಲು ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ತನ್ಮಧ್ಯೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಶನಿವಾರ ಮಧ್ಯಾಹ್ನ ಪುನರ್‌ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.

ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹೊಂದಿರುವ ರಾಜ್ಯಾದ್ಯಂತ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದ್ದು, ಸಾವಿರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ರಾಜಧಾನಿ ಗುವಾಹಟಿ ಸೇರಿದಂತೆ ಈ ಹಿಂದೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.

 ಕಳೆದ ಜುಲೈನಲ್ಲಿ ಪ್ರಕಟಗೊಂಡಿದ್ದ ಎನ್‌ಆರ್‌ಸಿ ಪಟ್ಟಿಯಿಂದ 40 ಲಕ್ಷಕ್ಕೂ ಅಧಿಕ ಜನರು ಹೊರಗುಳಿದಿದ್ದರು. ತಮ್ಮ ಪೌರತ್ವವನ್ನು ರುಜುವಾತುಗೊಳಿಸುವ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊರಬಿದ್ದಿರುವ ಅಂತಿಮ ಪಟ್ಟಿಯಿಂದೀಗ 19 ಲಕ್ಷ ಜನರು ಹೊರಗುಳಿದಿದ್ದಾರೆ.

  ವಿವಾದಗಳ ವಿಚಾರಣೆಗಾಗಿ ಹಂತ ಹಂತವಾಗಿ ಕನಿಷ್ಠ 1,000 ನ್ಯಾಯಾಧಿಕರಣಗಳನ್ನು ಸ್ಥಾಪಿಸಲಾಗುವುದು ಎಂದು ಗೃಹಸಚಿವಾಲಯವು ತಿಳಿಸಿದೆ. 100 ನ್ಯಾಯಾಧಿಕರಣಗಳು ಈಗಾಗಲೇ ಆರಂಭಗೊಂಡಿದ್ದು,ಸೆಪ್ಟೆಂಬರ್ ಮೊದಲ ವಾರದಲ್ಲಿ ಇನ್ನೂ 200 ನ್ಯಾಯಾಧಿಕರಣಗಳು ಆರಂಭಗೊಳ್ಳಲಿವೆ. ನ್ಯಾಯಾಧಿಕರಣದಲ್ಲಿ ವಿಫಲಗೊಂಡ ವ್ಯಕ್ತಿಯು ಉಚ್ಚ ನ್ಯಾಯಾಲಯ ಮತ್ತು ಬಳಿಕ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲು ಅವಕಾಶವಿದೆ.

ಪಟ್ಟಿಯಿಂದ ಹೊರಗುಳಿದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಕಾನೂನು ನೆರವನ್ನು ಒದಗಿಸುವುದಾಗಿ ಕೇಂದ್ರವು ತಿಳಿಸಿದೆ. ಎನ್‌ಆರ್‌ಸಿಯಿಂದ ಹೊರಗುಳಿದಿರುವ ಕೆಲವು ‘ನಿಜವಾದ ’ಪೌರರಿಗೆ ನೆರವಾಗಲು ಆಡಳಿತ ಬಿಜೆಪಿ ಮತ್ತು ಅದರ ಎದುರಾಳಿ ಕಾಂಗ್ರೆಸ್ ಯೋಜಿಸಿವೆ. ಹಲವಾರು ಎನ್‌ಜಿಒಗಳೂ ಪಟ್ಟಿಯಿಂದ ಹೊರಗುಳಿದವರಿಗೆ ಕಾನೂನು ನೆರವು ನೀಡಲು ಮುಂದೆ ಬಂದಿವೆ.

ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ಗಡಿಪಾರುಗೊಳಿಸಬೇಕೆಂಬ ಬೇಡಿಕೆಯೊಂದಿಗೆ 1979-1985ರ ನಡುವೆ ಆರು ವರ್ಷಗಳ ಸುದೀರ್ಘ ಚಳವಳಿಗೆ ಅಸ್ಸಾಂ ಸಾಕ್ಷಿಯಾಗಿದ್ದರಿಂದ ಎನ್‌ಆರ್‌ಸಿಯು ಅಸ್ಸಾಂ ನಿವಾಸಿಗಳಿಗೆ ತುಂಬ ಮಹತ್ವದ್ದಾಗಿದೆ.

ಭಾರೀ ಸಂಖ್ಯೆಯ ಬಂಗಾಳಿ ಹಿಂದುಗಳ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವುದಕ್ಕೆ ಹಲವಾರು ಬಿಜೆಪಿ ನಾಯಕರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪಟ್ಟಿಯಲ್ಲಿ ಸೇರಿರುವ ವಿದೇಶಿಯರನ್ನು ತೆಗೆದು ಹೊರಗುಳಿದಿರಬಹುದಾದ ನಿಜವಾದ ಭಾರತೀಯರನ್ನು ಸೇರಿಸಲು ಕಾನೂನೊಂದನ್ನು ತರಲು ಕೇಂದ್ರವು ಪರಿಗಣಿಸಬಹುದು ಎಂದು ಸೋನೊವಾಲ್ ಕಳೆದ ವಾರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಹೇಳಿದ್ದರು.

ಅಸ್ಸಾಮಿನಲ್ಲಿ 1951ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಎನ್‌ಆರ್‌ಸಿಯನ್ನು 1971,ಮಾ.25ರ ಬಳಿಕ ಬಾಂಗ್ಲಾದೇಶದಿಂದ ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿರುವವರನ್ನು ಗುರುತಿಸಲು ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಪರಿಷ್ಕರಿಸಲಾಗುತ್ತಿದೆ.

► 19 ಲಕ್ಷಕ್ಕೂ ಅಧಿಕ ಜನರ ಭವಿಷ್ಯವೇನಾಗಲಿದೆ?

ಎನ್‌ಆರ್‌ಸಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದ 3.3 ಕೋ.ಗೂ ಅಧಿಕ ಜನರ ಪೈಕಿ 3.11 ಕೋ.ಜನರ ಹೆಸರುಗಳು ಅಂತಿಮ ಪಟ್ಟಿಯಲ್ಲಿವೆ. ಪಟ್ಟಿಯಿಂದ ಹೊರಗುಳಿದವರು ವಿದೇಶಿಯರ ನ್ಯಾಯಾಧಿಕರಣಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು 120 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಅವರಿಗೆ ಕಾನೂನು ನೆರವು ಒದಗಿಸುವುದಾಗಿಯೂ ಸರಕಾರವು ಹೇಳಿದೆ.

ಆದರೆ,ಹೆಚ್ಚು ಜನರನ್ನು ವಿದೇಶಿಯರೆಂದು ಘೋಷಿಸಿರುವುದಕ್ಕಾಗಿ ನ್ಯಾಯಾಧಿಕರಣಗಳ ಸದಸ್ಯರನ್ನು ಪುರಸ್ಕರಿಸಲಾಗಿದೆ ಎಂದು ಸುದ್ದಿ ಜಾಲತಾಣ ‘ಸ್ಕ್ರೋಲ್ ಡಾಟ್ ಇನ್’ವರದಿ ಮಾಡಿದೆ. ಬಂಗಾಲಿ ಭಾಷಿಕ ಸಮುದಾಯಗಳು,ನಿರ್ದಿಷ್ಟವಾಗಿ ಮುಸ್ಲಿಮರ ವಿರುದ್ಧ ತಾರತಮ್ಯದ ನೀತಿಯನ್ನು ಅನುಸರಿಸಲಾಗಿದೆ ಎನ್ನುವ ಆತಂಕಕಾರಿ ಅಂಶವನ್ನು ನಾಲ್ಕು ವಿದೇಶಿಯರ ನ್ಯಾಯಾಧಿಕರಣಗಳ ದತ್ತಾಂಶಗಳು ತೋರಿಸಿವೆ.

ಮೇಲ್ಮನವಿಗಳನ್ನು ಸಲ್ಲಿಸುವವರು ತಮ್ಮ ಪೂರ್ವಜರು 1971,ಮಾ.25ರಂದು ಅಥವಾ ಅದಕ್ಕೂ ಮುನ್ನ ಭಾರತದ ಪ್ರಜೆಗಳಾಗಿದ್ದರು ಎನ್ನುವುದನ್ನು ಸಾಬೀತುಗೊಳಿಸಬೇಕಿದೆ. ಅಂತಿಮ ಪಟ್ಟಿಯಿಂದ ಹೊರಗುಳಿದವರ ಮೇಲ್ಮನವಿಗಳ ಕುರಿತು ತೀರ್ಪುಗಳನ್ನು ನ್ಯಾಯಾಧಿಕರಣಗಳು ಘೋಷಿಸುವವರೆಗೆ ಯಾವುದೇ ಕಾರಣಕ್ಕೂ ಅವರನ್ನು ಬಂಧಿಸಲಾಗುವುದಿಲ್ಲ ಎಂದು ರಾಜ್ಯ ಸರಕಾರವು ನೋಟಿಸ್‌ನಲ್ಲಿ ಸ್ಪಷ್ಟಪಡಿಸಿದೆ.

ಬಂಧನ ಕೇಂದ್ರಗಳ ಕೊರತೆ

ಅಸ್ಸಾಮಿನಲ್ಲಿ ವಿದೇಶಿಯರೆಂದು ಘೋಷಿಸಲ್ಪಟ್ಟವರ ಬಂಧನ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿರುವ ಆರು ಜೈಲುಗಳು ಈಗಾಗಲೇ ದಟ್ಟಣೆಯ ಸಮಸ್ಯೆ ಎದುರಿಸುತ್ತಿದ್ದು,ಪ್ರತಿಯೊಂದರಲ್ಲಿ ಸಾವಿರಕ್ಕೂ ಹೆಚ್ಚು ಕೈದಿಗಳಿದ್ದಾರೆ. ಬಂಧನಲ್ಲಿರುವಾಗ 25 ಜನರು ಸಾವನ್ನಪ್ಪಿದ್ದಾರೆ. ಗೋಲಪಾರಾದಲ್ಲಿ 3,000 ಬಂಧಿತರನ್ನು ಇರಿಸುವ ಸಾಮರ್ಥ್ಯದ ಬೃಹತ್ ಬಂಧನ ಕೇಂದ್ರದ ನಿರ್ಮಾಣಕ್ಕಾಗಿ ರಾಜ್ಯ ಸರಕಾರವು ಕಳೆೆದ ವರ್ಷ ಒಪ್ಪಿಗೆ ಪಡೆದುಕೊಂಡಿತ್ತು. ಅದು ಇನ್ನೂ ಹತ್ತು ಬಂಧನ ಕೇಂದ್ರಗಳ ಸ್ಥಾಪನೆಗೆ ಸಜ್ಜಾಗುತ್ತಿದೆ.

► ಗಡಿಪಾರು ಕ್ರಮ ಇಲ್ಲ

1985ರಲ್ಲಿ ಅಸ್ಸಾ ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಅಕ್ರಮ ವಲಸಿಗರ ವಿರುದ್ಧದ ಸುದೀರ್ಘ ಚಳವಳಿ ಅಂತ್ಯಗೊಂಡಿತ್ತು. ಈ ಒಪ್ಪಂದದಡಿ 1971,ಮಾ.24ರ ಬಳಿಕ ಅಸ್ಸಾಂ ಪ್ರವೇಶಿಸಿದವರನ್ನು ವಿದೇಶಿಯರು ಎಂದು ಘೋಷಿಸಿ ಗಡಿಪಾರು ಮಾಡಬೇಕಿದೆ. ಆದರೆ ಭಾರತವು ಬಾಂಗ್ಲಾದೇಶದೊಂದಿಗೆ ವಿಧ್ಯುಕ್ತ ಗಡಿಪಾರು ಒಪ್ಪಂದವನ್ನು ಹೊಂದಿಲ್ಲ. ಕಳೆದ ವಾರ ಆ ರಾಷ್ಟ್ರಕ್ಕೆ ಅಧಿಕೃತ ಭೇಟಿ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಅಸ್ಸಾಂ ಎನ್‌ಆರ್‌ಸಿಯು ಭಾರತದ ಆಂತರಿಕ ವಿಷಯವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಗಡಿಪಾರು ಸಾಧ್ಯತೆಯಿಲ್ಲದಿರುವುದರಿಂದ ಭಾರತೀಯ ಪ್ರಜೆಗಳಲ್ಲದವರಿಗೆ ವರ್ಕ್ ಪರ್ಮಿಟ್‌ಗಳನ್ನು ಮಂಜೂರು ಮಾಡುವ ಹಳೆಯ ಪ್ರಸ್ತಾವವೊಂದು ಈಗ ಮತ್ತೆ ಸದ್ದು ಮಾಡುತ್ತಿದರೆ.

► ಸುಪ್ರೀಂ ಮೆಟ್ಟಿಲನ್ನೇರಲು ಆಸು ನಿರ್ಧಾರ

 ಅಂತಿಮ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆ ತನಗೆ ಅಸಮಾಧಾನವನ್ನುಂಟು ಮಾಡಿದೆ ಮತ್ತು ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಅಖಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಆಸು) ಹೇಳಿದೆ.

ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೆಲವು ಲೋಪಗಳಿರುವಂತಿದೆ. ಇದು ಅಪೂಣರ್ ಎನ್‌ಆರ್‌ಸಿ ಎನ್ನುವುದು ನಮ್ಮ ಅಭಿಪ್ರಾಯ. ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆಯು ಅಧಿಕಾರಿಗಳು ವಿವಿಧ ಸಂದರ್ಭಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದ ಸಂಖ್ಯೆಗಳ ಹತ್ತಿರಕ್ಕೂ ಇಲ್ಲ ಎಂದು ಆಸು ಪ್ರಧಾನ ಕಾರ್ಯದರ್ಶಿ ಲುರಿಂಜ್ಯೋತಿ ಗೊಗೊಯಿ ಹೇಳಿದರು.

ಈ ಎನ್‌ಆರ್‌ಸಿಯೊಂದಿಗೆ ಮುಂದಿನ 30 ವರ್ಷಗಳಲ್ಲಿಯೂ ಅಸ್ಸಾಮಿನಿಂದ ಅಕ್ರಮ ವಿದೇಶಿಯರನ್ನು ಗಡಿಪಾರು ಗೊಳಿಸುವುದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕರಡು ಎನ್‌ಆರ್‌ಸಿಯ ಮರುದೃಢೀಕರಣ ಕೋರಿ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಐದು ಸಲ ಮೇಲ್ಮನವಿ ಸಲ್ಲಿಸಿದ್ದೆವು,ಆದರೆ ಅವು ತಿರಸ್ಕೃತಗೊಂಡಿದ್ದವು. ಈ ವಿಷಯದಲ್ಲಿ ರಾಷ್ಟ್ರಪತಿಗಳ ಹಸ್ತಕ್ಷೇಪಕ್ಕೆ ಕೋರಲಾಗುವುದು.

► ಅಸ್ಸಾಂ ಪಬ್ಲಿಕ್ ವರ್ಕ್ಸ್

ಎನ್‌ಆರ್‌ಸಿ ಪರಿಷ್ಕರಣೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಿದ್ದ ಸಂಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News