×
Ad

ಸಿ.ಟಿ.ರವಿ ಸಚಿವರಾಗಿರಲು ಅರ್ಹರಲ್ಲ: ಇಲ್ಯಾಸ್ ಮುಹಮ್ಮದ್ ತುಂಬೆ

Update: 2019-08-31 22:46 IST

ಬೆಂಗಳೂರು, ಆ.31: ಕನ್ನಡ ನಾಡ ಧ್ವಜ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಆಕ್ಷೇಪಕಾರಿ ಹೇಳಿಕೆಯಿಂದ ಇಡೀ ಕನ್ನಡ ನುಡಿ, ನೆಲ, ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಮುಂದುವರೆಯುವ ಯಾವ ಅರ್ಹತೆಯೂ ಇಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಸಂಸ್ಕೃತಿ ವೈವಿಧ್ಯತೆಯಲ್ಲಿ ಅನೇಕತೆಯ ಪರಂಪರೆಯನ್ನು ತಿಳಿದ ಯಾರೂ ಕೂಡ ರವಿಯಂತೆ ಮಾತನಾಡಲು ಸಾಧ್ಯವಿಲ್ಲ. ದೇಶದ ರಾಷ್ಟ್ರಧ್ವಜಕ್ಕೆ ಸಕಲ ಗೌರವ, ಮಾನ್ಯತೆ, ಮರ್ಯಾದೆ ನೀಡುವುದರೊಂದಿಗೆ ಕನ್ನಡ ಧ್ವಜವನ್ನೂ ಹೊಂದುವುದು ಸಾಂಸ್ಕೃತಿಕ ವೈವಿಧ್ಯತೆಯ ಅನನ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದ ಏಕತೆಯೊಂದಿಗೆ ಆಯಾ ರಾಜ್ಯ ನುಡಿ, ಸಂಸ್ಕೃತಿಯನ್ನು ಕಾಪಾಡಿ, ಬೆಳೆಸಿ, ಕೊಂಡಾಡುವುದರಿಂದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚುತ್ತಿರುತ್ತದೆ. ಕನ್ನಡ ನಾಡ ಧ್ವಜದೊಂದಿಗೆ ಕನ್ನಡದ ನುಡಿ, ಜಲ, ಜನ, ಮನ, ಹೃದಯವಂತಿಕೆಯ ಸಂಗಮವಿದೆ. ಕನ್ನಡ ಧ್ವಜ ಯಾವತ್ತೂ ಹಾರುತ್ತಲೇ, ಏರುತ್ತಲೇ ಇರುತ್ತದೆ. ಇದು ಸಂವಿಧಾನ ಬದ್ಧ ಸ್ವಾತಂತ್ರ ಹಾಗೂ ಹಕ್ಕಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ಸಿ.ಟಿ.ರವಿ ಹೇಳಿಕೆ ಕನ್ನಡ ನುಡಿ, ಸಂಸ್ಕೃತಿ ಹಾಗೂ ರಾಜ್ಯಕ್ಕೆ ಮಾಡಿದ ಅವಮಾನ. ನಮ್ಮ ನುಡಿ-ನಾಡು ಬಗ್ಗೆ ಕಿಂಚಿತ್ತೂ ಅಭಿಮಾನ ಗೌರವ ಇಲ್ಲದ ವ್ಯಕ್ತಿ ಇಂದು ಕನ್ನಡ ಸಂಸ್ಕೃತಿ ಸಚಿವ ಸ್ಥಾನದಲ್ಲಿರುವುದು ರಾಜ್ಯಕ್ಕೆ ಅವಮಾನ. ಅವರು ತಕ್ಷಣವೇ ಆ ಹುದ್ದೆಯನ್ನು ತ್ಯಜಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News