ಅಮಿತ್ ಶಾ ಮಾತು ಕೇಳದ್ದಕ್ಕಾಗಿ ಡಿಕೆಶಿಗೆ ಕಿರುಕುಳ: ಸಿ.ಎಂ.ಲಿಂಗಪ್ಪ ಆರೋಪ
ರಾಮನಗರ, ಆ.31: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ರಕ್ಷಣೆ ಕೊಟ್ಟಿದ್ದು ಅಮಿತ್ ಶಾಗೆ ಸಿಟ್ಟು ತರಿಸಿತ್ತು. ಈ ದ್ವೇಷದಿಂದ ಡಿ.ಕೆ.ಶಿವಕುಮಾರ್‌ಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲ್‌ಟನ್ ರೆಸಾರ್ಟ್‌ನಲ್ಲಿ ರಕ್ಷಣೆಯಲ್ಲಿದ್ದ ಗುಜರಾತ್‌ನ ಮೂರು ಶಾಸಕರನ್ನು ಬಿಟ್ಟುಬಿಡುವಂತೆ ಅಮಿತ್ ಶಾ ದೂರವಾಣಿ ಮೂಲಕ ಡಿ.ಕೆ.ಶಿವಕುಮಾರ್‌ಗೆ ತಿಳಿಸಿದ್ದರು. ಇವರಿಬ್ಬರ ನಡುವೆ ನಡೆದ ಸಂಭಾಷಣೆಯ ವೇಳೆ ನಾನು ಅಲ್ಲಿಯೆ ಇದ್ದೆ. ಅಮಿತ್ ಶಾ ಮಾತಿಗೆ ಡಿ.ಕೆ.ಶಿವಕುಮಾರ್ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಡಿಕೆಶಿಗೆ ಸಂಕಷ್ಟ ಬಂದಿದೆ ಎಂದು ತಿಳಿಸಿದರು.
ಭ್ರಷ್ಟರು ಆರ್ಥಿಕ ಅಪರಾಧ ಮಾಡಿರುವವರು ಕೇವಲ ಕಾಂಗ್ರೆಸ್‌ನವರು ಮಾತ್ರ ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿರುವುದು ಸರಿಯಲ್ಲ. ಬಿಜೆಪಿ ಧೋರಣೆ ಸಹಿಸಲು ಸಾಧ್ಯವೇ ಇಲ್ಲ. ಇಂತಹ ದ್ವೇಷ ರಾಜಕಾರಣದ ಚಾಳಿಯನ್ನು ಬಿಜೆಪಿ ಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.