×
Ad

ಆರೆಸ್ಸೆಸ್-ಕಾಂಗ್ರೆಸ್ ಕಾರ್ಯವೈಖರಿ ಅಪ್ಪ ಮಕ್ಕಳಂತೆ: ಡಾ.ತಸ್ಲೀಮ್ ಅಹ್ಮದ್ ರೆಹ್ಮಾನಿ

Update: 2019-08-31 23:21 IST

ಬೆಂಂಗಳೂರು, ಆ.31: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಹಾಗೂ ಕಾಂಗ್ರೆಸ್ ಪಕ್ಷ, ಅಪ್ಪ-ಮಕ್ಕಳು ಇದ್ದಂತೆ. ಸಿದ್ದಾಂತ ಮತ್ತು ಕಾರ್ಯ ವೈಖರಿಯಲ್ಲೂ ಇವು ಒಂದೇ ಹಾದಿಯಲ್ಲಿ ಸಾಗಿವೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ತಸ್ಲೀಮ್ ಅಹ್ಮದ್ ರೆಹ್ಮಾನಿ ಆರೋಪಿಸಿದರು.

ಶನಿವಾರ ನಗರದ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ-ಕರ್ನಾಟಕ(ಪಿಎಫ್‌ಐ) ಏರ್ಪಡಿಸಿದ್ದ, ನಿರ್ಭೀತಿ ಮತ್ತು ಘನತೆಯಿಂದ ಜೀವಿಸಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಆರೆಸ್ಸೆಸ್ ಜತೆ ನಂಟು ಹೊಂದಿರುವ ಹಲವು ನಾಯಕರು ಕಾಂಗ್ರೆಸ್ ಪಕ್ಷದಲ್ಲೂ ಇದ್ದು, ಈಗಲೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅಷ್ಟೇ ಅಲ್ಲದೆ, ದಲಿತ, ಅಲ್ಪಸಂಖ್ಯಾತರ ಮೇಲೂ ದಾಳಿ ನಡೆದ ಸಂದರ್ಭದಲ್ಲಿ ಕಾಣದಂತೆ ಸುಮ್ಮನಾಗುತ್ತಾರೆಯೇ ಹೊರತು, ಎಲ್ಲಿಯೂ ದನಿ ಎತ್ತುವುದಿಲ್ಲ. ಒಮ್ಮೆ ಬಿಜೆಪಿಗೆ, ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರ ದೊರೆಯಬೇಕೆಂಬ ಷಡ್ಯಂತ್ರವೂ ಇವರಲ್ಲಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು, ಕೋಮುಗಲಭೆ, ಗುಂಪು ಥಳಿತ ನಡೆಸುವುದು ಸಂಘಪರಿವಾರದ ಬಹುದೊಡ್ಡ ಸಂಚಾಗಿದೆ. ಇದಕ್ಕೆ ಈಗಾಗಲೇ ದೇಶದೆಲ್ಲೆಡೆ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ವರ್ಗದ 150ಕ್ಕೂ ಹೆಚ್ಚು ಮಂದಿ ಇದಕ್ಕೆ ಬಲಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳ ಒಕ್ಕೂಟ(ಎನ್‌ಸಿಎಚ್‌ಆರ್‌ಒ) ಅಧ್ಯಕ್ಷ, ಹಿರಿಯ ನ್ಯಾಯವಾದಿ ಎಸ್.ಬಾಲನ್ ಮಾತನಾಡಿ, ಜಾತ್ಯತೀತ ತತ್ವದ ಅಂಶಗಳನ್ನು ಗಾಳಿಗೆ ತೂರಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದು, ಇದನ್ನು ಬಹಳ ದಿನಗಳ ಕಾಲ ಮುಂದುವರೆಸಲು ಆಗುವುದಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ಆರೆಸ್ಸೆಸ್ 40 ಸಾವಿರ ಶಾಖೆಗಳನ್ನು ಹೊಂದಿದೆ. 10 ಲಕ್ಷಕ್ಕೂ ಅಧಿಕ ಮಂದಿಯನ್ನು ತನ್ನ ಸಿದ್ಧಾಂತ ನಂಬಿಸಿ ಕಾರ್ಯಕರ್ತರನ್ನಾಗಿ ಮಾಡಿಕೊಂಡಿದೆ. ಕೆಲ ಸಂಘಟನೆಗಳು ಮಾರಕಾಸ್ತ್ರಗಳನ್ನು ಇಟ್ಟುಕೊಂಡು, ಹಾಡುಹಾಗಲೇ ಭಯ ಸೃಷ್ಟಿಸುವ ತಾಕತ್ತನ್ನು ಹೊಂದಿವೆ. ಇದರ ವಿರುದ್ಧ ಒಗ್ಗೂಡಿ ಮತ್ತು ಸೈದ್ಧಾಂತಿಕ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಗೆ ಮುಂದಾಗಿದೆ. ಈ ಹಿಂದೆ ಇದ್ದ ಕಾನೂನುಗಳನ್ನು ಸಹ ದುರ್ಬಲಗೊಳಿಸಲಾಗಿದೆ. ಆದರೆ, ನಾವು ಇದನ್ನು ಮೆಟ್ಟಿನಿಂತು, ಹೋರಾಟ ನಡೆಸಬೇಕಿದೆ ಎಂದರು.

ಜನಾಂಗೀಯ ದ್ವೇಷ ಹುಟ್ಟುಹಾಕುವಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಯಶಸ್ವಿಯಾಗಿದೆ. ಇದರ ಪ್ರತಿಫಲವೇ ಚುನಾವಣೆಗಳ ಫಲಿತಾಂಶ. ಹೀಗಿರುವಾಗ, ನಾವು ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಹೋರಾಟಗಳಿಗೆ ಶಕ್ತಿ ಬರಲಿದೆ. ಇಲ್ಲದಿದ್ದರೆ, ಕೋಮುವಾದಿಗಳಿಗೆ ನಾವು ಶರಣಾಗುತ್ತೇವೆ ಎಂದು ನುಡಿದರು.

ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಮಾತನಾಡಿ, ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾನ್ ಪುರಷ ಎಂದು ಬಿಂಬಿಸುವ ವರ್ಗ ಹುಟ್ಟಿಕೊಂಡಿದೆ. ಯುವ ಜನತೆಗೆ ನಶೆ ಏರಿಸಿ, ಹಲ್ಲೆ, ದೌರ್ಜನ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಶಿಕ್ಷಣ ಪಡೆದ ವರ್ಗವೇ, ಅವರನ್ನು ಬೆಂಬಲಿಸುವುದು ನಮ್ಮ ಸಮಾಜದ ದುರಂತವೇ ಸರಿ ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಾಹೀದ್ ಸೇಠ್, ರಾಜ್ಯ ಕಾರ್ಯದರ್ಶಿ ನಾಸೀರ್ ಪಾಷ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News