ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ: ರವಿಕೃಷ್ಣಾರೆಡ್ಡಿ

Update: 2019-08-31 17:53 GMT

ಬೆಂಗಳೂರು, ಆ.31: ಬಿಬಿಎಂಪಿ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದ ಕೂಪದಲ್ಲಿ ನರಳುತ್ತಿದೆ. ಬಿಬಿಎಂಪಿ ಹಿರಿಯ ಅಧಿಕಾರಿಗಳಿಂದ ಪ್ರಾರಂಭಗೊಂಡು ಎಲ್ಲ ಹಂತದಲ್ಲೂ ಎಲ್ಲ ವಿಭಾಗಗಳಲ್ಲೂ ಭ್ರಷ್ಟಾಚಾರ ಮಿತಿಮೀರಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ನಗರದ ಪುರಭವನದ ಮುಂಭಾಗ ಬಿಬಿಎಂಪಿಯಲ್ಲಿನ ದುರಾಡಳಿತ, ಭ್ರಷ್ಟಾಚಾರ ಮತ್ತು ಅಸಮರ್ಪಕ ಕಾರ್ಯನಿರ್ವಹಣೆ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಬಿಎಂಪಿ ನಡೆಯುತ್ತಿರುವ ಸಾವಿರಾರು ಕೋಟಿ ರೂ.ಭ್ರಷ್ಟಾಚಾರ ಬಯಲಿಗೆ ಬಂದಿದ್ದರೂ ತಪ್ಪಿತಸ್ಥರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಭ್ರಷ್ಟಾಚಾರ ನಡೆಸುವವರಿಗೆ ಬಿಬಿಎಂಪಿಯ ಆಡಳಿತ ವರ್ಗವೇ ಕುಮ್ಮಕ್ಕು ನೀಡಿದಂತಿದೆ. ಇದರ ವಿರುದ್ಧ ಜನತೆ ಜಾಗೃತರಾಗಬೇಕಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಬೆಂಗಳೂರನ್ನು ಸ್ವಚ್ಛವಾಗಿಡಬೇಕೆಂದು ಸದುದ್ದೇಶದಿಂದ ನಗರದಲ್ಲಿ ಉತ್ಪಾದನೆಯಾಗುವ ಕಸವನ್ನು ನಿರ್ವಹಿಸುತ್ತಿಲ್ಲ. ಕೇವಲ ಗುತ್ತಿಗೆದಾರರಿಗೆ ಒಂದು ವರ್ಷಕ್ಕೆ ಸಾವಿರಾರು ಕೋಟಿ ರೂ. ಲಾಭತಂದು ಕೊಡುವ ಸಲುವಾಗಿಯೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿಗೆ ತೆರಿಗೆ ರೂಪದಲ್ಲಿ, ಬಾಡಿಗೆ ರೂಪದಲ್ಲಿ ವರ್ಷಕ್ಕೆ ಬರಬೇಕಾದ ನೂರಾರು ಕೋಟಿ ರೂ. ಭ್ರಷ್ಟರ ಪಾಲಾಗುತ್ತಿದೆ. ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳನ್ನು ಸರಿಯಾಗಿ ನಿರ್ವಹಿಸದೆ ಹಲವಾರು ಮಾರಕ ಖಾಯಿಲೆಗಳಿಗೆ ಎಡೆ ಮಾಡಿಕೊಡಲಾಗುತ್ತಿದೆ. ಅಕ್ರಮ ಜಾಹೀರಾತುಗಳಿಗೆ ನಿರಂತರವಾಗಿ ಅವಕಾಶಗಳನ್ನು ನೀಡಲಾಗುತ್ತಿದೆ. ಆ ಮೂಲಕ ಬಿಬಿಎಂಪಿಗೆ ಬಾಡಿಗೆ ರೂಪದಲ್ಲಿ ಬರಬೇಕಾದ ಹಣಕಾಸು ಕುಂಠಿತವಾಗುತ್ತಿದೆ ಎಂದು ಅವರು ಹೇಳಿದರು.

ಬಿಬಿಎಂಪಿಯ ಬಹುತೇಕ ಕಾಮಗಾರಿಗಳು ಕರ್ನಾಟಕ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ಪಡೆದು ಕೆಆರ್‌ಐಡಿಎಲ್ ಮೂಲಕ ಟೆಂಡರ್ ಕರೆಯದೇ ಭ್ರಷ್ಟಾಚಾರ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಟೆಂಡರ್ ಕರೆದರೂ ಅಲ್ಲೂ ಬರೀ ಗೋಲ್‌ಮಾಲ್ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಇ-ಟೆಂಡರ್ ಬಹುತೇಕ ಅಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರದಿಂದ ಕೂಡಿದ ಪ್ರಕ್ರಿಯೆಯಾಗಿದ್ದು, ಸಾಮಾನ್ಯ ಮತ್ತು ಪ್ರಾಮಾಣಿಕ ಗುತ್ತಿಗೆದಾರರು ಇಲ್ಲಿ ಕಾಮಗಾರಿ ತೆಗೆದುಕೊಳ್ಳುವುದು ಕನಸಿನ ಮಾತಾಗಿದೆ. ಹೀಗೆ ಭ್ರಷ್ಟಾಚಾರದಿಂದ ಕೂಡಿರುವ ಗುತ್ತಿಗೆ ಪ್ರಕ್ರಿಯೆಗಳು ಮುಂದುವರೆದರೆ ಜನತೆ ಬಹಳಷ್ಟು ಸಂಕಷ್ಟಕ್ಕೆ ಈಡಾಗಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಲಂಚಮುಕ್ತ ಕರ್ನಾಟಕದ ಬೆಂಗಳೂರು ಘಟಕದ ಅಧ್ಯಕ್ಷ ವಿ.ಆರ್.ಮರಾಠೆ ಮಾತನಾಡಿ, ಬಿಬಿಎಂಪಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಕುರಿತು ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲವೆಂದು ವಿಷಾದಿಸಿದರು.

ಪ್ರತಿಭಟನೆಯ ನಂತರ ವೇದಿಕೆಯ ಪದಾಧಿಕಾರಿಗಳು ಬಿಬಿಎಂಪಿಯ ಆಯುಕ್ತರಿಗೆ ಭೇಟಿ ಮಾಡಿ, ಬಿಬಿಎಂಪಿಯಲ್ಲಿನ ಅಕ್ರಮ ಅವ್ಯವಹಾರಗಳ ಮತ್ತು ಆಡಳಿತದಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಮನವಿ ಪತ್ರವನ್ನು ನೀಡಲಾಯಿತು. ಈ ವೇಳೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕಾರ್ಯದರ್ಶಿ ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್, ವೆಂಕಟೇಶ್, ಜನನಿ ವತ್ಸಲಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News