×
Ad

ರಂಗ ಬೆಳಕು ಯೋಜನೆ ಮುಂದುವರಿಸಲು ಆಗ್ರಹ

Update: 2019-08-31 23:37 IST

ಬೆಂಗಳೂರು, ಆ.31: ಗ್ರಾಮೀಣ ಪ್ರದೇಶದಲ್ಲಿನ ರಂಗಕೇಂದ್ರಗಳಿಗಾಗಿ ಈ ಹಿಂದೆ ನಾಟಕ ಅಕಾಡೆಮಿ ರೂಪಿಸಿದ್ದ ರಂಗ ಬೆಳಕು (ಸ್ಟೇಜ್ ಲೈಟ್) ಯೋಜನೆಯನ್ನು ಮುಂದುವರಿಸಬೇಕು ಎಂಬ ಕೂಗು ಕೇಳಿ ಬಂದಿದೆ.

ಗ್ರಾಮೀಣ ಪ್ರದೇಶದಲ್ಲಿರುವ ರಂಗಕೇಂದ್ರಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ನಾಟಕ ಅಕಾಡೆಮಿಯ ಮುಂದಾಳತ್ವದಲ್ಲಿ ಜಾರಿ ಮಾಡಲಾಗಿತ್ತು. ಇನ್ನೇನು ವೇದಿಕೆಗೆ ಲೈಟ್‌ಗಳನ್ನು ನೀಡಬೇಕು ಎಂದು ತೀರ್ಮಾನವಾಗಿತ್ತು. ಅಷ್ಟರಲ್ಲಿ ಹೊಸ ಸರಕಾರ ಬಂದಿದ್ದು, ಆ ಸರಕಾರ ಇದನ್ನು ತಡೆಹಿಡಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ, ಹಾಸನ ಜಿಲ್ಲೆಯ ರಕ್ಷಿದಿಯಲ್ಲಿರುವ ಜೈ ಕರ್ನಾಟಕ ಸಂಘ, ಕೋಲಾರದ ಆದಿಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆಗೆ ಸ್ಟೇಜ್ ಲೈಟ್‌ಗಳನ್ನು ನೀಡಲು ತೀರ್ಮಾನ ಕೈಗೊಂಡಿತ್ತು. ಆದರೆ, ಹೊಸ ಸರಕಾರ ಬಂದ ಮೇಲೆ ಅಕಾಡೆಮಿ ಅಧ್ಯಕ್ಷರು ನಿರ್ಗಮಿಸಿದರು. ಇದರಿಂದ ಈ ಯೋಜನೆಗೆ ತಡೆ ಬಿದ್ದಿದೆ.

12 ಲಕ್ಷ ರೂ.ಗಳ ಯೋಜನೆ: ರಂಗಮಂದಿರಗಳ ದೀಪ ವ್ಯವಸ್ಥೆಗಾಗಿ ಈ ಹಿಂದೆ ನಾಟಕ ಅಕಾಡೆಮಿ 12 ಲಕ್ಷ ರೂ.ಮೀಸಲಿಟ್ಟಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ಟೆಂಡರ್ ಅನ್ನೂ ಕರೆದಿತ್ತು. ಇದು ದೊಡ್ಡ ಮೊತ್ತವಾಗಿರುವ ಹಿನ್ನೆಲೆಯಲ್ಲಿ ಇ-ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ಮುಂದಿನ ಹಂತಗಳಲ್ಲಿ ಮತ್ತಷ್ಟು ರಂಗಕೇಂದ್ರಗಳಿಗೆ ದೀಪ ವ್ಯವಸ್ಥೆ ಕಲ್ಪಿಸಲು ಆಲೋಚನೆ ಕೂಡ ನಡೆದಿತ್ತು.

ಆದರೆ ಸರಕಾರ ಬದಲಾದ ನಂತರ ಅಕಾಡೆಮಿ ಅಧ್ಯಕ್ಷರು ಕೂಡ ನಿರ್ಗಮಿಸಿದ್ದು ಸ್ಟೇಜ್ ಲೈಟ್ ಯೋಜನೆ ಮುಂದುವರಿಯುತ್ತೋ ಅಥವಾ ಇಲ್ಲವೋ ಎಂಬ ಆತಂಕ ಮೂಡಿದೆ.

ಕೆಲವು ರಂಗಕರ್ಮಿಗಳು ಕಷ್ಟಪಟ್ಟು ಥಿಯೇಟರ್ ಕಟ್ಟಿದ್ದಾರೆ. ಆದರೆ ಅಲ್ಲಿ ಲೈಟಿಂಗ್ ವ್ಯವಸ್ಥೆ ಸರಿಯಾಗಿಲ್ಲ. ಬೇರೆ ಕಡೆಗಳಿಂದ ಅವುಗಳನ್ನು ಬಾಡಿಗೆಗೆ ತರಬೇಕಾದರೆ 7-8 ಸಾವಿರ ರೂ. ನೀಡಬೇಕಾಗುತ್ತದೆ. ಇದು ರಂಗಭೂಮಿ ಚಟುವಟಿಕೆಗಳ ಮೇಲೆ ಬಹಳಷ್ಟು ಪ್ರಭಾವ ಬೀರಲಿದೆ ಎಂದು ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ.ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆ ತಡೆಹಿಡಿದಿದ್ದಾರೆ. ಮುಂದಿನ ಅಧ್ಯಕ್ಷರು ಈ ಯೋಜನೆ ಮುಂದುವರಿಸಬಹುದು ಅಥವಾ ಕೈ ಬಿಡಬಹುದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News