ಎಲ್ಲ ವಲಯಗಳಲ್ಲೂ ಸ್ವಚ್ಛತಾ ಆಂದೋಲನಕ್ಕೆ ಸೂಚನೆ: ಆಯುಕ್ತ ಅನಿಲ್‌ಕುಮಾರ್
ಬೆಂಗಳೂರು, ಆ.31: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಲಯಗಳಲ್ಲೂ ಇನ್ನು ಮುಂದೆ ಪ್ರತಿ ಶನಿವಾರವೂ ಸ್ವಚ್ಛತಾ ಆಂದೋಲನಾ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದ ಕೆಂಪೇಗೌಡ ಪೌರ ಸಂಭಾಗಣದಲ್ಲಿ ಆಯೋಜಿಸಿದ್ದ ತಮ್ಮ ಮೊದಲ ಪಾಲಿಕೆ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, 1992ರಿಂದ 1995ರವರೆಗೆ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ)ರಾಗಿದ್ದ ವೇಳೆ ಪ್ರತಿ ಶನಿವಾರ ಎಲ್ಲ ವಲಯಗಳಲ್ಲೂ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಕೆಲವು ಸಮಯ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಸೂಚಿಸಿದ್ದು, ಜನರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.
ನಾನು ಉಪ ಆಯುಕ್ತರಾಗಿದ್ದ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ ಕೇವಲ 64 ಸದಸ್ಯರು ಮಾತ್ರ ಇದ್ದರು. ನಂತರ 100ರಿಂದ 198ಕ್ಕೆ ಏರಿಕೆಯಾಗಿದ್ದು, ಆಗಿನ ಪಾಲಿಕೆಗೂ, ಈಗಿನ ಪಾಲಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಸಮಸ್ಯೆಗಳ ಜತೆಗೆ ಜವಾಬ್ದಾರಿಯು ಹೆಚ್ಚಾಗಿದೆ. ಹೀಗಾಗಿ ಪ್ರತಿ ವಾರ್ಡ್‌ಗಳ ಸ್ಥಳ ಪರಿಶೀಲಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಆಡಳಿತ ನೀಡೋಣ ಎಂದು ಬಿಬಿಎಂಪಿ ಸದಸ್ಯರಿಗೆ ಸಲಹೆ ನೀಡಿದರು.
ಬಿಬಿಎಂಪಿ ಸದಸ್ಯ ಗುಣಶೇಖರ್ ಮಾತನಾಡಿ, ಬಿಬಿಎಂಪಿ ಸದಸ್ಯರು ಕಡತಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋದರೆ ಅಧಿಕಾರಿಗಳು ನಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆ. ಗುತ್ತಿಗೆದಾರರು ಹಿಡಿದುಕೊಂಡು ಹೋದರೆ ಕೆಲಸಗಳು ಬೇಗ ಆಗುತ್ತವೆ. ಇದು ಅಧಿಕಾರಿಗಳ ಉದ್ಧಟತನವಾಗಿದ್ದು, ಜನರ ಭರವಸೆಗಳನ್ನು ಈಡೇರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಅಧಿಕಾರಿಗಳು ತಂದಿದ್ದಾರೆ. ಹೀಗಾಗಿ ಯಾವುದೇ ಕಚೇರಿಯಲ್ಲಿ ನಾಲ್ಕು ದಿನ ಕಡತ ಇರಬಾರದು ಎಂದು ಕಾನೂನು ಮಾಡಿ ಎಂದು ಹೇಳಿದರು.
ಬಿಬಿಎಂಪಿಯ ಕಾಮಗಾರಿ ಕಡತಗಳು ಯಾವ ಹಂತದಲ್ಲಿವೆ ಎಂಬುದೇ ಗೊತ್ತಿಲ್ಲವಾದರೆ ಹೇಗೆ? ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಇ-ಗವರ್ನೆನ್ಸ್ ಇರುವಂತೆ ಬಿಬಿಎಂಪಿಗೂ ಇ-ಗವರ್ನೆನ್ಸ್ ಬೇಕು. ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡಿಲ್ಲ ಎಂದು ಅನೇಕ ಕಾಮಗಾರಿಗಳನ್ನು ಸ್ಥಗಿತ ಮಾಡಿರುವುದು ಸರಿಯಲ್ಲ. ಪಾಲಿಕೆಯಲ್ಲಿ ಪಾರದರ್ಶಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮುಂಬೈ ಮುನ್ಸಿಪಲ್ ಕಾಯ್ದೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಪ್ರತ್ಯೇಕವಾದ ಮುನ್ಸಿಪಲ್ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಆಡಳಿತವನ್ನು ಸರಳೀಕರಣಗೊಳಿಸಬೇಕು. ಅಲ್ಲದೆ, ಸಂವಿಧಾನದ 74ನೇ ತಿದ್ದುಪಡಿಯಲ್ಲಿನ ಕೆಲವು ಅಂಶಗಳು ಅನುಷ್ಠಾನಗೊಂಡಿವೆ. ಇನ್ನು ಕೆಲವು ಅನುಷ್ಠಾನಗೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜಾಬ್ ಕಾರ್ಡ್ ನೀಡಲು ಒಂದು ವರ್ಷ ಬೇಕಾಗುತ್ತಿದ್ದು, ಆಡಳಿತ ಹಂತಗಳನ್ನು ಅದಷ್ಟು ಕಡಿಮೆ ಮಾಡಬೇಕು. ವಲಯಗಳಲ್ಲೇ ಹೆಚ್ಚಿನ ಆಡಳಿತ ಅಧಿಕಾರದ ಜೊತೆಗೆ ಹಣಕಾಸಿನ ಅಧಿಕಾರ ನೀಡಬೇಕು. ಈ ಮೂಲಕ ಅಭಿವೃದ್ಧಿ ಕೆಲಸಗಳಾಗಲು ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಉಪಮೇಯರ್ ಅನುದಾನ ಕಡಿತ ಚರ್ಚೆ
ಉಪ ಮೇಯರ್ ಭದ್ರೇಗೌಡ ಮಾತನಾಡಿ, ಮಹಾಲಕ್ಷ್ಮೀ ಲೇ ಔಟ್ ವಿಧಾನ ಸಭಾ ಕ್ಷೇತ್ರದ ಯಾವ ಸದಸ್ಯರ ಅನುದಾನವನ್ನು ರಾಜ್ಯ ಸರಕಾರ ಕಡಿತ ಮಾಡಿಲ್ಲ. ನನ್ನ ಅನುದಾನವನ್ನು 5 ಕೋಟಿಯಿಂದ 2 ಕೋಟಿಗೆ ಕಡಿತಗೊಳಿಸಿದ್ದಾರೆ. ಮಹಾಲಕ್ಷ್ಮೀ ಲೇ ಔಟ್‌ನ 7 ವಾರ್ಡ್‌ಗಳಿಗೆ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದನ್ನು ಎಲ್ಲ ವಾರ್ಡ್‌ಗೂ ಸಮಾನವಾಗಿ ಹಂಚಬೇಕು. ಅಲ್ಲದೆ, ಯಾವ ಸಮಯದಲ್ಲಿ ಯಾರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದು ಗೊತ್ತು. ಅಧಿಕಾರ ಶಾಶ್ವತವಲ್ಲ ಎಂದರು. ಅದಕ್ಕೆ ಉಮೇಶ್ ರೆಡ್ಡಿ ನೀವು ಹಾಕಿಕೊಟ್ಟಿರೋ ಬುನಾದಿ ಎಂದು ತಿರುಗೇಟು ನೀಡಿದರು.
ಬಿಬಿಎಂಪಿಯ ಪ್ರಸಕ್ತ ಬಜೆಟ್‌ನಲ್ಲಿ 102 ಬಿಜೆಪಿ ಸದಸ್ಯರಿಗೆ 654.98 ಕೋಟಿ ರೂ. ಅನುದಾನ. 74 ಕಾಂಗ್ರೆಸ್ ಸದಸ್ಯರಿಗೆ 549.25 ಕೋಟಿ ರೂ. ಅನುದಾನ ಹಾಗೂ 14 ಜೆಡಿಎಸ್ ಸದಸ್ಯರಿಗೆ 308 ಕೋಟಿ ರೂ. ಅನುದಾನ ನೀಡಲಾಗಿದ್ದು, ಬಜೆಟ್ ಕಡಿತದ ಬಗ್ಗೆ ಕೌನ್ಸಿಲ್ ಸಭೆ ಏರ್ಪಡಿಸಿ ರಾಜಧಾನಿಯ ಜನತೆೆ ಬಜೆಟ್ ಕಡಿತವನ್ನು ತಿಳಿಸಬೇಕು.
-ಪದ್ಮನಾಭ ರೆಡ್ಡಿ, ಪ್ರತಿಪಕ್ಷದ ನಾಯಕ
ಬಿಬಿಎಂಪಿಯ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ದೊರಕಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ