ಕನ್ನಡ ಮಾತೃ ಭಾಷಾ ಪ್ರಜ್ಞೆಯ ಇತಿಹಾಸ

Update: 2019-09-01 08:04 GMT

ಆಗಸ್ಟ್ 30 ಹಿರಿಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯವರನ್ನು ದುಷ್ಕರ್ಮಿಗಳು ಹತ್ಯೆಗೈದ ದಿನ. ಕನ್ನಡ ನಾಡು ನುಡಿಗೆ ತಮ್ಮ ಸಂಶೋಧನೆ, ಬರಹಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದ ಕಲಬುರ್ಗಿ ಯವರು ‘ಕನ್ನಡ ಮಾತೃಭಾಷೆಯ ಪ್ರಜ್ಞೆ ಮತ್ತು ಇತಿಹಾಸ’ದ ಕುರಿತಂತೆ ಬರೆದ ಲೇಖನವನ್ನು ಇಲ್ಲಿ ನೀಡಲಾಗಿದೆ. ಸೆಪ್ಟಂಬರ್ ಮೊದಲ ವಾರವನ್ನು ದೇಶ ‘ಭಾಷಾ ಸೌರ್ಹಾರ್ದತಾ ದಿನ’ವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿಯೂ ಈ ಲೇಖನ ಮುಖ್ಯವಾಗಿದೆ.

‘ಮಾತೃ ದೇವೋ ಭವ..’ ಇತ್ಯಾದಿ ಉಪನಿಷದ್ವಾಕ್ಯಗಳ ಸಾಲಿನಲ್ಲಿ ಇಂದು ‘‘ಮಾತೃ ಭೂಮಿ ದೇವೋ ಭವ; ಮಾತೃ ಭಾಷಾ ದೇವೋ ಭವ’’ ಎಂಬ ಹೇಳಿಕೆಗಳು ಬೆಲೆ ಪಡೆದಿವೆ. ಇವುಗಳಲ್ಲಿ ನಮ್ಮ ಪ್ರಾಚೀನರಿಗೆ ಮೂರ್ತರೂಪದ ‘ಮಾತೃ ಭೂಮಿ ಆಸ್ತಿ’ ಎನಿಸಿದಂತೆ ಅಮೂರ್ತರೂಪದ ಮಾತೃ ಭಾಷೆ ಆಸ್ತಿ ಎನಿಸಿದ್ದಿತೇ? ಒಂದು ವೇಳೆ ಎನಿಸಿದ್ದರೆ ಮಾತೃಭೂಮಿ ರಕ್ಷಣೆ ವಿಸ್ತರಣೆಗಾಗಿ ಇತಿಹಾಸದುದ್ದಕ್ಕೂ ಯುದ್ಧರೂಪದ ಚಟು ವಟಿಕೆಗಳಲ್ಲಿ ತೊಡಗಿದ ಇವರು ಮಾತೃಭಾಷೆಯ ರಕ್ಷಣೆ, ವಿಸ್ತರಣೆ ಗಳ ಬಗ್ಗೆ ತಳೆದ ನಿಲುವುಗಳೇನು? ಈ ಪ್ರಶ್ನೆಗಳನ್ನು ಎತ್ತಿ ಉತ್ತರ ಹುಡುಕುವ ಪ್ರಯತ್ನವನ್ನು ಈವರೆಗೆ ಯಾರೂ ಮಾಡಿದಂತಿಲ್ಲ.

ಕವಿರಾಜಮಾರ್ಗಕಾರ, ಪಂಪ, ಆಂಡಯ್ಯ ಮೊದಲಾದವರ ಕಾವ್ಯಗಳಲ್ಲಿ, ನಾಡಿನ ತುಂಬ ಹರಡಿರುವ ಶಾಸನಗಳಲ್ಲಿ ಆಗಾಗ ಮಿಂಚುವ ವಾಕ್ಯಗಳನ್ನು ಆಯ್ದುಕೊಂಡು ‘ಮಾತೃಭೂಮಿ’ಯ ಬಗ್ಗೆ ಪ್ರಾಚೀನರ ಒಲುಮೆ ಎಂತಹದು? ಅದನ್ನು ಅನುಷ್ಠಾನಗೊಳಿ ಸುವಲ್ಲಿ ಅವರು ತಳೆದ ನಿಲುವುಗಳೇನು? ಎಂಬುದನ್ನು ಗುರುತಿಸು ವಂತೆ, ‘ಮಾತೃಭಾಷೆ’ಯ ಬಗ್ಗೆ ಅವರ ಒಲುಮೆ ಎಂತಹದು? ‘ಮಾತೃಭಾಷೆ’ಯ ಮಾಧ್ಯಮದ ಬಗ್ಗೆ ಅವರ ನಿಲುಮೆಯೇನು?ಎಂಬುದನ್ನು ಗುರುತಿಸಬಹುದಾಗಿದೆ. ಇದರಿಂದ ಮಾತೃಭಾಷಾ ಪ್ರೇಮ ಮತ್ತು ಮಾತೃಭಾಷಾಮಾಧ್ಯಮ ಸಮಸ್ಯೆಗಳನ್ನು ಅಂದು ಅವರು ಪರಿಹರಿಸಿಕೊಂಡ ರೀತಿಗಳು ಭಾಷಾ ಸಮಸ್ಯೆಯ ಸುಳಿಯಲ್ಲಿ ಸಿಕ್ಕ ಇಂದಿನ ನಮಗೆ ಮಾರ್ಗದರ್ಶಿಯಾಗುವ ಸಾಧ್ಯತೆ ಇದೆ.

ಭಾವನೆಗಳ ವಿನಿಮಯಕ್ಕೋಸುಗ ಒಂದು ಜನಾಂಗದ ಪ್ರಜೆ ಗಳು ಪರಸ್ಪರ ಒಪ್ಪಿಕೊಂಡ ವೌಖಿಕ ಧ್ವನಿವ್ಯವಸ್ಥೆಯೇ ಭಾಷೆ. ಸಂಪರ್ಕ ಪ್ರಯೋಜನವೇ ಮೂಲತಃ ಆದರ ಉದ್ದೇಶವಾದು ದರಿಂದ ಭಾಷೆಯೆಂದರೆ ‘ಸಂಪರ್ಕ ಭಾಷೆ’ ಎಂದೇ ಅರ್ಥ. ಯಾವುದೇ ಇಂಥ ಭಾಷೆ ತಲೆಮಾರಿನಿಂದ ತಲೆಮಾರಿಗೆ ನಡೆದು ಬಂದು ಪ್ರಯೋಜನಾತ್ಮಕ ಸಂಬಂಧವನ್ನೂ ಮೀರಿ, ಭಾವನಾತ್ಮಕ ಸಂಬಂಧವನ್ನು ಪಡೆಯುವಲ್ಲಿ ಅದಕ್ಕೆ ‘ಸಂಪರ್ಕ ಭಾಷೆ’ಯ ಸ್ಥ್ಥಾನತಪ್ಪಿ ‘ಮಾತೃಭಾಷಾ’ ಪಟ್ಟ ಪ್ರಾಪ್ತವಾಗುತ್ತದೆ.

ಯಾವುದೇ ಜನಾಂಗದಲ್ಲಿ ‘ಭಾಷೆಯ ಬಗ್ಗೆ ಅಜ್ಞರಾದ ಜಾನ ಪದರು’, ‘ಭಾಷೆಯ ಬಗ್ಗೆ ಪ್ರಾಜ್ಞರಾದ ನಾಗರಿಕರು’ ಎಂದು ಎರಡು ವರ್ಗಗಳು ಕಂಡುಬರುತ್ತವೆ. ಜಾನಪದರಿಗೆ ತಾವು ಆಡುವ ಭಾಷೆಯ ಬಗ್ಗೆ ಆದರವೂ ಇರುವುದಿಲ್ಲ; ಅನಾದರವೂ ಇರುವು ದಿಲ್ಲ. ಅಗತ್ಯಕ್ಕೆ ತಕ್ಕಂತೆ ಬಳಸುತ್ತ ಹೋಗುವ ಇವರದು ಭಾಷೆಯ ಬಗ್ಗೆ ದಿವ್ಯನಿರ್ಲಕ್ಷ.

ನಾಗರಿಕರು ಹೀಗಲ್ಲ, ಇವರು ‘ಅನ್ಯಭಾಷೆ’ಯೊಂದಿಗೆ ಪ್ರಯೋ ಜನಾತ್ಮಕ ಸಂಬಂಧವನ್ನಿಟ್ಟುಕೊಳ್ಳಬಲ್ಲರು; ತಮ್ಮ ಭಾಷೆಯೊಂದಿಗೆ ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡು ಮಾತೃಸ್ಥಾನದಲ್ಲಿ ಗೌರವಿ ಸಬಲ್ಲರು. ಎರಡಕ್ಕೂ ವೈಚಾರಿಕ, ಸಾಹಿತ್ಯಿಕ ಸ್ತರಗಳಲ್ಲಿ ದುಡಿಯುವ ಸಾಮರ್ಥ್ಯವಿರುವುದೆಂದು ಕಂಡುಕೊಂಡ ಇವರು, ಇವುಗಳ ಶಕ್ತಿ ಕೋಶಗಳನ್ನು ಶೋಧಿಸುತ್ತ, ಬಲಪಡಿಸುತ್ತ, ವಿಸ್ತರಿಸುತ್ತ ನಡೆಯು ತ್ತಾರೆ. ಇವರಿಂದ ಭಾಷೆಗೆ ‘ಮಾತೃಮರ್ಯಾದೆ’ ಮತ್ತು ಯಾವುದೇ ಸಂದರ್ಭಕ್ಕೆ ಮಣಿಯುವ ‘ಮಾಧ್ಯಮ ಶಕ್ತಿ’ ಪ್ರಾಪ್ತವಾಗುತ್ತದೆ. ಪ್ರಾಚೀನ ಕರ್ನಾಟಕದ ಇಂಥ ನಾಗರಿಕ ಜನಾಂಗಗಳೆಂದರೆ ಉನ್ನತ ವರ್ಗಕ್ಕೆ ಸೇರಿದ ಬ್ರಾಹ್ಮಣ,ಜೈನ, ವೀರಶೈವಗಳೇ ಆಗಿರುವುದರಿಂದ ಪ್ರಾಚೀನರ ಮಾತೃಭಾಷಾ ಒಲುಮೆ, ಮಾತೃಭಾಷಾ ಮಾಧ್ಯಮದ ನಿಲುಮೆಗಳೆಂದರೆ ಈ ಮೂರು ಜನಾಂಗಗಳ ಒಲುಮೆ ನಿಲುಮೆ ಗಳೇ ಆಗಿವೆ.

ಧಾರ್ಮಿಕ ಮಾನದಂಡದಿಂದಲೇ ಬದುಕಿನ ಸರ್ವಕ್ರಿಯೆಗಳಿಗೆ ಬೆಲೆಕಟ್ಟುತ್ತಿದ್ದ ಕಾಲವದು. ಈ ಧೋರಣೆಯಿಂದ ಭಾಷೆಯೂ ಮುಕ್ತ ವಾಗಿರಲಿಲ್ಲ. ಸಮಾಜದಲ್ಲಿ ಮೂಲತಃ ಒಳ್ಳೆಯ ಉದ್ದೇಶದಿಂದ ಕಲ್ಪಿಸಿ ರಬಹುದಾದ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ ವರ್ಗಗಳಲ್ಲಿ ಕ್ರಮೇಣ ತಾರತಮ್ಯವನ್ನು ಆರೋಪಿಸಿ ಅದನ್ನು ಪ್ರತಿಷ್ಠೆ ಶೋಷಣೆಗಳ ಸಾಧನ ವಾಗಿ ಪರಿವರ್ತಿಸಿಕೊಂಡಂತೆ, ಮೂಲತಃ ಒಳ್ಳೆಯ ಉದ್ದೇಶದಿಂದ ಕಲ್ಪಿಸಿರಬಹುದಾದ ದೇವವಾಣಿ, ಜನವಾಣಿಗಳೆಂಬ ವರ್ಗೀಕರಣ ದಲ್ಲಿ ತಾರತಮ್ಯದ ಕಂದರವನ್ನು ರೂಢಿಸಿ, ಅಲ್ಲಿಯೂ ಪ್ರತಿಷ್ಠೆ- ಶೋಷಣೆ ಗಳ ದಾರಿಯನ್ನು ಹುಡುಕಿಕೊಂಡಿತು ಬ್ರಾಹ್ಮಣ ಸಮಾಜ. ಇದ ರಿಂದಾಗಿ ಬ್ರಾಹ್ಮಣರ ಕೈಯಲ್ಲಿ ಜನವಾಣಿಯಾದ ಕನ್ನಡವು ಬರಹಕ್ಕೆ ಎರವಾಗಿ ಆಡುಮಾತಿನ ಅವಸ್ಥೆಗಿಳಿದರೆ, ಸಂಸ್ಕೃತವು ಬರವಣಿಗೆಗೆ ಮಾನ್ಯವಾಗಿ ಧರ್ಮಭಾಷೆಯ ಅಂತಸ್ತಿಗೇರಿತು.

ಮೂಲತಃ ಆರ್ಯರಾದ ಬ್ರಾಹ್ಮಣರಿಗೆ ದ್ರಾವಿಡರ ಬದುಕಿನ ಸರ್ವ ಚಟುವಟಿಕೆಗಳೆಲ್ಲ ಶೂದ್ರಸಮಾನ. ದ್ರಾವಿಡರ ಭಾಷೆಗಳಲ್ಲೊಂದಾದ ಕನ್ನಡದ ವಿಷಯವಾಗಿಯೂ ಅವರು ಕೀಳುಭಾವನೆ ತಾಳಿದುದು ಸ್ವಾಭಾವಿಕವೇ ಆಗಿದೆ. ಇದರಿಂದಾಗಿ ಅನಿವಾರ್ಯ ಪ್ರಸಂಗದ ಶೂದ್ರನ ಉಪಯೋಗದಂತೆ ಕನ್ನಡವನ್ನು ಅವರು ಸೀಮಿತವಾಗಿ ಬಳಸ ತೊಡಗಿದರು. ಮೇಲಾಗಿ ಸಂಸ್ಕೃತವೆಂದರೆ ಪಾಂಡಿತ್ಯ- ಪಾವಿತ್ಯ್ರಗಳ ದ್ಯೋತಕವೆಂಬ ಭ್ರಮೆ, ಇವರು ಕನ್ನಡವನ್ನು ಇನ್ನೂ ಕೀಳಾಗಿ ಕಾಣು ವಂತೆ ಮಾಡಿತು. ಇವುಗಳಿಗಿಂತ ಮುಖ್ಯವಾದ ಇನ್ನೊಂದು ವಿಷಯ ವಿದೆ. ಅದು ಪ್ರತಿಷ್ಠಿತ ಜನಾಂಗಕ್ಕೆ ಸಮಾಜದಲ್ಲಿ ಯಾವುದರ ಬಗ್ಗೆಯೂ ಗಾಢವಾದ ಸಂಬಂಧ ಇರುವುದಿಲ್ಲ. ಹೊತ್ತು ಬಂದಂತೆ ಹೊರಳಬಲ್ಲ ಅವಕಾಶವಾದಿಗಳವರು. ಈ ಮನೋಭಾವ ಅವರಿಗೆ ಯಾವುದೇ ಭಾಷೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲು ಆಸ್ಪದ ನೀಡುವುದಿಲ್ಲ. ಯಾವುದೇ ಭಾಷೆ ‘ಮಾತೃಭಾಷೆ’ಯಾಗುವುದು ಭಾವನಾಪ್ರಧಾನ ಜನಾಂಗದಲ್ಲಿ. ಇದಕ್ಕೆ ವಿರುದ್ಧವೆನ್ನುವಂತೆ ಬುದ್ಧಿಪ್ರಧಾನವಾಗಿರುವ ಬ್ರಾಹ್ಮಣ ಜನಾಂಗಕ್ಕೆ ಯಾವುದೇ ಭಾಷೆ ಮಾತೃ ಭಾಷೆಯಾಗದುದು ತೀರ ಸ್ವಾಭಾವಿಕವಾಗಿದೆ. ಹೀಗಾಗಿ ಬ್ರಾಹ್ಮಣರ ಮನದಲ್ಲಿ ಮಾತೃ ಭಾಷಾ ವ್ಯಾಮೋಹವಾಗಲಿ, ಮಾಧ್ಯಮಕ್ಕೆ ಹದಗೊಳಿಸಬೇಕೆಂಬ ಆಸಕ್ತಿಯಾಗಲೀ ಸುಳಿಯಲಿಲ್ಲ. ಬಹಷ 15ನೇ ಶತಮಾನದವರೆಗೂ ಕನ್ನಡದ ಬಗ್ಗೆ ಸ್ವಲ್ಪ ಹೆಚ್ಚು ಕಡಿಮೆ ಸ್ವಲ್ಪ ಹೆಚ್ಚು ಕಡಿಮೆ ಇದೇ ಮನೋಭಾವ ಅವರಲ್ಲಿ ಗಟ್ಟಿಯಾಗಿ ಬೇರೂರಿದ್ದಿತು. ಆದರೆ ಸಹ ಜನಾಂಗಗಳಾದ ಜೈನ, ಅದಕ್ಕಿಂತ ವೀರಶೈವಗಳು ಮಾತೃಭಾಷೆಯ ವಿಷಯವಾಗಿ ಈವರೆಗೆ ಪಾಲಿಸಿಕೊಂಡು ಬಂದಿದ್ದ ಧೋರಣೆಯ ಬಗ್ಗೆ ಅವರಲ್ಲಿಯೇ ಮತಭೇದ ತಲೆದೋರಿ ವ್ಯಾಸಕೂಟ, ದಾಸಕೂಟ ಎಂಬ ಎರಡು ಪಕ್ಷಗಳೇ ಅಸ್ತಿತ್ವದಲ್ಲಿ ಬಂದವು. ಭಾಷೆ ಕಾರಣವಾಗಿ ಮಾಧ್ವಮತ ಹೀಗೆ ಎರಡು ಹೋಳಾದುದು, ಮಡಿವಂತರಿಗೂ ಪ್ರಾಂತಭಾಷಾಮಾಧ್ಯಮ ಅಂದು ಎಷ್ಟು ಅನಿವಾರ್ಯವಾಗಿದ್ದಿತೆಂಬುದನ್ನು ಧ್ವನಿಸುತ್ತದೆ. ಜೊತೆಗೆ ಆ ಕಡೆ ವ್ಯಾಸಕೂಟವಾಗಿ ಕೆಲವರು ಉಳಿದುಕೊಂಡುದು, ಇನ್ನೂ ಉಳಿದಿದ್ದ ಬ್ರಾಹ್ಮಣರ ಭಾಷಾ ಮಡಿವಂತಿಕೆಯ ಗೀಳನ್ನು ಧ್ವನಿಸುತ್ತದೆ. ಹೀಗೆ 15ನೆಯ ಶತಮಾನದ ಸಮಯಕ್ಕೆ ಬ್ರಾಹ್ಮಣರು ಪ್ರಾಂತಭಾಷಾಭಿಮುಖಿಗಳಾಗಿ ನಡೆದರೂ ಕನಕದಾಸನಂತಹ ಶೂದ್ರನಷ್ಟು ಗಟ್ಟಿಯಾದ ಕನ್ನಡವನ್ನು ಪುರಂದರದಾಸ ಮೊದಲು ಮಾಡಿ ಯಾವುದೇ ದಾಸರು ಬಳಸಿಲ್ಲವೆಂಬುದು ಇಲ್ಲಿ ಗಮನಿಸತಕ್ಕ ಅಂಶ ವಾಗಿದೆ. ಈ ತರುವಾಯ ಕನ್ನಡಭಾಷೆಯ ಬಗ್ಗೆ ಇದ್ದ ಮೀನಮೇಷವನ್ನು ಹರಿದೊಗೆದುದರ ಫಲವಾಗಿ 1.ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೇನು ॥

   

    2.ಕೃತಿಪತಿಕಥಾನ್ವಿತವೆನಿಪ ಪ್ರಾ ಕೃತವೆ ತಾ ಸಂಸ್ಕೃತವೆನಿಸಿ ಸ

    ದ್ಗಯನೀವುದು ಭಕ್ತಿಪೂರ್ವಕ ಕೇಳಿ ಪೇಳ್ವರಿಗೆ ॥

    3.ಪ್ರಾಕೃತೋಕ್ತಿಗಳೆಂದು ಬರಿದೆ ಮ

    ಹಕೃತಘ್ನರು ಜರೆವರಲ್ಲದೆ

    ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ॥

    ಶ್ರೀಕೃತೀಪತಿಯಮಲು ಗುಣಗಳು

    ಈ ಕೃತಿಯೊಳುಂಟಾದ ಬಳಿಕ

    ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಗುಣರಿಗೆ ॥

ಎಂಬ ಘೋಷಣೆಗಳು ಮಹಾಲಿಂಗರಂಗ (1700), ಜಗನ್ನಾಥ ದಾಸ (1775) ಕರ್ಜಗಿದಾಸ (1780)ರ ಬಾಯಿಯಿಂದ ಕೇಳಿ ಬರ ಹತ್ತಿದವು.ಇದೇ ರೀತಿ ಬ್ರಾಹ್ಮಣರೇ ಆದ ಶ್ರೀವೈಷ್ಣವರು 11ನೆಯ ಶತಮಾನ ದಷ್ಟು ಪೂರ್ವದಲ್ಲಿ ಈ ನಾಡನ್ನು ಪ್ರವೇಶಿಸಿದರೂ 17ನೆಯ ಶತಮಾನ ದವರೆಗೆ ಕನ್ನಡದಿಂದ ದೂರ ಉಳಿದರು. ಶೂದ್ರರು ಬಗ್ಗೆ ಒಂದಿಷ್ಟು ಉದಾರ ಧೋರಣೆಯುಳ್ಳ ಈ ಮಾತಾನುಯಾಯಿಗಳು ಕನ್ನಡವನ್ನು ಐದು ಶತಮಾನಗಳ ಕಾಲ ಶೂದ್ರ ವಾಗಿ ಕಂಡುದು ಇತಿಹಾಸದ ಒಂದು ವೈಪರೀತ್ಯವೇ ಸರಿ.

ಮಾಧ್ವರು 15ನೆಯ ಶತಮಾನದ ಸುಮಾರಿಗೆ ಕನ್ನಡಕ್ಕೆ ಸ್ಪಶ್ಯ ಮರ್ಯಾದೆಯನ್ನು ತೋರಿದು ದರ ಫಲವಾಗಿ ಬ್ರಾಹ್ಮಣ ರಿಂದ ಕುಮಾರ ವ್ಯಾಸ ಭಾರತ, ಜೈಮಿನಿ ಭಾರತಗಳಂಥ ಮಹಾ ಕೃತಿಗಳು ಹುಟ್ಟಿ ಬಂದವು. ಆದರೆ 18ನೇ ಶತಮಾನದಲ್ಲಿ ಪೇಶ್ವೆಯರು ಕರ್ನಾಟಕದ ಆಡಳಿತ ಸೂತ್ರವನ್ನು ಕೈವಶ ಮಡಿಕೊಳ್ಳುವುದೇ ತಡ, ನಿಂತ ಕಾಲ ಮೇಲೆಯೇ ಕನ್ನಡವನ್ನು ಕೈಬಿಟ್ಟು, ಮರಾಠಿಯನ್ನು ಕೈಗೆತ್ತಿಕೊಂಡರು. ಪ್ರತಿಷ್ಠಿತ ಬ್ರಾಹ್ಮಣ ಕುಟುಂಬಗಳಲ್ಲಿ ಮರಾಠಿ ಮನೆಮಗ ನಂತೆ, ಕನ್ನಡ ಮಲ ಮಗನಂತೆ ಬದುಕುವುದನ್ನು ಈಗಲೂ ಗಮನಿಸಬಹುದು. ಮುಂದೆ 19ನೆಯ ಶತಮಾನದಲ್ಲಿ ಆಡಳಿತ ಸೂತ್ರ ಇಂಗ್ಲಿಷರ ಹಸ್ತಗತವಾದ ಕೂಡಲೇ ಮನೆತುಂಬಿದ ಮರಾಠಿ ಯನ್ನು ಉಪೇಕ್ಷಿಸಿ ಇಂಗ್ಲಿಷನ್ನು ಮನತುಂಬಿಸಿಕೊಂಡರು. ಹೀಗೆ ಕನ್ನಡವನ್ನು ಕೈಬಿಟ್ಟು ಮರಾಠಿಯನ್ನು, ಮರಾಠಿಯನ್ನು ಕೈಬಿಟ್ಟು ಇಂಗ್ಲಿಷನ್ನು ಸ್ವಾಗತಿಸಿದ ಬ್ರಾಹ್ಮಣರು ಅವೆರಡರ ಪುಣ್ಯ ತೀರಿ ‘ಕನ್ನಡ ಚಳವಳಿ’ ಪ್ರಾರಂಭವಾಗು ವಲ್ಲಿ ಧಾವಿಸಿ ಬಂದು ಮತ್ತೆ ಮುಂಚೂಣಿಯಲ್ಲಿ ನಿಂತುಕೊಂಡರು. ಭಾಷೆಯ ಬಗ್ಗೆ ತೋರುವ ಈ ಸಮಯಾನುವರ್ತನ ಭಾವವನ್ನು ನೋಡಿದರೆ ಪ್ರಾಚೀನ ಕರ್ನಾಟಕದ ಬ್ರಾಹ್ಮಣ ಜನಾಂಗ, ಸಂಸ್ಕೃತವನ್ನು ಬಿಟ್ಟರೆ ಮಿಕ್ಕಭಾಷೆಗಳ ಕೂಡ ದುರ್ಬಲವಾದ (ಪ್ರಯೋಜನಾತ್ಮಕವಾದ) ಸಂಬಂಧವನ್ನಿಟ್ಟು ಕೊಂಡುದು ಇತಿಹಾಸದುದ್ದಕ್ಕೂ ಸ್ಪಷ್ಟವಾಗುತ್ತದೆ. ಬ್ರಾಹ್ಮಣರಂತೆ ಜೈನರೂ ಕನ್ನಡಕ್ಕೆ ಪರಕೀಯರು. ಆದರೆ ತಾವು ನೆಲೆನಿಂತ ಕನ್ನಡ ಪ್ರಾಂತದ ಭಾಷೆಯನ್ನು ಬ್ರಾಹ್ಮಣರಂತೆ ಕೇವಲ ಸಂಪರ್ಕ ಭಾಷೆ ಯಾಗಿ ಪರಿಗಣಿಸದೆ ಮಾತೃಭಾಷೆಯನ್ನಾಗಿ ಸ್ವೀಕರಿಸಿದರು. ಜೊತೆಗೆ ಧಾರ್ಮಿಕ ವಿಚಾರಗಳ ಅಭಿವ್ಯಕ್ತಿಗಾಗಿ ಪ್ರಾಕೃತದಂತೆ ಕನ್ನಡವನ್ನೂ ಬಳಸುವ ಮೂಲಕ, ತತ್ವಚಿಂತನೆಗೆ ಭಾಷಾಮಾಧ್ಯಮ ಅಡ್ಡಿಯಾಗ ದೆಂಬುದನ್ನು ತೋರಿಸಿಕೊಟ್ಟರು. ಅಂದರೆ ಯಾವುದೇ ಭಾಷೆ ಸಂಪರ್ಕ ಭಾಷೆಯೂ ಆಗಬಲ್ಲುದು, ಮಾತೃಭಾಷೆಯೂ ಆಗಬಲ್ಲದು, ಧರ್ಮ ಭಾಷೆಯೂ ಆಗಬಲ್ಲದು ಎಂಬ ಸತ್ಯವನ್ನು ನಡೆದು ತೋರಿಸಿದರು. ಈಗ ಜೈನ ಧಾರ್ಮಿಕ ಸಾಹಿತ್ಯವನ್ನು ಪ್ರಾಕೃತಮಾಧ್ಯಮದಿಂದ ಕನ್ನಡ ಮಾಧ್ಯಮಕ್ಕೆ ವರ್ಗಾಯಿಸುವುದರ ಜೊತೆಗೆ ಕನ್ನಡದಲ್ಲಿಯೂ ಸ್ವತಂತ್ರ ವಾಗಿ ಸಾಹಿತ್ಯವನ್ನು ನಿರ್ಮಿಸಿದರು. ಆದರೆ ಈ ಕಾರ್ಯದಲ್ಲಿ ಇವರನ್ನು ಕಾಡಿದ ದೊಡ್ಡ ಪ್ರಶ್ನೆಯೆಂದರೆ, ಒತ್ತಿಬರುತ್ತಿದ್ದ ಅನ್ಯಭಾಷೆಯಾದ ಸಂಸ್ಕೃತ ವನ್ನು ಕನ್ನಡದಲ್ಲಿ ಹೇಗೆ ಬಳಸಬೇಕೆಂಬುದು. ಇದರ ಪರಿಹಾರಕ್ಕೋಸುಗ ಇವರು ಸಂಸ್ಕೃತದೊಂದಿಗೆ ಹೋರಾಟ-ಒಪ್ಪಂದಗಳ ರೂಪದ ಒಂದು ಬಗೆಯ ಗುದುಮುರಿಗೆಯನ್ನು ನಡೆಸುತ್ತಲೇ ಬಂದುದು ಎದ್ದು ಕಾಣುತ್ತದೆ. ಕವಿರಾಜಮಾರ್ಗಪೂರ್ವದ ಶಾಸನಗಳಲ್ಲಿ ಕ್ವಚಿತ್ತಾಗಿ ಯಾದರೂ ಕಂಡುಬರುವ ಪ್ರತ್ಯಯಾಂತ ಸಂಸ್ಕೃತಪದಮಿಶ್ರಿತ ‘ಮಣಿ ಪ್ರವಾಳಶೈಲಿ’ ಈ ನೆಲದ ಮೇಲೆ ಜೈನರು ನಡೆಸಿದ ಒಂದು ವಿಫಲ ಪ್ರಯೋಗವಾಗಿರಲು ಸಾಧ್ಯವಿದೆ. ಆಮೇಲೆ ಸಂಸ್ಕೃತವನ್ನು ಸಮಸಂಸ್ಕೃತ ಮತ್ತು ತದ್ಭವ ರೂಪಗಳಲ್ಲಿ ಕನ್ನಡಕ್ಕೆ ಒಗ್ಗಿಸಿಕೊಳ್ಳವ ಒಪ್ಪಂದಧೋರಣೆ, ಸಂಸ್ಕೃತ ಮತ್ತು ಸಮಸಂಸ್ಕೃತಗಳನ್ನು ಕನ್ನಡದಲ್ಲಿ ಸಮಾಸವಾಗಿಸದ ವಿರೋಧಧೋರಣೆಗಳಲ್ಲಿ ಜೈನರ ವೇದನೆ ಸಂವೇದನೆಗಳು ಎದ್ದು ಕೇಳಿಸುತ್ತವೆ. ಒಟ್ಟಿನಲ್ಲಿ ತಮ್ಮ ರಕ್ತವೆಂದು ಭಾವಿಸಿದ್ದ ಕನ್ನಡದ ‘ರಕ್ತಶುದ್ಧಿ’ ಸಂಸ್ಕೃತದ ಬಳಕೆಯಿಂದ ಹಾಳಾಗುವುದೆಂಬ ಭೀತಿ ಇವರಿಗೆ.

ಪರಗನ್ನಡಂ ಪುದಂಗೂಳೆ

ಕೊರೆ ಸಕ್ಕದಮಂ ತಗ್ಗುರ್ಗೆ ಜಾಣ್ಕಿಕಡೆ ಮುತ್ತುಂ

ಮೆರಸುಂ ಕೋದಂತಿರೆ ಪೇ

ರ್ವಿರೆಗವಿಗಳ ಕವಿತೆ ಬಂದನರೆರ್ದೆಗೊಳಿಸುಗುಮೇ

(ನಾಗವರ್ಮನ ಕಾವ್ಯಾವಲೋಕನ)

ಸಕ್ಕದಮಂ ಪೇರ್ವೊಡೆ ನೆರೆ

ಸಕ್ಕದಮಂ ಪೇರ್ಗೆ ಸುದ್ಧಗನ್ನಡದೊಳ್ ತಂ

ದಿಕ್ಕುವುದೆ ಸಕ್ಕದಮಂ

ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ॥

(ನಯಸೇನನ ಧರ್ಮಾಮೃತ)

ಎಂಬ ನಯಸೇನಾದಿಗಳ ಈ ಹೇಳಿಕೆಗಳು ಕರ್ನಾಟಕದ ಜೈನ ಜನಾಂಗದ ಒಟ್ಟು ಅಭಿಪ್ರಾಯವನ್ನು ಧ್ವನಿಸುತ್ತವೆ. ಈ ಧೋರಣೆಯ ಪರ ಮಾವಧಿ ನಿದರ್ಶನವೆಂದರೆ ಆಂಡಯ್ಯನ ಕಬ್ಬಿಗರ ಕಾವ. ಮಾತೃಭಾಷೆ ಯ ಅಭಿಯಾನ ದುರಭಿಮಾನಕ್ಕೆ ತಿರುಗಿದ ಇವನ ರೀತಿ ಪ್ರೀತಿಸುವ ಭರದಲ್ಲಿ ಪ್ರಾಣವನ್ನೇ ಕಮರಿಸುವ ಪ್ರಯತ್ನವೆನಿಸಿದೆ. ಅನ್ಯಭಾಷೆಯ ಸಂಪರ್ಕದಿಂದ ಭಾಷೆ ಕುಲಗೆಡುತ್ತದೆಯೆಂಬ ಜೈನರ ಈ ಭಾವನೆ ಅನೈಸರ್ಗಿಕವಾದುದು. ಓಣಿಯ ಕೂಸಾಗಿ ಬೆಳೆಯಬೇಕಾದ ಭಾಷೆ ಯನ್ನು ಕೋಣೆಯ ಕೂಸಾಗಿ ಬೆಳೆಯಿಸುವ ಧೋರಣೆಯಿದು. ಆ ಕಡೆ ಬ್ರಾಹ್ಮಣರು ಕನ್ನಡವನ್ನು ಅಸ್ಪಶ್ಯವೆಂದು ಮುಟ್ಟದುದು ಎಷ್ಟು ಅತಿಯಾಯಿತೋ ಈ ಕಡೆ ಜೈನರು ಸ್ಪಶ್ಯರೆಂದು ಮುಟ್ಟಿಗೆಯಲ್ಲಿ ಮುಚ್ಚಿ ಹಿಡಿದುದು ಅಷ್ಟೇ ಅತಿಯಾಯಿತು. ಸ್ಥೂಲವಾಗಿ ಒಂದು ಅರ್ಥದಲ್ಲಿ ಬ್ರಾಹ್ಮಣರು ಸಂಸ್ಕೃತದ ಮಡಿವಂತರು ಜೈನರು ಕನ್ನಡದ ಮಡಿವಂತರು ಎನ್ನಬಹುದು. ಜೈನಮನಸ್ಸು ಸ್ಥಿತಿಸ್ಥಾಪಕವಲ್ಲವಾದುದರಿಂದ ಅವರ ತತ್ವಾಚರಣೆಯಲ್ಲಿರುವ ರಿಜಿಡಿಟಿ, ಭಾಷೆಯ ವಿಷಯದಲ್ಲಿಯೂ ಕಂಡು ಬಂದುದು ತೀರ ಸಹಜ, ಸ್ವಾಭಾವಿಕ. ಜೈನರಂತೆ ವೀರಶೈವರೂ ಕನ್ನಡ ಮಾತೃಭಾಷಾ ವ್ಯಾಮೋಹಿಗಳುಇದಕ್ಕೆ ಕಾರಣ ಈ ಜನಾಂಗದ ಬಹುಸಂಖ್ಯೆ ಪ್ರಜೆಗಳು ಮೂಲತಃ ಆರ್ಯ ರಲ್ಲದವರು ಈ ನಾಡಿನ ಮಣ್ಣಿಗೆ ಸಂಬಂಧಿಸಿದವರು ಕನ್ನಡದ ಬಗ್ಗೆಇವರು ಇಟ್ಟುಕೊಂಡ ಮಾತೃಭಾಷಾ ಪ್ರೀತಿಯನ್ನು ವ್ಯಕ್ತಪಡಿಸುವ ನೋಡಿರೆ ಕನ್ನಡವ, ನುಡಿಸಿರೆ ಕನ್ನಡವ

ತಲೆಯೊಲೆವುತ ಬಂದು ಕುಣಿಯುವ ಕನ್ನಡವ ॥

ಒಂದೆ ಕಾಲವಳು ಕೆದರಿದ ಮಂಡೆಯವಳು

ಒಂದು ಮೊಲೆಗೆ ಒಕ್ಕಳದ ಹಾಲ ಕರೆವವಳು ॥

ಅಂದೆ ಹುಟ್ಟಿತೊಂದು ರತ್ನವರ್ಣದ ಬಳ್ಳಿ! ಎತ್ತೇನೆಂದಡೆ ಏಳದು!

ಕಿತ್ತೇನೆಂದಡೆ ಕೀಳದು ॥

ನಿಜಗುಣ ಗುರುಸಿದ್ಧರಾಮನ ಕನ್ನಡವ

ನಿಜಲಿಂಗಲೀಲೆಯೊಳು ಕುಣಿವ ಕನ್ನಡವ ॥

ಎಂಬ ಶರಣನೊಬ್ಬನ ಸ್ವರವಚನ ಅಖಂಡ ವೀರಶೈವಸಮಾಜದ ಪ್ರಾತಿನಿಧಿಕ ಅಭಿಪ್ರಾಯವಾಗಿದೆ. 12ನೆಯ ಶತಮಾನದಷ್ಟು ಪೂರ್ವದಲ್ಲಿಯೇ ಮಾತೃಭಾಷೆಯನ್ನು ಕುರಿತು ಕಟ್ಟಿದ ಈ ಹಾಡು, ಒಂದು ಐತಿಹಾಸಿಕ ದಾಖಲೆಯಾಗಿದೆ. ಈ ಪ್ರೇಮ ಪರಂಪರೆ ವೀರಶೈವಕವಿಗಳಲ್ಲಿ ತುಂಬಿ ತುಳುಕುತ್ತ ಬಂದುದಕ್ಕೆ ಭೀಮಕವಿಯ ‘‘ಬರಿಯ ಕನ್ನಡ ಭಾಷೆಯೆಂದೆನಲಾಗದಿಳೆಗಿದು ಲೇಸೆನಿಪ ವೇದಪ್ರಮಾಣವೆಸಪ್ಪುದು’’ ಎಂಬಂತಹ ಹೇಳಿಕೆಗಳ ಹಿಂದಿರುವ ಉತ್ಕಟ ಭಾಷಾಭಕ್ತಿಯು ನಿದರ್ಶವೆನಿಸಿದೆ.

ಹೀಗೆ ಪ್ರಾಂತಭಾಷೆಯ ಬಗೆಗಿನ ಪ್ರೀತಿ ಪ್ರಸಾರಗಳ ವಿಷಯ ವಾಗಿ ಜೈನ ವೀರಶೈವ ಸಮಾಜಗಳ ಒಲವು ಒಂದೇ ಬಗೆಯಾಗಿದ್ದರೂ ‘ಮಾತೃಭಾಷಾ ಮಾಧ್ಯಮ’ದ ವಿಷಯವಾಗಿ ಮಾತ್ರ ತೀರ ಭಿನ್ನವಾದುದು. ಅದು: ಜೈನರು ಕನ್ನಡವನ್ನು ಕೋಣೆಯ ಕೂಸಾಗಿ ಬೆಳೆಸುವ ಧೋರಣೆಯಿಟ್ಟುಕೊಂಡರೆ, ವೀರಶೈವರು ಓಣಿಯ ಕೂಸಾಗಿ ಬೆಳೆಸುವ ಧೋರಣೆಯನ್ನಿಟ್ಟುಕೊಂಡರು. ಪೊಸಗನ್ನಡದಿಂ ವ್ಯಾವ

ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ

ತಿಸಿ ಕೂಡಲಾರದಕ್ಕಟ

ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ ॥

(ನಯನ ಸೇನ)

ನೋಡುವುಡೊಂದಕ್ಕರಮದು

ಮಾಡುವೊಡುಚ್ಚರಣೆಗರಿದು ಮೂರುಂ ತೆರನಂ ॥

ಕೊಡೆ ಕವಿತತಿ ವಿಚಾರಿಸ

ಬೇಡದರೆಂ ರಳಕುಳಕ್ಷಳಂಗಳನಿದರೊಳ್ ॥

(ಹರಿಹರ)

ಕನ್ನಡದಲ್ಲಿ ಸಂಸ್ಕೃತವನ್ನು ಬಳಸಬಾರದೆಂಬ ನಯಸೇನನ ನಿಷ್ಠುರ ಧೋರಣೆಯೆತ್ತ? ಕನ್ನಡವನ್ನು ಕಾಲಧರ್ಮಕ್ಕೆ ತಕ್ಕಂತೆ ವ್ಯತ್ಯಾಸ ಮಾಡಿಕೊಳ್ಳಬೇಕೆಂಬ ಹರಿಹರನ ಉದಾರ ಧೋರಣೆಯೆತ್ತ? ಈ ಪದ್ಯಗಳು ಎರಡು ಜನಾಂಗಗಳ ಪರಸ್ಪರ ವಿರುದ್ಧ ಭಾವನೆಗಳನ್ನು ಪ್ರತಿನಿಸುತ್ತವೆ. ಈ ಧೋರಣೆಯನ್ನು ಕಾರ್ಯಗತಗೊಳಿಸುವಲ್ಲಿ ವೀರಶೈವರು ಅನುಸರಿಸಿದ ದಾರಿ, ಬೆಳೆಯಬೇಕೆನ್ನುವ ಭಾಷೆಗೆ ಯಾವ ಕಾಲಕ್ಕೂ ಆದರ್ಶಪ್ರಾಯವೆನಿಸಿದೆ. ವಚನಸಾಹಿತ್ಯವನ್ನು ಗಮನಿಸಿದಲ್ಲಿ ಈ ಅಂಶಗಳು ಹೀಗೆ ಸ್ಪಷ್ಟವಾಗುತ್ತವೆ. 1) ಬಳಕೆ ತಪ್ಪಿದ ಹಳೆಯ ಪದಗಳನ್ನು ಮತ್ತೆ ಬಳಕೆಗೆ ತರುವುದು:

ಭಾಷೆ, ಭೂತದಿಂದ ಭವಿಷ್ಯಕ್ಕೆ ಮುನ್ನುಗ್ಗುವಲ್ಲಿ ತನ್ನ ಹಳೆಯ ಪದ ಗಳನ್ನು ಕಳೆದುಕೊಳ್ಳುತ್ತ ಹೊಸ ಪದಗಳನ್ನು ಪಡೆಯುತ್ತ ಹೋಗುತ್ತದೆ, ಈಗ ಕೆಲವು ಸಲ ಹಳೆಯ ಪದ ಸ್ಪಷ್ಟವಾಗಿ ಕಳೆದು ಹೋಗಿ, ಹೊಸ ಪದ ಅಸ್ಪಷ್ಟವಾಗಿ ಮೂಡುತ್ತಿರುವ ಪರಿಸ್ಥಿತಿಯೂ ತಲೆದೋರುತ್ತದೆ. 12ನೆಯ ಶತಮಾನದಲ್ಲಿ ಗೋಚರಿಸಿದ ಇಂಥ ಕೊರತೆಯನ್ನು ಮತ್ತೆ ಆ ಹಳೆಯ ಪದಗಳ ಬಳಕೆಯಿಂದ ತುಂಬಿಕೊಂಡರು, ಶರಣರು.ಇದಲ್ಲದೆ ಅವರಲ್ಲಿ ಬಹುಜನರು ತೀರ ಸಾಮಾನ್ಯ ಮಟ್ಟದಿಂದ ಮತ್ತು ಅನೇಕ ಕಾಯಕಗಳ ಮೂಲದಿಂದ ಬಂದ ಕಾರಣ ಅವರ ವಚನಗಳಲ್ಲಿ ತಮ್ಮ ಜಾತಿ, ಪ್ರದೇಶ, ಕಾಯಕಗಳಿಗೆ ಸಂಬಂಧಿಸಿದ ಅನೇಕ ಶಬ್ದಗಳು ಸಾಹಿತ್ಯ ಗದ್ದುಗೆಯನ್ನು ಏರಿದವು. ಇದರ ಫಲ ವಾಗಿ ಕಮ್ಮಟ, ಉಂಡಿಗೆ, ಚೆಂಗಳ್, ಜಲಗ, ತಗರ, ಜೂಬು ಅಣಚಿ, ಅಡುಗಬ್ಬು, ಹಿದಿರೆ, ಬಜಾವಣೆ, ಕಂದಲು, ಕೆಸರುಗಲ್ಲು, ಚೇಗೆ, ಪಾಕುಳ, ಪಿಂಡಿಗೆ, ಬಗ್ಗುರಿ, ಬಗದಳ, ಜಾಯಿಗ, ಮಿಟ್ಟಿ ಎಂಬ ಸೊಗಸಾದ ಪದಗಳು ಮತ್ತೆ ಸಾಹಿತ್ಯದಲ್ಲಿ ಕಾಣಿಸಿಕೊಂಡ ವು. ನಾಲಗೆಯ ಮೇಲಿಂದ ಉರುಳುತ್ತಲಿದ್ದ ಈ ಶಬ್ದಗಳನ್ನು ಎತ್ತಿ ಹಿಡಿದು ಪ್ರಯೋಗಿಸಿದ ಕಾರಣ, ಶರಣರ ಬರವಣಿಗೆ ಜನತೆಯ ಸಮೀಪಕ್ಕೆ ಬಂದಿತು; ಓದುವಿಕೆಯಲ್ಲಿ ಆತ್ಮೀಯ ಸಂಬಂಧ ಸಾಧ್ಯವಾಯಿತು. 2) ಹಳೆಯ ಪದಗಳಿಗೆ ಹೊಸ ಅರ್ಥ ತುಂಬುವುದು:

 ಹೊಸಯುಗವನ್ನು ತೆರೆಯಲಿರುವ ಶರಣರು ಹೊಸ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಸಂವರ್ಧನೆಗೆ ಈ ಪ್ರಯತ್ನ ತೀರ ಅವಶ್ಯಕ. ವೀರಶೈವವನ್ನು ಕನ್ನಡ ಭಾಷಾಮಾಧ್ಯಮದಿಂದ ಪ್ರಕಟಪಡಿಸಬೇಕಾದ ಶರಣರಿಗೆ ಈ ಅವಶ್ಯಕತೆ ಎದುರಾಯಿತು. ಆಗ ಹಳೆಯ ಪದಗಳನ್ನು ಬಳಸುವುದರೊಂದಿಗೆ ಹಳೆಯ ಪದಗಳಿಗೆ ಹೊಸ ಅರ್ಥವನ್ನೂ ತುಂಬಿದರು. ಇದರಿಂದಾಗಿ ಬಯಲು, ಕುರುಹು, ಸುರಾಳ, ನಿರಾಳ, ಸ್ಥಲ, ಪ್ರಸಾದ, ಕಾಯಕ, ಜಂಗಮ ಇತ್ಯಾದಿ ಪದಗಳು ಹೊಸ ಅರ್ಥ ತೇಜಸ್ಸಿನಿಂದ ವಚನಕ್ಷೇತ್ರಕ್ಕೆ ಕಾಲಿರಿಸಿದವು.

3) ಹೊಸಪದಗಳನ್ನು ಸೃಷ್ಟಿಸುವುದು :

ಮೇಲೆ ಹೇಳಿದ ಎರಡು ವಿಧಾನಗಳಿಂದ ಸಮೃದ್ಧಗೊಂಡ ಭಾಷಾ ನಿಧಿ ಸಾಲದಾಗಲು, ಶರಣರು ಕೈಕೊಂಡ ಇನ್ನೊಂದು ಉಪಕ್ರಮ ವೆಂದರೆ ಹೊಸ ಪದಗಳ ಸೃಷ್ಟಿ, ಅಕ್ಕವೆ, ಇಲ್ಲವೆ, ಬಿಲಿ, ಈನು, ಸನ್ನಿ ಮೊದ

Writer - ಡಾ. ಎಂ.ಎಂ. ಕಲಬುರ್ಗಿ

contributor

Editor - ಡಾ. ಎಂ.ಎಂ. ಕಲಬುರ್ಗಿ

contributor

Similar News