‘ಪಬ್‍ ಜಿ’ ವ್ಯಸನದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿದ್ಯಾರ್ಥಿ

Update: 2019-09-01 08:18 GMT

ಹೈದರಾಬಾದ್, ಸೆ.14: ಪಬ್‍ ಜಿ ಮೊಬೈಲ್ ಗೇಮ್ ವ್ಯಸನಕ್ಕೆ ಬಲಿಯಾದ ಯುವಕನೊಬ್ಬ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ವನಪರ್ತಿಯ 19 ವರ್ಷದ ವಿದ್ಯಾರ್ಥಿ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಥ್ರಂಬೋಸಿಸ್ (ರಕ್ತ ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆ) ಸಮಸ್ಯೆಯಿಂದ ಬಳಲುತ್ತಿರುವ ಈತ ದೇಹತೂಕ ಕಳೆದುಕೊಂಡಿದ್ದು, ಪೌಷ್ಟಿಕಾಂಶ ಕೊರತೆ ಹಾಗೂ ಡಿಹೈಡ್ರೇಷನ್‍ಗೆ ಕೂಡ ತುತ್ತಾಗಿದ್ದಾನೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಪಬ್ ಜಿಗೆ ಅಂಟಿಕೊಂಡಿದ್ದ ಈತ ತೀವ್ರ ಮಾನಸಿಕ ಒತ್ತಡದಿಂದಲೂ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಆಗಸ್ಟ್ 26ರಂದು ಬಲಗೈ ಎತ್ತಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಯುವಕ ಆಸ್ಪತ್ರೆಗೆ ದಾಖಲಾಗಿದ್ದ. "ಆತನ ಇಡೀ ಗಮನ ಆಟದ ಕಡೆಗೆ ಇರುವ ಕಾರಣದಿಂದ ತೀರಾ ಕಡಿಮೆ ಆಹಾರ ಮತ್ತು ನೀರು ಸೇವಿಸುತ್ತಿದ್ದ. ನಿದ್ದೆಯಿಂದಲೂ ವಂಚಿತನಾಗಿದ್ದ. ಇದರಿಂದಾಗಿ ಕೆಟ್ಟ ರಕ್ತ ಮೆದುಳಿನಲ್ಲಿ ಹೆಪ್ಪುಗಟ್ಟಿದೆ" ಎಂದು ಹಿರಿಯ ನರರೋಗ ತಜ್ಞ ಡಾ.ವಿ.ಕೆ.ವಿನೋದ್ ಕುಮಾರ್ ಹೇಳಿದ್ದಾರೆ.

ಒಂದು ತಿಂಗಳಿಂದ ಈತ ದಿನಕ್ಕೆ ಆರರಿಂದ ಏಳು ಗಂಟೆ ಈ ಗೇಮ್‍ ನಲ್ಲಿ ತಲ್ಲೀನನಾಗುತ್ತಿದ್ದ. ಈ ಅವಧಿಯಲ್ಲಿ 3-4 ಕೆ.ಜಿ. ದೇಹತೂಕ ಕಳೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ತಲೆನೋವು ಹಾಗೂ ವಾಂತಿ ಕಾರಣದಿಂದ ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆಗೆ ಕರೆ ತರುವಾಗ ಯಾವುದಕ್ಕೂ ಸ್ಪಂದಿಸುವ ರೀತಿಯಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News