ಉಡುಗೊರೆ

Update: 2019-09-01 10:23 GMT

ರೇಡಿಯೊದಲ್ಲಿ ಚಿತ್ರ ಗೀತೆಯ ಸಮ ಯವಾದುದರಿಂದ ಕೇಳೋಣ ವೆಂದು ಆನ್ ಮಾಡಿದೆ. ‘ಒಲವಿನ ಉಡುಗೊರೆ ಕೊಡಲೇನು... ರಕುತದಿ ಬರೆದೆನು ಇದ ನಾನು’ ಎಂಬ ಒಂದು ಗೀತೆ ಬರುತ್ತಿತ್ತು. ಅಂದಿನಿಂದ ನನ್ನ ತಲೆಯಲ್ಲಿ ಒಂದು ಹುಳ ಕೊರೆಯಲು ಪ್ರಾರಂಭವಾಗಿ ಬಿಟ್ಟಿತು. ಉಡು ಗೊರೆ ಎಂದರೆ ರಕ್ತದಲ್ಲಿಯೇ ಬರೆದಿರಬೇಕೇ ಅಥವಾ ರಕ್ತದಲ್ಲಿ ಬರೆದಿರಲಾರದ ವಸ್ತುಗಳನ್ನು ಉಡುಗೊರೆ ಎಂದೆನ್ನುವುದಿಲ್ಲವೇ? ಅದುವರೆಗೂ ಉಡುಗೊರೆಗಳೆಂದರೆ ಗೋಗರೆದು ಕೇಳಲಾದ ಅಥವಾ ಪಡೆಯಲಾದ ಉಡುವ ವಸ್ತುಗಳನ್ನು ಮಾತ್ರ ಉಡುಗೊರೆ ಎಂದೆನ್ನುತ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಇಲ್ಲಿ ರಕುತದಿ ಬರೆದ ಉಡುಗೊರೆ ಕೊಡುತ್ತಾರೆಂದರೆ ಉಡುಗೊರೆ ಎನ್ನುವುದು ಸಂಪೂರ್ಣವಾಗಿ ಉಡುವ ವಸ್ತುಗಳಲ್ಲ ಅಥವಾ ಬಟ್ಟೆಗಳಿಗೆ ಸಂಬಂಧಿಸಿದ್ದಲ್ಲ.

ನಾನು ಹಿರಿಯರೊಬ್ಬರನ್ನು ವಿಚಾರಿಸಿ ನೋಡಿದಾಗ ನಾನು ಅಂದುಕೊಂಡಿದ್ದು ನಿಜವಾಯಿತು. ಯಾರದಾದರೂ ಮನೆಯಲ್ಲಿ ಮಗುವೊಂದು ಹುಟ್ಟಿದಾಗ ಅದರ ನಾಮಕರಣದ ಸಮಯದಲ್ಲಿ ಸಾಮಾನ್ಯವಾಗಿ ತಮಗೆ ಆಪ್ತರಾದವರನ್ನೆಲ್ಲಾ ಕರೆಯುತ್ತಾರೆ. ಕರೆಯಿಸಿಕೊಂಡವರು ಬರಿಗೈಯಲ್ಲಿ ಹೋಗುವುದು ಒಳ್ಳೆಯದಲ್ಲ ಎಂದು ಆ ಮಗುವಿಗೆ ಬಟ್ಟೆಯನ್ನು ತೆಗೆದುಕೊಂಡು ಹೋಗುವುದು ರೂಢಿ. ಅಂದರೆ ಇಲ್ಲಿ ಉಡುಗೆಯೊಂದನ್ನು ವಿಶ್ವಾಸಪೂರ್ವಕವಾಗಿ ನೀಡಲಾಯಿತು. ಉಡುಗೆಯನ್ನು ಕೊಟ್ಟಿದ್ದರಿಂದಾಗಿ ಅದು ಉಡು ಗೊರೆ ಎಂದೆನಿಸಿಕೊಂಡಿತು. ಆದರೆ ಇಂದಿನ ದಿನಮಾನಗಳಲ್ಲಿ ಉಡುಗೊರೆ ಬರೀ ಬಟ್ಟೆಗಳ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡು ಬಿಟ್ಟಿದೆ. ಇದು ದಾನವಲ್ಲ. ದಾನದ ಸ್ವರೂಪವೂ ಅಲ್ಲ. ನಮ್ಮ ನಮ್ಮಿಳಗೆ ಕೊಡುಕೊಳ್ಳುವಿಕೆ. ಕೊಡುಕೊಳ್ಳುವಿಕೆ ಎಂದ ಕೂಡಲೇ ವ್ಯವಹಾರವೆಂದು ಅಂದುಕೊಳ್ಳುವಂತಿಲ್ಲ. ಪ್ರೀತಿ ವಿಶ್ವಾಸದ ಚೌಕಟ್ಟಿನಲ್ಲಿ ಸೀಮಿತವಾದುದು. ಉಡುಗೊರೆಯನ್ನು ಇಂಗ್ಲಿಷಿನಲ್ಲಿ ಪ್ರೆಸೆಂಟೇಶನ್ ಎಂದೆನ್ನುತ್ತಾರೆ. ಅಂದರೆ ಹಾಜರು ಪಡಿಸುವುದು, ತೋರಿಸುವುದು, ಪ್ರದರ್ಶಿಸುವುದು ಎಂದೆಲ್ಲಾ ವಿಸ್ತರಿಸಬಹುದು. ಕನ್ನಡದಲ್ಲಿ ನಾವು ಏನೆಲ್ಲಾ ವ್ಯಾಖ್ಯಾನಿ ಸಬಹುದೋ ಹಾಗೆಯೇ ಈಗೆಲ್ಲಾ ಮಾಡುತ್ತಿರುವುದು. ಮದುವೆಯ ಸಮಾರಂಭ, ಸೀಮಂತ ಕಾರಣ, ಬರ್ಥ್ ಡೇ, ವಿವಾಹದ ವಾರ್ಷಿಕೋತ್ಸವ, ಗೃಹ ಪ್ರವೇಶ, ಸನ್ಮಾನ ಸಮಾರಂಭ ಮುಂತಾದ ಕಾರ್ಯಕ್ರಮಗಳಲ್ಲಿ ನೀಡುವ ಉಡುಗೊರೆಗಳನ್ನೆಲ್ಲಾ ಎಲ್ಲರ ಮುಂದೆಪ್ರದರ್ಶಿಸಲೇಬೇಕು. ಇಲ್ಲದಿದ್ದರೆ ನಾವೇನೂ ಕಾಣಿಕೆ ನೀಡಿಲ್ಲ ಎಂದು ಜನ ಅಂದುಕೊಳ್ಳುವುದಿಲ್ಲವೇ? ಅದಕ್ಕಾಗಿ ಜನರ ಮುಂದೆ ತೋರಿಸಬೇಕು. ಇತ್ತೀಚೆಗೆಲ್ಲಾ ಅವು ತೀರಾ ಬದಲಾವಣೆಗಳನ್ನು ಪಡೆದುಕೊಂಡು ಬಿಟ್ಟಿವೆ. ತಾವು ಕೊಡುವ ಉಡುಗೊರೆಗಳೆಲ್ಲ ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ಇಟ್ಟು ಮೇಲೆ ಬಣ್ಣ ಬಣ್ಣದ ಪೇಪರ್‌ಗಳನ್ನು ಸುತ್ತಿ ಅವುಗಳಿಗೆ ರಿಬ್ಬನ್‌ಗಳನ್ನು ಅಂಟಿಸಿ ಜೊತೆಗೆ ಯಾರು ಕೊಟ್ಟಿದ್ದು ಎಂದು ಗೊತ್ತಾಗಲೆಂದು ಮುದ್ರಿತ ಚೀಟಿಯಲ್ಲಿ ತಮ್ಮ ಹೆಸರು ಬರೆದು ನೋಡುಗರಿಗೆ ಕುತೂಹಲ ಮೂಡುವಂತೆ ಮಾಡುತ್ತಾರೆ. ಈಗ ಪ್ರಸೆಂಟೇಶನ್ ಎಂದರೆ ಹಾಗೆಯೇ ಇರಬೇಕು.

ಮುಂದುವರಿದಂತೆ ಗಿಫ್ಟ್ ಎಂಬ ಪದ ಬಳಕೆಯಲ್ಲಿ ಬಂದಿತು. ಅಕ್ಷರ ಹೇಗೆ ಸಣ್ಣದೋ ಗಿಫ್ಟ್ ಕೂಡಾ ಸಣ್ಣದಾಗಿಯೇ ಇರುವುದು. ಚಿಕ್ಕ ವಸ್ತುಗಳನ್ನು ಕಾಣಿಕೆಯಾಗಿ ಕೊಡುವುದು ಗಿಫ್ಟ್. ಮೇಲೆ ತಿಳಿಸಿದ ಕೆಲವು ಸಮಾರಂಭಗಳಲ್ಲಿ ನಗದು ಹಣವನ್ನೇ ಕಾಣಿಕೆಯಾಗಿ ನೀಡಲಾಗುತ್ತಿತ್ತು. ಹಣದ ರೂಪದಲ್ಲಿ ನೀಡುವ ಮುಖ್ಯ ಉದ್ದೇಶ ಆರ್ಥಿಕ ಸ್ಥಿತಿಯಿಂದ ಸಾಮಾನ್ಯನಾಗಿದ್ದವನಿಗೆ ಹಣವನ್ನು ನೀಡಿದರೆ ಅವನ ಆ ಕಾರ್ಯಕ್ಕೆ ತಾವೂ ಪಾಲುದಾರರಾದಂತಾಗುತ್ತದೆ ಎಂಬು ದಾಗಿತ್ತು. ಒಂದು ಪುಸ್ತಕದಲ್ಲಿ ಅವರು ಕೊಟ್ಟ ಹಣದ ಮೌಲ್ಯವನ್ನು ಬರೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಹಣ ನೀಡಲು ಯಾರೂ ಸಿದ್ಧರಿಲ್ಲ. ಯಾಕೆಂದರೆ ಅದು ಯಾರಿಗೂ ಕಾಣುವುದಿಲ್ಲ ಮತ್ತು ಬಳಕೆಯಾಗುವಂತಹದ್ದು. ಅದೇ ತಾವು ಕೊಟ್ಟ ಉಡುಗೊರೆ ಅವರಲ್ಲಿ ಬಹಳ ದಿನಗಳು ಇರಬೇಕು ಎಂಬ ಉದ್ದೇಶದಿಂದಾಗಿಯೇ ಗಿಫ್ಟ್‌ಗಳು ಬಂದಿದ್ದು. ನಾವು ಯಾರದಾದರೂ ಸಮಾರಂಭಕ್ಕೆ ಹೋಗಬೇಕೆಂದಾಗ ಏನು ಗಿಫ್ಟ್ ನೀಡಬೇಕು ಎಂದು ಹೆಚ್ಚು ವಿಚಾರ ಮಾಡುವಂತಿಲ್ಲ. ಏಕೆಂದರೆ ಪ್ರತಿಯೊಂದು ಊರಲ್ಲಿಯೂ ಗಿಫ್ಟ್ ಸೆಂಟರ್‌ಗಳು ಹುಟ್ಟಕೊಂಡಿವೆ. ತರಹೇವಾರಿ ಗಿಫ್ಟ್‌ಗಳು ಅಲ್ಲಿರುತ್ತವೆ. ಯಾವು ದಾದರೂ ಒಳ್ಳೆಯದು ಹಾಗೂ ನಮ್ಮ ಆರ್ಥಿಕ ಮಟ್ಟವೇನು ಎಂದು ಯೋಚಿಸಿದರೆ ಸಾಕು. ಗಿಫ್ಟ್ ಪ್ಯಾಕಾಗಿ ನಿಮ್ಮ ಕೈ ಸೇರುತ್ತದೆ. ಹಣವನ್ನು ಕೊಡುವ ಸಂಸ್ಕೃತಿ ಹೋಗಿ ಗಿಫ್ಟ್‌ಗಳ ಹಾವಳಿಯೇ ಹೆಚ್ಚಾಗಿರುವಾಗ ಬರುವ ಗಿಫ್ಟ್‌ಗಳಾದರೂ ಎಂತಹವು. ಅನೇಕ ರೀತಿಯ ಆಟಿಕೆಗಳು, ಗೊಂಬೆಗಳು, ಮರದಲ್ಲಿ ಕೆತ್ತಲಾದ ವಿವಿಧ ಆಕೃತಿಗಳು, ಗಾಜಿನ ವಸ್ತುಗಳು, ನೇಯಲಾದ ಮತ್ತು ಹೆಣೆಯಲಾದ ಸಾಮಾನುಗಳು, ಪಿಂಗಾಣಿಯಲ್ಲಿ ತಯಾರಿಸಲಾದ ಕಲಾ ಕೃತಿಗಳು. ಇವೆಲ್ಲಾ ಮನೆಯಲ್ಲಿ ಶೋ ಕೇಸ್‌ನಲ್ಲಿ ಇಡಲಿಕ್ಕೆ ಯೋಗ್ಯವಾಗಿ ರುವಂತಹವು. ಈಗ ಕಟ್ಟಿಸಲಾಗುವ ಎಲ್ಲಾ ಹೊಸ ಮನೆಗಳಲ್ಲಿ ಶೋ ಕೇಸ್‌ಗಳು ಇರಲೇಬೇಕು. ಯಾಕೆಂದರೆ ಯಾರೂ ಹಣ ಕೊಡ ಲಾರರು. ಕೊಟ್ಟ ಗಿಫ್ಟ್‌ನ್ನು ತೆಗೆದಿರಿಸಲಿಕ್ಕೆ ಅಥವಾ ಪ್ರದರ್ಶಿಸಲಿಕ್ಕೆ ಒಂದು ಜಾಗ ಬೇಕಲ್ಲ? ಕೆಲವರಂತೂ ಹೂವಿನ ಬೊಕ್ಕೆಗಳನ್ನು ಕೊಡುವ ಪರಿಪಾಠ ಬೆಳೆಸಿಕೊಂಡು ಬಿಟ್ಟಿದ್ದಾರೆ. ಒಂದರ್ಥದಲ್ಲಿ ಇದೂ ಒಳ್ಳೆಯದೇ. ಹೆಚ್ಚು ಖರ್ಚಿಲ್ಲದ ಮತ್ತು ಗ್ರಾಂಡ್ ಎನ್ನಿಸಿಕೊಳ್ಳುವ ಈ ಪದ್ಧತಿ ಗ್ರಾಮಾಂತರ ಪ್ರದೇಶದಲ್ಲಿ ಇಲ್ಲದಿರುವುದೇ ಸಂತೋಷ.

ಕಾಲ ಬದಲಾಗುತ್ತಿದ್ದಂತೆ ಮನುಷ್ಯ ಬದಲಾಗುತ್ತಿದ್ದಾನೆ ಎಂಬುದು ಎಷ್ಟು ನಿಜವೋ, ಮನುಷ್ಯ ತನ್ನೊಂದಿಗೆ ಬಂದ ಆಚರಣೆಗಳನ್ನು ಹಾಗೂ ಸಂಪ್ರದಾಯಗಳನ್ನು ಕೂಡಾ ಬದಲಿಸಿದ್ದಾನೆ. ಅವುಗಳಲ್ಲಿ ಉಡುಗೊರೆಯೂ ಒಂದು.

Writer - ಭೋಜರಾಜ ಸೊಪ್ಪಿಮಠ, ಕೊಪ್ಪಳ

contributor

Editor - ಭೋಜರಾಜ ಸೊಪ್ಪಿಮಠ, ಕೊಪ್ಪಳ

contributor

Similar News