ಜಮ್ಮುಕಾಶ್ಮೀರ: 11 ಪ್ರದೇಶಗಳಲ್ಲಿ ನಿರ್ಬಂಧ ಸಡಿಲ

Update: 2019-09-01 17:35 GMT

ಶ್ರೀನಗರ, ಸೆ. 1: ವಿಧಿ 370 ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹಜ ಸ್ಥಿತಿ ತರಲು ನಿರಂತರ ಹಾಗೂ ಶ್ರದ್ಧೆಯಿಂದ ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರ ಶನಿವಾರ 11 ಪೊಲೀಸ್ ಠಾಣಾ ಪ್ರದೇಶಗಳಲ್ಲಿ ನಿರ್ಬಂಧ ಸಡಿಲಗೊಳಿಸಿದೆ.

105 ಪೊಲೀಸ್ ಠಾಣೆಗಳಲ್ಲಿ 82 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ನಿರ್ಬಂಧ ಹಿಂದೆ ತೆಗೆದಿದೆ. ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ 29ಕ್ಕೂ ಅಧಿಕ ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕ ಮರು ಆರಂಭಿಸಲಾಗಿದೆ. ಅಲ್ಲದೆ, 47 ದೂರವಾಣಿ ವಿನಿಮಯ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿವೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಇರುವ ಸಂದರ್ಭ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಸೇನೆಯ ಕಾರ್ಯಾಚರಣೆ ಸಿದ್ಧತೆ ಬಗ್ಗೆ ಪರಿಶೀಲಿಸಲು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಜಮ್ಮು ಹಾಗೂ ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಜಮ್ಮು ಹಾಗೂ ಕಾಶ್ಮೀರದ 69 ಪ್ರದೇಶಗಳಲ್ಲಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಮಂಗಳವಾರ ಜಮ್ಮು ಹಾಗೂ ಕಾಶ್ಮೀರದ ಶಿಕ್ಷಣ ಇಲಾಖೆಯ ನಿರ್ದೇಶಕ ಯೂನಿಸ್ ಮಲಿಕ್ ಘೋಷಿಸಿದ್ದರು. ಅದಕ್ಕಿಂತ ಮೊದಲು 1500 ಪ್ರಾಥಮಿಕ ಶಾಲೆಗಳು ಮರು ಆರಂಭವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News