×
Ad

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಂಗಳೂರು ಕಲಾವಿದನ 'ಮೂನ್ ವಾಕ್'

Update: 2019-09-02 17:24 IST

ಬೆಂಗಳೂರು :  ಬೆಂಗಳೂರಿನ ರಸ್ತೆಯ ಹೊಂಡ ಗುಂಡಿಗಳು ಅದೆಷ್ಟು ಅಪಾಯಕಾರಿ ಎಂಬುದನ್ನು ಬಿಂಬಿಸಲು ಜನಪ್ರಿಯ ರಂಗಭೂಮಿ ಕಲಾವಿದ ಹಾಗೂ ಚಿತ್ರ ನಟ ಪೂರ್ಣಚಂದ್ರ ಮೈಸೂರು ಅವರು ನಗರದ ರಸ್ತೆಗಳಲ್ಲಿ ಗಗನಯಾತ್ರಿಯ ಉಡುಗೆ  ಧರಿಸಿ ಮೂನ್ ವಾಕ್ ಮಾಡಿದ ವೀಡಿಯೊ ವೈರಲ್ ಆಗಿದೆ.

ಚಂದ್ರನ ಮೇಲ್ಮೈ ಪದರದಲ್ಲಿ ಗಗನಯಾತ್ರಿಗಳು ನಡೆದಾಡುವಂತೆ ಪೂರ್ಣಚಂದ್ರ ಈ  ಹೊಂಡ ಗುಂಡಿಗಳ ನಡುವೆ ನಡೆದಿದ್ದಾರೆ.

ನಗರದ ರಸ್ತೆ ಗುಂಡಿಗಳ ಸಮಸ್ಯೆಯ ಬಗ್ಗೆ ಸ್ಥಳೀಯಾಡಳಿತದ ಗಮನ ಸೆಳೆಯಲು ವಿಚಿತ್ರ ಐಡಿಯಾಗಳನ್ನು ಈ ಹಿಂದೆಯೂ ಕಾರ್ಯರೂಪಕ್ಕಿಳಿಸಿರುವ ಖ್ಯಾತ ಬೀದಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಈ ಬಾರಿ ನಟನನ್ನು ಹೆರೋಹಳ್ಳಿಯ ರಸ್ತೆಗಳಲ್ಲಿ ಮೂನ್ ವಾಕ್ ಮಾಡಿಸಿದ್ದಾರೆ. ಭಾರತದ ಮಿಷನ್ ಚಂದ್ರಯಾನ್ ಸಾಕಷ್ಟು ಸುದ್ದಿಯಲ್ಲಿರುವ ಈ ಸಂದರ್ಭ ಈ ಕಲಾವಿದನ ಮೂನ್ ವಾಕ್ ಕೂಡ ಸಾಮಾಜಿಕ ಜಾಲತಾಣಿಗರ ಗಮನ ಸೆಳೆದಿದೆ.

ಬೆಳ್ಳಿ ಬಣ್ಣದ ಗಗನಯಾತ್ರಿಯ ಉಡುಗೆ ಧರಿಸಿ ಪೂರ್ಣಚಂದ್ರ ನಡೆಯುವಾಗ ಆರಂಭದಲ್ಲಿ ಈ ವೀಡಿಯೊ ಚಂದಿರನ ಅಂಗಳವೇ ಎಂಬ ಭ್ರಮೆಯನ್ನೂ ಮೂಡಿಸುತ್ತದೆ.

''ಮೊಬೈಲ್ ಫೋನ್ ಕ್ಯಾಮರಾದಲ್ಲಿ ರಾತ್ರಿ 10 ಗಂಟೆಯ ನಂತರ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿರುವ ಸಮಯದಲ್ಲಿ ಚಿತ್ರೀಕರಣ ನಡೆಸಲಾಗಿದ್ದು. ಆದರೂ ಕೆಲ ವಾಹನಗಳು ಅತ್ತಿತ್ತ ಸಾಗಿದಾಗ ಅವುಗಳ ಇಂಡಿಕೇಟರ್ ಬೆಳಕು ಹೆಚ್ಚಿನ ಎಫೆಕ್ಟ್ ನೀಡಿದೆ,'' ಎಂದು ನಂಜುಂಡಸ್ವಾಮಿ ಹೇಳುತ್ತಾರೆ.

ಈ ಹಿಂದೆ 2015ರಲ್ಲಿ ನಂಜುಂಡಸ್ವಾಮಿ ಸುಲ್ತಾನಪಾಳ್ಯ ರಸ್ತೆಯಲ್ಲಿ  ಮೊಸಳೆಯ ಪ್ರತಿಕೃತಿಯನ್ನು 12 ಅಡಿ ಉದ್ದದ ಗುಂಡಿಯಲ್ಲಿಟ್ಟು  ಅಧಿಕಾರಿಗಳ ಗಮನ ಸೆಳೆದಿದ್ದರಲ್ಲದೆ ಉದ್ಯಮಿ ಆನಂದ್ ಮಹೀಂದ್ರ ಅವರಿಂದಲೂ ಶ್ಲಾಘನೆಗೊಳಗಾಗಿದ್ದರು.

2017ರಲ್ಲಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯನ್ನು  ಕೊಳದಂತೆ ಅವರು ಪರಿವರ್ತಿಸಿ  ಅದರಲ್ಲಿ ಮತ್ಯಕನ್ಯೆಯ ವೇಷ ತೊಟ್ಟಿದ್ದ ಕಲಾವಿದೆಯನ್ನು ಕುಳ್ಳಿರಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News