ಪ್ರಧಾನಿ ಮೋದಿ ವಿದೇಶ ಸುತ್ತುವುದು ನಿಲ್ಲಿಸಲಿ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2019-09-03 11:54 GMT

ಬೆಂಗಳೂರು, ಸೆ.3: ಪ್ರಧಾನಿ ನರೇಂದ್ರ ಮೋದಿ ವಿದೇಶ ಸುತ್ತುವುದನ್ನು ನಿಲ್ಲಿಸಿ, ದೇಶದ ಆರ್ಥಿಕಾಭಿವೃದ್ಧಿಯೆಡೆಗೆ ಗಮನ ಕೊಡಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ. 

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸಂಕಷ್ಟ ತಲೆದೋರಿದೆ. ದಿನನಿತ್ಯ ನಿರುದ್ಯೋಗಿಗಳ ಸಂಖ್ಯೆ ಏರುತ್ತಲೆ ಇದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಪಂಚ ಪರ್ಯಟನೆ ಮಾಡುವುದನ್ನು ನಿಲ್ಲಿಸಿ, ದೇಶದ ಅಭಿವೃದ್ಧಿ ಎಡೆಗೆ ಗಮನವಹಿಸಲಿ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ರಾತ್ರೋರಾತ್ರಿ ನೋಟು ಅಮಾನ್ಯೀಕರಣ ಮಾಡಿದಾಗಲೇ, ಅದನ್ನು ನಾವು ವಿರೋಧಿಸಿದೆವು. ಆ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಣ್ಣ ಉದ್ಯಮಗಳು ಬಂದ್ ಆದವು. ಈಗ ದೊಡ್ಡ ದೊಡ್ಡ ಉದ್ಯಮಗಳೇ ಬಾಗಿಲು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಪಂಚದಲ್ಲಿಯೇ ಬಲಿಷ್ಠ ಆರ್ಥಿಕ ವ್ಯವಸ್ಥೆ ಹೊಂದಿದ್ದ ಭಾರತ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ. ದಿನೇ ದಿನೇ ಜಿಡಿಪಿಯಲ್ಲಿ ಕುಸಿತ ಕಂಡು ಬರುತ್ತಿದೆ. ಈ ಬಗ್ಗೆ ಮಾನಿ ಪ್ರಧಾನಿ ಮನಮೋಹನ್ ಸಿಂಗ್ ಆತಂಕ ವ್ಯಕ್ತಪಡಿಸಿ, ಜಿಡಿಪಿ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಸಲಹೆಗಳನ್ನು ನೀಡಿರುವುದು ಶ್ಲಾಘನೀಯವೆಂದು ಅವರು ಹೇಳಿದರು.

ದೇಶದ ಆರ್ಥಿಕತೆಯನ್ನು ಸುಧಾರಿಸುವ ಕಡೆಗೆ ಬಿಜೆಪಿ ಸರಕಾರ ಗಮನ ಕೊಡುವುದನ್ನು ಬಿಟ್ಟು, ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ನೀಡುವ ಕಡೆಗೆ ಗಮನ ಕೊಡುತ್ತಿದೆ. ಈಡಿ, ಐಟಿ, ಸಿಬಿಐ ಸೇರಿದಂತೆ ಸ್ವಯತ್ತ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳನ್ನು ಮಣಿಸುವುದಕ್ಕೆ ವಿನಿಯೋಗಿಸುವುದಕ್ಕೆ ಬಳಸಿಕೊಳ್ಳ್ಳುತ್ತಿರುವುದು ಶೋಚನೀಯವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಾಕ್ಸ್ ಈಡಿ ವಿಚಾರಣೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಚೌತಿ ದಿನದಂದು ತಮ್ಮ ತಂದೆಗೆ ಧೂಪ ಹಾಕಲು ಸಾಧ್ಯವಾಗಿಲ್ಲವೆಂದು ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವ್ಯಂಗ್ಯವಾಡಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಎಲ್ಲಿಯೂ ಓಡಿ ಹೋಗಿಲ್ಲ. ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನಾವೆಲ್ಲಾ ಅವರೊಂದಿಗೆ ಇದ್ದೇವೆ.

-ಎಚ್.ಎಂ.ರೇವಣ್ಣ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News