×
Ad

ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ನಿರ್ಧಾರ: ಸಚಿವ ಜಗದೀಶ್ ಶೆಟ್ಟರ್

Update: 2019-09-03 17:34 IST

ಬೆಂಗಳೂರು, ಸೆ.3: ರಾಜ್ಯದಲ್ಲಿ ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ ಅಂದರೆ ಬೆಂಗಳೂರು ಕೇಂದ್ರಿತ ಅನ್ನುವ ಹಾಗಾಗಿದೆ. ಕೈಗಾರಿಕೆಗಳು ಬೆಂಗಳೂರು ಅಲ್ಲದೇ ಬೇರೆ ನಗರಗಳಿಗೂ ವಿಸ್ತರಣೆಯಾಗಬೇಕಿದೆ ಎಂದರು.

ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಕೈಗಾರಿಕಾ ನೀತಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂಬುದರ ಕುರಿತು ಅಧ್ಯಯನ ಮಾಡುತ್ತೇವೆ. ಆನಂತರ, ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕಾ ನೀತಿಯನ್ನು ಜಾರಿ ಮಾಡುತ್ತೇವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಹಿಂದಿನ ಸರಕಾರವು 2020ರ ಜನವರಿಯಲ್ಲಿ ಬಂಡವಾಳ ಹೂಡಿಕೆದಾರರ ಸಮ್ಮೇಳನ ನಡೆಸಲು ತೀರ್ಮಾನಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ಹೂಡಿಕೆದಾರರ ಸಮ್ಮೇಳನದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯಕ್ಕಿಲ್ಲ ಆರ್ಥಿಕ ಹಿಂಜರಿತದ ಬಿಸಿ: ಆರ್ಥಿಕ ಹಿಂಜರಿತವು ಸದ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿದೆ. ರಾಜ್ಯದ ಮಟ್ಟಿಗೆ ಅದರ ಬಿಸಿ ತಟ್ಟಿಲ್ಲ. ಇದೆಲ್ಲ, ತಾತ್ಕಾಲಿಕ ಆರ್ಥಿಕ ಹಿಂಜರಿತವಾಗಿದೆ. ಸದ್ಯದಲ್ಲಿಯೇ ಇದೆಲ್ಲ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಆರ್ಥಿಕ ಹಿಂಜರಿತದ ಪರಿಣಾಮಗಳ ಬಗ್ಗೆ ಇಲಾಖಾವಾರು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಈಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳು. ಕೇಂದ್ರದಿಂದ ಈ ಸಂಸ್ಥೆಗಳ ದುರುಪಯೋಗವಾಗಿಲ್ಲ. ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಅವರಿಗೆ ಹಾಗೆ ಅನಿಸಿರಬಹುದು. ಅವರ ಭಾವನೆಗಳಿಗೆ ನಾವು ಏನು ಮಾಡಲು ಸಾಧ್ಯವಿಲ್ಲ. ಈಡಿ ಹಾಗೂ ಸಿಬಿಐ ಪ್ರಕರಣಗಳು ಇಂದು ನಿನ್ನೆಯದಲ್ಲ, ಮೊದಲಿನಿಂದಲೂ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಜಿಂದಾಲ್ ಸಂಸ್ಥೆಗೆ ನೀಡಲು ಉದ್ದೇಶಿಸಿದ್ದ ಭೂಮಿಯನ್ನು ಹಿಂಪಡೆಯಲು ಆಗುತ್ತಿರುವ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಸರಕಾರ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ನೀಡಿರುವ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಮಧ್ಯಂತರ ಚುನಾವಣೆ ಇಲ್ಲ: ರಾಜ್ಯದಲ್ಲಿ ಡಿಸೆಂಬರ್ ವೇಳೆಗೆ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಯಾವಾಗ ಭವಿಷ್ಯಗಾರರು ಆದರೋ ಗೊತ್ತಿಲ್ಲ. ಮೈತ್ರಿ ಸರಕಾರ ಹೋದ ಮೇಲೆ ಅವರು ಖಾಲಿ ಆಗಿದ್ದಾರೆ. ಹೀಗಾಗಿ, ಮಧ್ಯಂತರ ಚುನಾವಣೆಯ ನಿರೀಕ್ಷೆಯಲ್ಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News