ಶಿವಕುಮಾರ್ ತಪ್ಪು ಮಾಡಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ: ಡಿಸಿಎಂ ಕಾರಜೋಳ

Update: 2019-09-03 12:08 GMT

ಬೆಂಗಳೂರು, ಸೆ.3: ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ಸಾಂವಿಧಾನಿಕ ಸಂಸ್ಥೆಗಳು. ಅವು ಸ್ವತಂತ್ರವಾಗಿ ತನಿಖೆ ಮಾಡುತ್ತವೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿರುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಮಂಗಳವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟ ಕಾಲದಲ್ಲಿರುವವರನ್ನು ನೋಡಿ ಸಂತೋಷ ಪಡುವುದು ಮನುಷ್ಯತ್ವವಲ್ಲ. ಜಾರಿ ನಿರ್ದೇಶನಾಲಯದ ತನಿಖೆಯ ಬಳಿಕ ಎಲ್ಲ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ಮಾಡಿದ್ದಾರೆ ಎಂಬುದು ಊಹಾಪೋಹ. ಕೆಲವರು ಸಾಂದರ್ಭಿಕವಾಗಿ ರಾಜಕೀಯ ಮಾಡುತ್ತಾರೆ. ಆದುದರಿಂದ, ಇದಕ್ಕೆಲ್ಲ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು.

ನಾನು ಎಂದಿಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಲ್ಲ. ಅಲ್ಲದೇ, ಹಿಂಪಡೆಯುವಂತಹ ಹೇಳಿಕೆಯನ್ನು ನೀಡಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದೆ. ಆದರೆ, ಶಿವಕುಮಾರ್ ತಪ್ಪು ಮಾಡಿದ್ದಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅವರ ಬಗ್ಗೆ ನನಗೆ ಗೌರವವಿದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗಲೂ ಹಲವರ ಮೇಲೆ ಐಟಿ, ಈಡಿ ದಾಳಿಗಳು ನಡೆದಿವೆ. ಅದನ್ನೆಲ್ಲ, ಕಾಂಗ್ರೆಸ್‌ನವರೇ ಮಾಡಿಸಿದ್ದಾರೆ ಎಂದು ಹೇಳಲು ಸಾಧ್ಯವೇ? ಐಟಿ ಹಾಗೂ ಈಡಿ ಸ್ವತಂತ್ರವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.

ಇದಕ್ಕೂ ಮುನ್ನ ರಾಮನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಗೋವಿಂದ ಕಾರಜೋಳ, ಬೆಂಗಳೂರು-ಮೈಸೂರು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2020ರೊಳಗೆ ಪೂರ್ಣಗೊಳಿಸಬೇಕು. ಇಂಜಿನಿಯರ್‌ಗಳು ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ನಿರಂತರವಾಗಿ ಸೈಟ್(ಕಾಮಗಾರಿ ನಡೆಯುವ ಸ್ಥಳ)ಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು. ಬೆಂಗಳೂರು-ಮೈಸೂರು ಷಟ್ಪಥ ರಸ್ತೆಯ ಪ್ರಾತ್ಯಕ್ಷಿಕೆಯನ್ನು ಉಪ ಮುಖ್ಯಮಂತ್ರಿ ವೀಕ್ಷಿಸಿದರು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ರಾಮನಗರ ಜಿಲ್ಲೆಯ ಕೈಲಾಂಚ ಗ್ರಾಮದಲ್ಲಿರುವ ಹಾಸ್ಟೆಲ್ ನಿರ್ವಹಣೆಯಲ್ಲಿ ಲೋಪವೆಸಗಿರುವ ವಾರ್ಡನ್ ಅಮಾನತಿಗೆ ಆದೇಶಿಸಿದ ಅವರು, ಹಾಸ್ಟೆಲ್ ಅನ್ನು ಸರಕಾರಿ ಕಟ್ಟಡಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News