×
Ad

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲ್ಲ: ಸಚಿವ ಆರ್.ಅಶೋಕ್

Update: 2019-09-03 17:49 IST

ಬೆಂಗಳೂರು, ಸೆ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟಿರಲಾರದೇ ಮಧ್ಯಂತರ ಚುನಾವಣೆಯ ಜಪ ಮಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಅವರ ಮಾತಿನಲ್ಲಿ ಯಾವುದೇ ತಿರುಳಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನಮ್ಮ ಸರಕಾರದ ಮೊದಲ ಆದ್ಯತೆ. ನೆರೆ ಹಾವಳಿಯಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ ಎಂದರು.

ಕೇಂದ್ರ ಅಧ್ಯಯನ ತಂಡವೇ ಅಂದಾಜು 38 ಸಾವಿರ ಕೋಟಿ ರೂ.ನಷ್ಟವಾಗಿರುವ ಕುರಿತು ಮಾಹಿತಿ ನೀಡಿದೆ. ಆದಷ್ಟು ಶೀಘ್ರವೇ ಕೇಂದ್ರ ಸರಕಾರ ನೆರೆ ಪರಿಹಾರಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಅಶೋಕ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸೆ.7 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ನೆರೆ ಪರಿಹಾರಕ್ಕೆ ಹೆಚ್ಚಿನ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು. ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿವಕುಮಾರ್ ಪ್ರಕರಣ ರಾಜಕೀಯ ಪ್ರೇರಿತವಾದುದಲ್ಲ. ಅದರ ಅವಶ್ಯಕತೆ ಬಿಜೆಪಿಗಿಲ್ಲ. ಈಗ ಕೇವಲ ವಿಚಾರಣೆ ಆರಂಭವಾಗಿದೆಯಷ್ಟೇ ಎಂದರು.

ಹಿಂದಿನ ಸರಕಾರ ನಮ್ಮ ನಾಯಕ ಯಡಿಯೂರಪ್ಪ ಮೇಲೂ ಅನೇಕ ಪ್ರಕರಣಗಳನ್ನು ಹಾಕಿತ್ತು. ಅದು ದ್ವೇಷದ ರಾಜಕಾರಣವಾಗಿರಲಿಲ್ಲವೇ? ಎಂದು ಅಶೋಕ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News