ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿಕೆ: ಸಚಿವ ಸುರೇಶ್ ಕುಮಾರ್

Update: 2019-09-03 13:17 GMT

ಬೆಂಗಳೂರು, ಸೆ.3: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ನಾಳೆಯಿಂದ ಮುಂದುವರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಮಂಗಳವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ಪ್ರಕ್ರಿಯೆ ನಡುವೆ ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಹೀಗಾಗಿ, ಚಾಲ್ತಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿ ರೂಪಿಸದೇ ಸರ್ವ ಸಮ್ಮತವಾದ ನಿರ್ಧಾರ ಅಸಾಧ್ಯವಾಗಿದೆ. ಆದರೆ, ಶಿಕ್ಷಕರ ವರ್ಗಾವಣೆ ಎಲ್ಲರಿಗೂ ಸಹ್ಯವಾಗುವಂತೆ ಪರಿಶೀಲಿಸಲು ಸೂಚಿಸಿದ್ದೇನೆ ಎಂದರು.

ಶಿಕ್ಷಕರ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ತಿಗೊಳಿಸುತ್ತೇವೆ. ನಾಳೆಯಿಂದ ನಡೆಯಲಿರುವ ಕೌನ್ಸೆಲಿಂಗ್‌ನಲ್ಲಿ ಸೂಕ್ತವಾದ, ಹತ್ತಿರದಲ್ಲಿರುವುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಇದರಲ್ಲಿ ಸಿಗದೇ ಇದ್ದವರಿಗೆ ಮುಂದಿನ ವರ್ಗಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ 16,066 ಜನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದಿದೆ. ಆದರೆ, ಇನ್ನೂ ಕೆಲಸದ ಆದೇಶ ಪತ್ರ ನೀಡಿಲ್ಲ. ಉಳಿದಂತೆ ಕಡ್ಡಾಯ ವರ್ಗಾವಣೆಯಲ್ಲಿ 4,260, ಪರಸ್ಪರ ವರ್ಗಾವಣೆಯಲ್ಲಿ 3,777 ಶಿಕ್ಷಕರು ಅರ್ಹರಾಗಿದ್ದಾರೆ. ಇವರ ಪ್ರಕ್ರಿಯೆ ಮುಗಿದ ನಂತರ ಎಲ್ಲರಿಗೂ ಕೆಲಸದ ಆದೇಶ ನೀಡಲಾಗುವುದು. ಅಲ್ಲದೆ, ಅಂತರ್ ಘಟಕ ವರ್ಗಾವಣೆಗೆ 14,077 ಜನರು ಅರ್ಜಿ ಸಲ್ಲಿಸಿದ್ದರೂ, ಈ ಕುರಿತು ನಾವು ಯಾವುದೇ ಯೋಚನೆ ಮಾಡಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ಕಡ್ಡಾಯ ವರ್ಗಾವಣೆಗೆ ಗುರುತಿಸಲಾದ ಪ್ರಾಥಮಿಕ ಶಾಲೆಯ 4,084 ಶಿಕ್ಷಕರಲ್ಲಿ 713 ಹುದ್ದೆಗಳು ಬಿ ಮತ್ತು ಸಿ ವಲಯದಲ್ಲಿ ಕೊರತೆಯಾಗಲಿವೆ. ಪ್ರೌಢಶಾಲೆಯ 1,234 ಶಿಕ್ಷಕರಲ್ಲಿ ವಿಷಯವಾರು 345 ಹುದ್ದೆಗಳು ಕೊರತೆಯಾಗಲಿವೆ. ಹೀಗಾಗಿ, 1,058 ಶಿಕ್ಷಕರು ವಿಷಯ ಅಥವಾ ಮಾಧ್ಯಮದ ಕೊರತೆಯಿಂದಾಗಿ ವರ್ಗಾವಣೆಯಿಂದ ವಿನಾಯತಿ ಪಡೆಯಲಿದ್ದು, 4,260 ಶಿಕ್ಷಕರಷ್ಟೇ ವರ್ಗಾವಣೆಯಾಗಲಿದ್ದಾರೆ ಎಂದು ಹೇಳಿದರು.

ಕಾಯ್ದೆ ತಿದ್ದುಪಡಿ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇಡಲಾಗಿರುವ ಕಡ್ಡಾಯ ವರ್ಗಾವಣೆ ಪದವೇ ಗಾಬರಿಗೊಳಿಸುವಂತಿದೆ. ಹೀಗಾಗಿ, ಕಡ್ಡಾಯ ವರ್ಗಾವಣೆ ಎಂಬ ಪದ ಬದಲಿಸಲು ಕ್ರಮ ವಹಿಸಲಾಗುವುದು. ಈ ಕಾಯ್ದೆ ಶಿಕ್ಷಕರಿಗೆ ಅನಾನುಕೂಲವಾಗಲಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.

ಮುಂದಿನ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರವಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಅಷ್ಟರೊಳಗೆ ಕಾಯ್ದೆಯನ್ನು ತಿದ್ದುಪಡಿ, ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ತರಲಾಗುವುದು. ಈ ಸಂಬಂಧ ಶಿಕ್ಷಕರ ಸಂಘಟನೆಗಳು, ವಿಧಾನಪರಿಷತ್ ಸದಸ್ಯರೊಂದಿಗೆ ಸಭೆಗಳನ್ನು ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಶಿಕ್ಷಕರ ನೇಮಕಾತಿ

ಈಗಾಗಲೇ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಎಲ್ಲರಿಗೂ ಕೆಲಸದ ಆದೇಶದ ಪ್ರತಿ ನೀಡಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸಿ ಸಾಮಾನ್ಯ ಪರೀಕ್ಷಾ ಮಂಡಳಿ ರಚಿಸುವ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು ಚಿಂತನೆಯೂ ನಡೆದಿಲ್ಲ.

-ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News