ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಡಿಸಿಪಿ ಅನುಚೇತ್‌ಗೆ ಕೆಂಪೇಗೌಡ ಪ್ರಶಸ್ತಿ

Update: 2019-09-03 17:08 GMT
ಎಂ.ಎನ್.ಅನುಚೇತ್

ಬೆಂಗಳೂರು, ಸೆ.3: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಭೇದಿಸಿದ ಡಿಸಿಪಿ ಎಂ.ಎನ್.ಅನುಚೇತ್ ಸೇರಿದಂತೆ ಆರು ಸದಸ್ಯರನ್ನೊಳಗೊಂಡ ತಂಡವನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆಂಪೇಗೌಡರ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಮೇಯರ್ ಗಂಗಾಂಬಿಕೆ, ಈ ಬಾರಿಯ ಕೆಂಪೇಗೌಡ ಪ್ರಶಸ್ತಿಯನ್ನು 100 ಸಾಧಕರಿಗೆ ನೀಡಲಾಗುತ್ತಿದ್ದು, ಸೆ.4ರ ಸಂಜೆ 5 ಗಂಟೆಗೆ ಬಿಬಿಎಂಪಿಯ ಕಚೇರಿಯ ಡಾ.ರಾಜ್‌ಕುಮಾರ್ ಗಾಜಿನ ಮನೆ ಆವರಣದಲ್ಲಿ ಕೆಂಪೇಗೌಡ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಕೆಂಪೇಗೌಡರ ಪ್ರಶಸ್ತಿಯನ್ನು ಆಯ್ಕೆ ಮಾಡಲು ನ್ಯಾ.ಎ.ಜೆ. ಸದಾಶಿವ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯಲ್ಲಿ ಕಮಲಾಕ್ಷಿ, ಇಂದಿರಾ ಕೃಷ್ಣಪ್ಪ ಹಾಗೂ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಹಾಗೂ ಬಿಬಿಎಂಪಿಯ ಹೆಚ್ಚುವರಿ ಆಯುಕ್ತ (ಆಡಳಿತ) ರಂದೀಪ್ ಸೇರಿದಂತೆ 10 ಜನ ಸದಸ್ಯರು ಇದ್ದರು. ಇನ್ನು, ಸಮಿತಿ ಬೆಂಗಳೂರು ನಗರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ 70 ಸಾಧಕರು ಹಾಗೂ ಮೇಯರ್ ಸಮಿತಿಯಿಂದ 30 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಪ್ರಶಸ್ತಿಗೆ 10 ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಈ ಸಮಿತಿಯ ಮುಂದೆ ನಿಗದಿತ ಕಾಲಾವಧಿಯಲ್ಲಿ 400 ಅರ್ಜಿಗಳು ಬಂದಿದ್ದರೂ ಸಮಿತಿಯು ಅರ್ಹ ಸಾಧಕರನ್ನಷ್ಟೇ ಗುರುತಿಸಿದ್ದು, ಪ್ರಶಸ್ತಿ ಪಟ್ಟಿಯನ್ನು 70ಕ್ಕೆ ಇಳಿಸಿದೆ. ಅಲ್ಲದೆ, ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿರುವವರಿಗೆ 50 ಸಾವಿರ ರೂ. ನಗದು ಮತ್ತು ಕೆಂಪೇಗೌಡರ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು. ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಪ್ರಶಸ್ತಿಗೆ ಆಯ್ಕೆಯಾಗಿರುವವರಿಗೆ 25 ಸಾವಿರ ರೂ. ನಗದು ಹಾಗೂ ಲಕ್ಷ್ಮೀದೇವಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದರು.

ಇದೇ ಪ್ರಥಮ ಬಾರಿಗೆ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಶಾಲಾ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ನೀಡಲಾಗುತ್ತಿದ್ದು, ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್ಸ್, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್, ಮುಸ್ಲಿಂ ಅನಾಥಾಶ್ರಮ ಹಾಗೂ ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ 5 ಲಕ್ಷ ರೂ. ಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು

       * ಡಾ.ಚಂದ್ರಶೇಖರ ಪಾಟೀಲ್‌-ಸಾಹಿತ್ಯ

       * ಮುಖ್ಯಮಂತ್ರಿ ಚಂದ್ರು-ಸಿನಿಮಾ

       * ಪ್ರೊ.ರವಿವರ್ಮಕುಮಾರ್‌-ಕಾನೂನು

       * ಪ್ರೊ.ಅಬ್ದುಲ್ ಬಷೀರ್ -ಜಿ.ಸಾಹಿತ್ಯ

       * ಮಾವಳ್ಳಿ ಶಂಕರ್‌-ಸಮಾಜ ಸೇವೆ

       * ವೀರಸಂಗಯ್ಯ ಜೆ.ಎಂ. -ಸಮಾಜ ಸೇವೆ

       * ಮಂಜುಳಾ ಗುರುರಾಜ್-ಸಂಗೀತ

       * ಬಿಂದುರಾಣಿ-ಕ್ರೀಡೆ

       * ಕನಕಮೂರ್ತಿ-ಶಿಲ್ಪಕಲೆ

       * ಸೈಯ್ಯದ್ ಇಬಾದತ್ ಉಲ್ಲಾ ವಿಕಲಚೇತನ-ಕ್ರೀಡಾಪಟು

       * ಪ್ರೊ.ನಾಗೇಶ್ ಬೆಟ್ಟಕೋಟೆ-ರಂಗಭೂಮಿ

       * ಡಿ.ರೂಪ-ಸರಕಾರಿ ಸೇವೆ

       * ಕುಮಾರಿ ಪ್ರತ್ಯಕ್ಷ-ಬಾಲ ಪ್ರತಿಭೆ

       * ಪ್ರೊ.ಶಿವರಾಮಯ್ಯ-ಸಾಹಿತ್ಯ

       * ಗುರುರಾಜ ಕರಜಗಿ-ಶಿಕ್ಷಣ

       * ಪ್ರತಿಭಾ ನಂದಕುಮಾರ್‌-ಸಾಹಿತ್ಯ

       * ಕುಶಲಾ ಡಿಮೆಲ್ಲೊ-ಮಾಧ್ಯಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News