ಹೊಟ್ಟೆಯ ಎಡಭಾಗದಲ್ಲಿ ನಿರಂತರ ನೋಯುತ್ತಿದೆಯೇ?: ಹಾಗಿದ್ದರೆ ಈ ಅಪಾಯಗಳ ಅರಿವಿರಲಿ

Update: 2019-09-04 14:24 GMT

ಹೊಟ್ಟೆನೋವಿನ ಹೆಚ್ಚಿನ ಪ್ರಕರಣಗಳಲ್ಲಿ ಜನರು ಹೊಟ್ಟೆಯ ಎಡಭಾಗದಲ್ಲಿ ಮಾತ್ರ ಅಸಹನೀಯ ನೋವನ್ನು ಅನುಭವಿಸುತ್ತಿರುತ್ತಾರೆ. ಹೊಟ್ಟೆಯ ವಿವಿಧ ಭಾಗಗಳಲ್ಲಿ ನೋವು ವಿಭಿನ್ನ ಅರ್ಥಗಳನ್ನು ನೀಡುತ್ತದೆ.

ಹೊಟ್ಟೆ ನೋವು ಸಾಮಾನ್ಯ,ಆದರೆ ಅದಕ್ಕೆ ಕಾರಣಗಳೇನಿರಬಹುದು? ಹೊಟ್ಟೆ ನೋವಿನ ಬಗ್ಗೆ,ವಿಶೇಷವಾಗಿ ಹೊಟ್ಟೆಯ ಎಡಭಾಗದಲ್ಲಿ ಚುಚ್ಚಿದಂತಹ ನೋವಾಗುತ್ತಿದ್ದರೆ ಕಾಳಜಿಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ಸಾಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ. ನಮ್ಮ ಶರೀರದಲ್ಲಿಯ ಹಲವಾರು ಅಂಗಗಳು ಹೊಟ್ಟೆಯ ಎಡಭಾಗವನ್ನು ಆವರಿಸಿಕೊಂಡಿವೆ ಮತ್ತು ಇಂತಹ ನೋವು ಈ ಅಂಗಗಳ ಅನಾರೋಗ್ಯವನ್ನು ಸೂಚಿಸಬಹುದು. ಹೊಟ್ಟೆಯ ಎಡಭಾಗದಲ್ಲಿ ನೋವಿಗೆ ಕೆಲವು ಕಾರಣಗಳಿಲ್ಲಿವೆ....

ಗ್ಯಾಸ್ಟ್ರಿಕ್ ಸಮಸ್ಯೆಗಳು

 ಗ್ಯಾಸ್ಟ್ರಿಟಿಸ್ ಅಥವಾ ಜಠರದುರಿತವು ಸಾಮಾನ್ಯ ಹೊಟ್ಟೆ ಸಮಸ್ಯೆಯಾಗಿದೆ. ಜಠರದ ಒಳಪೊರೆಗಳ ಉರಿಯೂತ ಇದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆಯು ಮದ್ಯಪಾನಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಲವಾರು ಸಂದರ್ಭಗಳಲ್ಲಿ ಜಠರದುರಿತ ಸಮಸ್ಯೆಯು ಹುಣ್ಣುಗಳಿಗೂ ಕಾರಣವಾಗುತ್ತದೆ. ಕೆಲವು ದಿನಗಳವರೆಗೆ ಹೊಟ್ಟೆಯ ಎಡಭಾಗದಲ್ಲಿ ನಿರಂತರವಾಗಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದು ಗಂಭೀರ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಯಿರುವುದರಿಂದ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ಅಜೀರ್ಣ ಸಮಸ್ಯೆಗಳು

ಹೆಚ್ಚಿನ ಪ್ರಕರಣಗಳಲ್ಲಿ ಅಜೀರ್ಣ ಸಮಸ್ಯೆಯು ಹೊಟ್ಟೆನೋವಿಗೆ ಪ್ರಮುಖ ಕಾರಣವಾಗಿರುತ್ತದೆ. ಕೆಲವೊಮ್ಮೆ ಜಠರದ ಕೆರಳಿಕೆ,ಉಬ್ಬರ ಮತ್ತು ಆಮ್ಲೀಯತೆಯೂ ಇದಕ್ಕೆ ಕಾರಣವಾಗುತ್ತದೆ. ಅಜೀರ್ಣ ಸಮಸ್ಯೆಯ ಹೆಚ್ಚಿನ ಪ್ರಕರಣಗಳಲ್ಲಿ ಹೊಟ್ಟೆಯ ಎಡಭಾಗದಲ್ಲಿ ನೋವು ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಊಟ ಲಘುವಾಗಿರಬೇಕು ಮತ್ತು ಕರಿದ ಆಹಾರಗಳನ್ನು ಸೇವಿಸಬಾರದು,ಜೊತೆಗೆ ನೀರನ್ನು ಯಥೇಚ್ಛವಾಗಿ ಕುಡಿಯಬೇಕು. ಹೈನು ಉತ್ಪನ್ನಗಳಿಗೆ ಅಸಹಿಷ್ಣುತೆ ಹೊಂದಿರುವವರಲ್ಲಿ ಹಾಲಿನ ಸೇವನೆಯು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವುದರಿಂದ ಅದನ್ನು ಮಿತಗೊಳಿಸಬೇಕು.

ಜಠರ ಅಥವಾ ಮೂತ್ರಪಿಂಡ ಕಲ್ಲುಗಳು

ಜಠರ ಅಥವಾ ಮೂತ್ರಪಿಂಡ ಕಲ್ಲುಗಳು ಉಂಟಾಗಿರುವ ಪ್ರಕರಣಗಳಲ್ಲಿ ಹೊಟ್ಟೆಯ ಎಡಭಾಗದಲ್ಲಿ ಆಗಾಗ್ಗೆ ದಿಢೀರನೆ ಚುಚ್ಚಿದಂತಹ ನೋವು ಅನುಭವವಾಗುತ್ತಿರುತ್ತದೆ. ಖನಿಜಾಂಶಗಳು ಸಂಗ್ರಹಗೊಳ್ಳುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ನಿರ್ಮಾಣಗೊಳ್ಳುತ್ತವೆ. ಇಂತಹ ಕಲ್ಲುಗಳ ಗಾತ್ರ ಸಣ್ಣದಾಗಿದ್ದರೆ ನೋವು ಕಾಣಿಸಕೊಳ್ಳುವುದಿಲ್ಲ ಅಥವಾ ಕನಿಷ್ಠ ಪ್ರಮಾಣದಲ್ಲಿ ನೋವಾಗಬಹುದು. ಆದರೆ ಕಲ್ಲುಗಳ ಗಾತ್ರ ಹೆಚ್ಚಿದರೆ ನೋವು ಆರಂಭವಾಗುತ್ತದೆ. ಹೊಟ್ಟೆಯ ಎಡಭಾಗದಲ್ಲಿ ನಿರಂತರ ನೋವು ಕಾಣಿಸಿಕೊಳ್ಳುತ್ತಿದ್ದರೆ ಮೂತ್ರಪಿಂಡ ತಪಾಸಣೆ ಅಗತ್ಯವಾಗುತ್ತದೆ.

ಹೊಟ್ಟೆಯ ಅಭಿಧಮನಿಗಳ ಮೇಲೆ ಒತ್ತಡ

ಕೆಲವೊಮ್ಮೆ ಹೊಟ್ಟೆಯ ಎಡಭಾಗದಲ್ಲಿ ನಿರಂತರ ನೋವು ಹೊಟ್ಟೆಯ ಅಭಿಧಮನಿಗಳ ಎಳೆತದ ಪರಿಣಾಮವಾಗಿರ ಬಹುದು. ಕೆಲವು ಪ್ರಕರಣಗಳಲ್ಲಿ ವ್ಯಾಯಾಮವು ಅದಕ್ಕೆ ಕಾರಣವಾಗಬಹುದು. ಅಂಗವನ್ನು ಬಳಸಿರುವ ಅಭಿಧಮನಿಯ ಬಿಗಿತದಿಂದಾಗಿ ಹೊಟ್ಟೆಯ ಎಡಭಾಗಲ್ಲಿ ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಸೂಕ್ತ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು ಮತ್ತು ನೋವು ಹೆಚ್ಚಿದ್ದಾಗ ವ್ಯಾಯಾಮದ ಗೋಜಿಗೆ ಹೋಗಬಾರದು.

ಕ್ಯಾನ್ಸರ್ ಬೆದರಿಕೆ

ಕೆಲವೊಮ್ಮೆ ಹೊಟ್ಟೆನೋವು ಜಠರದ ಕ್ಯಾನ್ಸರ್‌ನ ಫಲಶ್ರುತಿಯೂ ಆಗಿರಬಹುದು. ಕ್ಯಾನ್ಸರ್ ರೋಗಗಳು ಯಾವುದೇ ಪ್ರಮುಖ ಲಕ್ಷಣಗಳನ್ನು ತೋರಿಸುವುದಿಲ್ಲವಾದರೂ,ಜಠರದ ಕ್ಯಾನ್ಸರ್ ನಂತರದ ಹಂತದಲ್ಲಿ ನಿರಂತರ ಹೊಟ್ಟೆನೋವಿನಂತಹ ಲಕ್ಷಣಗಳನ್ನು ಪ್ರಕಟಿಸುತ್ತದೆ. ಜಠರದಲ್ಲಿಯ ಕ್ಯಾನ್ಸರ್ ಕೋಶಗಳು ಆರಂಭಿಕ ಹಂತಗಳಲ್ಲಿದ್ದಾಗ ಅವು ಸೌಮ್ಯವಾಗಿ ಪ್ರತಿವರ್ತಿಸುತ್ತವೆ ಮತ್ತು ನಂತರದ ಹಂತಗಳಲ್ಲಿ ಪ್ರತಿವರ್ತನೆ ತೀವ್ರಗೊಳ್ಳುತ್ತ ಸಾಗುತ್ತದೆ. ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಹೊಟ್ಟೆನೋವು ಉಳಿದುಕೊಂಡಿದ್ದರೆ ಹೆಚ್ಚೇನೂ ವಿಚಾರ ಮಾಡದೆ ವೈದ್ಯರನ್ನು ತಕ್ಷಣ ಭೇಟಿಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News