ಇತಿಹಾಸದಲ್ಲಿ ಇಂತಹ ಸೇಡಿನ ರಾಜಕೀಯ ನೋಡಿಲ್ಲ: ದಿನೇಶ್ ಗುಂಡೂರಾವ್

Update: 2019-09-04 16:05 GMT

ಬೆಂಗಳೂರು, ಸೆ.4: ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್, ಪಿ.ಚಿದಂಬರಂ ಅವರ ಮೇಲೆ ಕೇಂದ್ರದ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ರೀತಿಯ ಸೇಡಿನ ರಾಜಕೀಯವನ್ನು ಇತಿಹಾಸದಲ್ಲಿ ಎಂದಿಗೂ ನೋಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಮೂಲಕ ಕ್ರಮ ಕೈಗೊಂಡರೆ ನಾವು ಪ್ರಶ್ನೆ ಮಾಡಲ್ಲ ಎಂದರು.

ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಕಾನೂನಿನ ಪ್ರಕಾರ ಹೋಗುತ್ತಿಲ್ಲ. ಇದು ರಾಜಕೀಯ ದುರುದ್ದೇಷವಾದದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದದ್ದು. ನಾವು ಜನರ ಬಳಿಗೆ ಹೋಗುತ್ತೇವೆ, ಅವರಿಗೆ ತಿಳುವಳಿಕೆ ಮಾಡಿಸುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಪಕ್ಷ ಒಟ್ಟಾಗಿ ಇದರ ಬಗ್ಗೆ ಹೋರಾಡಲಿದೆ. ಆರು ವರ್ಷದಿಂದ ದೇಶದ ಪರಿಸ್ಥಿತಿ ಏನಾಗಿದೆ, ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಗಮನಹರಿಸುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಇಂತಹ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ ವಾಸ್ತವದ ಅರಿವಾಗುತ್ತಿದೆ. ಅವರು ಅನುಕಂಪಕ್ಕಾಗಿ ಡಿ.ಕೆ.ಶಿವಕುಮಾರ್ ಪರ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರದ್ದು ಏನು ನಡೆಯಲ್ಲ, ಏನಿದ್ದರೂ ಕೇಂದ್ರದ ನಾಯಕರದ್ದೇ ಆಟ ನಡೆಯುತ್ತಿದೆ. ಅಮಿತ್ ಶಾ, ನರೇಂದ್ರ ಮೋದಿಯ ನಿಯಂತ್ರಣದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಇದು ಫ್ಯಾಶಿಸ್ಟ್ ಧೋರಣೆಯ ಸರಕಾರ. ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಯಾಕೆ ಬಿಜೆಪಿಯಲ್ಲಿ ಭ್ರಷ್ಟರು ಇಲ್ಲವೇ? ಅವರಲ್ಲಿರುವ ಭ್ರಷ್ಟರನ್ನು ಬೆಳೆಸಲಾಗುತ್ತಿದೆ. ಮಾಧ್ಯಮಗಳ ಬಾಯಿಯನ್ನು ಮುಚ್ಚಿಸಿದ್ದಾರೆ. ಜನರಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಶಿವಕುಮಾರ್ ಅವರನ್ನು ನಾಲ್ಕು ದಿನ ವಿಚಾರಣೆ ಮಾಡಿ ಬಂಧಿಸುವ ಅಗತ್ಯ ಏನಿತ್ತು? ಕಾನೂನು ಪ್ರಕಾರ ಮಾಡೋದಾಗಿದ್ದರೆ ಪ್ರಾಸಿಕ್ಯೂಟ್ ಮಾಡಬೇಕಿತ್ತು. ಯಡಿಯೂರಪ್ಪ ಏನೇ ಅನುಕಂಪದ ಮಾತಗಳನ್ನು ಆಡಬಹುದು. ಈಗ ಜನಾಕ್ರೋಶ ಬಿಜೆಪಿ ವಿರುದ್ಧ ಇದೆ ಅನ್ನೋದು ಅವರಿಗೆ ಅರ್ಥವಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ನಾವು ರಾಜಕೀಯವಾಗಿ ಎಲ್ಲವನ್ನು ಎದುರಿಸಲು ಸಿದ್ಧರಿದ್ದೇವೆ. ಆದರೆ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಶಿವಕುಮಾರ್ ನನ್ನ ಸಹೋದರ ಇದ್ದ ಹಾಗೆ, ಇವತ್ತು ಅವರ ಮನೆಗೆ ಭೇಟಿ ನೀಡಿ ಅವರ ಶ್ರೀಮತಿಗೆ ಧೈರ್ಯ ತುಂಬಿ ಬಂದಿದ್ದೇನೆ ಎಂದು ಅವರು ಹೇಳಿದರು.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ. ತಪ್ಪುನಡೆದಾಗ ಸಂಸ್ಥೆಗಳು ತನಿಖೆ ಮಾಡಬಹುದು. ಆದರೆ, ರಾಜಕೀಯ ಎದುರಾಳಿಗಳನ್ನು ಬಗ್ಗು ಬಡಿಯುವ ಪ್ರಯತ್ನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಡಿ.ಕೆ.ಶಿವಕುಮಾರ್ ಕೇವಲ ಒಕ್ಕಲಿಗ ಸಮುದಾಯದ ನಾಯಕ ಮಾತ್ರವಲ್ಲ. ಇಡೀ ರಾಜ್ಯಾದ್ಯಂತ ಶಿವಕುಮಾರ್ ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡ ನಾಯಕ. ನಮ್ಮ ಹಳೆ ಮೈಸೂರು ಭಾಗದಲ್ಲಿ ಸಹಜವಾಗಿಯೇ ಸಮುದಾಯದಲ್ಲಿ ಆತಂಕ ಮೂಡಿದೆ ಎಂದರು. 

ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಅದನ್ನು ಮರೆ ಮಾಚಲು ಪ್ರತಿಪಕ್ಷದ ಮುಖಂಡರನ್ನು ಹೆದರಿಸುವ ರಾಜಕಾರಣವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಾದರೆ, ನಮ್ಮನ್ನೆಲ್ಲ ಬಂಧಿಸಲಿ ಯಾರು ಬೇಡ ಅಂತಾರೆ.

-ಕೆ.ಆರ್.ರಮೇಶ್‌ ಕುಮಾರ್, ಮಾಜಿ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News