ರಾಜಧಾನಿಯ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನಾ ಪ್ರಧಿಕಾರ: ಸಿಎಂ ಯಡಿಯೂರಪ್ಪ

Update: 2019-09-04 16:20 GMT

ಬೆಂಗಳೂರು, ಸೆ.4: ರಾಜಧಾನಿಯ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸುವ ಬಗ್ಗೆ ಪರೀಶಿಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಗರವು ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದಲ್ಲಿ ಅಪಾರ ಜನ ಮನ್ನಣೆಗಳಿಸಿದ್ದು, ನಗರದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿಯ ಕಾರ್ಯನಿರ್ವಹಣೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಹಾಗೂ ಸಿಬ್ಬದಿಗಳು ದಕ್ಷತೆಯಿಂದ ಕೆಲಸ ಮಾಡುವ ಅಗತ್ಯವಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ನಗರದ ಅಭಿವೃದ್ಧಿಗೆ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಇನ್ನು, ನಗರದ ದೊಡ್ಡ ಸವಾಲಾದ ಕಸ ವಿಲೇವಾರಿ, ವಾಹನ ದಟ್ಟಣೆ ಹಾಗೂ ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ರಾಜ್ಯದ ಅಭಿವೃದ್ಧಿಗೆ ರಾಜಧಾನಿಯ ಕೊಡುಗೆ ಗಣನೀಯವಾಗಿದೆ ಎಂದರು.

ನಾಡಿನ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಕೆಂಪೇಗೌಡ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯವಾದುದು. ಇಂದು ಬೆಂಗಳೂರು ನಗರವು ವಿಶ್ವ ದರ್ಜೆಯ ನಗರವಾಗಿ ಬೆಳೆಯಲು ಪ್ರಮುಖ ಕಾರಣ ಕೆಂಪೇಗೌಡರ ದೂರದೃಷ್ಟಿಯಾಗಿದೆ. ದೇಶದ ಮಹಾನಗರಗಳಾದ ಮುಂಬೈ, ಚೆನ್ನೈ ಹಾಗೂ ಕಲ್ಕತ್ತಾಗಳಿಗಿಂತ ಬೆಂಗಳೂರು ಪ್ರಾಚೀನವಾದ ನಗರ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.

ಬೆಂಗಳೂರು ಕೆಂಪೇಗೌಡರ ಹೆಮ್ಮೆಯ ರಾಜಧಾನಿಯಾಗಿತ್ತು. ನಾಡು ಸವಿಸ್ತಾರವಾಗಿ ಅಭಿವೃದ್ಧಿಯಾಗಲೆಂದು ಯಲಹಂಕದಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಿ, ಕುಲಕಸುಬಿಗೆ ಅನುಗುಣವಾಗಿ 54 ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು. ಅಲ್ಲದೆ ನಗರವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡಿದ್ದರು ಎಂದು ನೆನೆದರು.

ನಗರಕ್ಕೆ ಯಾವುದೇ ನದಿ ಮೂಲಗಳು ಇಲ್ಲದ ಕಾರಣ ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುದಿ, ಕೆಂಪಾಂಬುದಿ, ಸಂಪಂಗಿ ಹಾಗೂ ಕಾರಂಜಿ ಕೆರೆ ಸೇರಿದಂತೆ 347 ದೊಡ್ಡ ಕೆರೆಗಳು ಹಾಗೂ 1,200 ಅಧಿಕ ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದು ವಿಶೇಷ. ಕೆಂಪೇಗೌಡರು ನಿರ್ಮಿಸಿದ ನಗರವು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ರೂಪಗೊಂಡಿದೆ. ಪ್ರಸ್ತುತ 800 ಚ.ಮೀ ವರೆಗೂ ವ್ಯಾಪಿಸಿದ್ದು, 8 ವಲಯಗಳನ್ನು ಒಳಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸಿಎಂ ಡಾ.ಅಶ್ವಥ ನಾರಾಯಣ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಉಪ ಮೇಯರ್ ಭದ್ರೇಗೌಡ ವಿರೋದ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹಾಗೂ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಸೇರಿದಂತೆ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

16 ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ:

ಈ ಬಾರಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಜತೆಗೆ ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಕನ್ನಡ ಸೇವೆ, ಚಲನಚಿತ್ರ, ರಂಗಭೂಮಿ, ಸರಕಾರಿ ಸೇವೆ, ಕ್ರೀಡೆ, ಮಾಧ್ಯಮ, ಶಿಲ್ಪಕಲೆ ಸೇರಿ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಐದು ಶಾಲೆಗಳಿಗೆ ಪ್ರಶಸ್ತಿ:

ರಮಣಮಹರ್ಷಿ ಅಕಾಡೆಮಿ ಫಾರ್ ಬ್ಲೆಂಡ್ಸ್, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್, ಮುಸ್ಲಿಂ ಅನಾಥಾಶ್ರಮ ಮತ್ತು ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆಗಳಿಗೆ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಲಾಯಿತು.

ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ.

ಉತ್ತರ ಕರ್ನಾಟಕದಲ್ಲಿ ಸಂಭವಿಸಿದ್ದ ಮಳೆ ಹಾಗೂ ಪ್ರವಾಹದ ಹಾನಿ ಪರಿಹಾರಕ್ಕಾಗಿ ಬಿಬಿಎಂಪಿ ವತಿಯಿಂದ 5 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.

ಕೆಂಪೇಗೌಡ ಅಭಿವೃದ್ಧಿ ಬೋರ್ಡ್ ಸ್ಥಾಪಿಸುವ ಮೂಲಕ 100 ಕೋಟಿ ರೂ. ಗಳನ್ನು ಮೀಸಲಿಟ್ಟು ನಗರದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಲ್ಲದೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲು ಡಿಸಿಎಂ ಡಾ.ಅಶ್ವಥನಾರಾಯಣ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು.

-ಯಡಿಯೂರಪ್ಪ, ಮುಖ್ಯಮಂತ್ರಿ

ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಪ್ಲಾಸ್ಟಿಕ್ ಬಳಕೆಯು ಹೆಚ್ಚಾಗುತ್ತಿದೆ. ನಗರವ್ಯಾಪಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಪ್ಲಾಸ್ಟಿಕ್ ಬಳಕೆ ಇನ್ನು ನಿಂತಿಲ್ಲ. ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದೈನಂದಿನ ಕಾರ್ಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಿ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News