ಕೆಂಪೇಗೌಡ ಜಯಂತಿಗೆ ವಿದ್ಯುಕ್ತ ಚಾಲನೆ

Update: 2019-09-04 16:41 GMT

ಬೆಂಗಳೂರು, ಸೆ.4: ಬಿಬಿಎಂಪಿ ಕಚೇರಿ ಮುಂಭಾಗದ ನಾಡಪ್ರಭು ಕೆಂಪೇಗೌಡ ಹಾಗೂ ಲಕ್ಷ್ಮೀ ದೇವಮ್ಮ ಅವರ ಪ್ರತಿಮೆಗೆ ಮೇಯರ್ ಗಂಗಾಂಬಿಕೆ ಆಯುಕ್ತ ಅನಿಲ್ ಕುಮಾರ್ ಮತ್ತಿತರರು ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು.

ಅಲ್ಲದೆ, ಕೆಂಪೇಗೌಡರು ನಿರ್ಮಿಸಿದ 4 ಗಡಿಗೋಪುರಗಳಾದ ಲಾಲ್‌ಬಾಗ್, ಹಲಸೂರು ಕೆರೆ, ಕೆಂಪಾಂಬುದಿ ಕೆರೆ, ಕೆಂಪೇಗೌಡ ಉದ್ಯಾನವನ (ಮೇಖ್ರಿ ವೃತ್ತ) ದಿಂದ ಹೊರಟ ಕೆಂಪೇಗೌಡರ ದಿವ್ಯ ಜ್ಯೋತಿಯ ಮೆರವಣಿಗೆ ಮಧ್ಯಾಹ್ನದ ಹೊತ್ತಿಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ತಲುಪಿದಾಗ ಮೇಯರ್ ಜ್ಯೋತಿಯನ್ನು ಬರ ಮಾಡಿಕೊಂಡರು.

ಮಾಗಡಿಯ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿಯಿಂದ ಜ್ಯೋತಿಯು ಬಿಬಿಎಂಪಿ ಕೇಂದ್ರ ಕಚೇರಿ ತಲುಪಿದಾಗ ಉತ್ಸಾಹದಿಂದ ಕೆಂಪೇಗೌಡರಿಗೆ ಜೈಕಾರದ ಘೋಷಣೆಗಳನ್ನು ಕೂಗಿ ಬರಮಾಡಿಕೊಂಡರು. ಮೇಖ್ರಿ ವೃತ್ತದಲ್ಲಿರುವ ಕೆಂಪೇಗೌಡರ ಉದ್ಯಾನವನದಲ್ಲಿ ಕೆಂಪೇಗೌಡರ ಪ್ರತಿಮೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಲಾರ್ಪಣೆ ಮಾಡಿದಲ್ಲದೇ ಅಲ್ಲಿಂದ ಜ್ಯೋತಿಗೆ ಪೂಜೆ ಸಲ್ಲಿಸುವುದರ ಮೂಲಕ 4 ಗಡಿ ಗೋಪುರಗಳಿಂದ ಹೊರಡುವ ಜ್ಯೋತಿಗೆ ಚಾಲನೆ ನೀಡಿದರು.

ಪ್ರತಿ ಗೋಪುರಗಳಿಂದ ಕೆಂಪೇಗೌಡರ ಜ್ಯೋತಿಯನ್ನು ಸಾಂಸ್ಕೃತಿಕ ಮೆರವಣಿಗೆ ಮೂಲಕ ಕೇಂದ್ರ ಕಚೇರಿಗೆ ತರಲಾಯಿತು. ಡೋಳು ಕುಣಿತ, ಕರಡಿ ಕುಣಿತ, ನಂದಿ ಧ್ವಜ, ಸೇರಿದಂತೆ ಹಲವು ಸಾಂಸ್ಕೃತಿಕ ಪ್ರಕಾರಗಳೊಂದಿಗೆ ಮೆರವಣಿಗೆಗೆ ಕಲಾವಿದರು ಇನ್ನಷ್ಟು ರಂಗೇರಿಸಿದರು.

ಜಯಂತಿ ಸಂಭ್ರಮದಲ್ಲಿ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್, ಡಿಸಿಎಂ ಡಾ.ಅಶ್ವಥ್ ನಾರಾಯಣ್, ಉಪ ಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್‌ನ ನೇತ್ರಾ ನಾರಾಯಣ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಬೆಂಗಳೂರು ನಗರದಲ್ಲಿ ಕೆರೆಗಳು, ಗಡಿಗೋಪುರಗಳು ಹಾಗೂ ಉದ್ಯಾನವನಗಳನ್ನು ಯೋಜನಾಬದ್ಧವಾಗಿ ನಿರ್ಮಿಸಿದ ನಾಡಪ್ರಭು ಕೆಂಪೇಗೌಡರಿಗೆ ಎಲ್ಲರೂ ಚಿರಋಣಿಯಾಗಿರಬೇಕು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News