ಈ ಹಣ್ಣುಗಳು ನಿಮ್ಮನ್ನು ನ್ಯುಮೋನಿಯಾದಿಂದ ರಕ್ಷಿಸುತ್ತವೆ

Update: 2019-09-05 17:18 GMT

ಹೆಚ್ಚುಕಡಿಮೆ ಪ್ರತಿಯೊಂದು ಹಣ್ಣಿನಲ್ಲಿಯೂ ಪೋಷಕಾಂಶಗಳು,ಖನಿಜಗಳು ಮತ್ತು ವಿಟಾಮಿನ್‌ಗಳು ಇರುತ್ತವೆ ಮತ್ತು ಇವು ನಮಗೆ ಹಲವಾರು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ‘ ಆ್ಯನ್ ಆ್ಯಪಲ್ ಎ ಡೇ ಕೀಪ್ಸ್ ಡಾಕ್ಟರ್ ಅವೇ ’ ಎಂಬ ಇಂಗ್ಲಿಷ್ ನಾಣ್ಣುಡಿ ಇದನ್ನೇ ಹೇಳುತ್ತದೆ. ಕಿತ್ತಳೆ ಮತ್ತು ಸೇಬುವಿನಂತಹ ಸಮೃದ್ಧ ವಿಟಾಮಿನ್ ಸಿ ಅನ್ನು ಹೊಂದಿರುವ ಹಣ್ಣುಗಳು ನಮ್ಮ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಾಮಿನ್‌ಗಳನ್ನು ಒದಗಿಸುವ ಜೊತೆಗೆ ನ್ಯುಮೋನಿಯಾದಂತಹ ರೋಗಗಳಿಂದ ನಮ್ಮ ನಿರೋಧಕ ಶಕ್ತಿಗೆ ರಕ್ಷಣೆಯನ್ನೂ ನೀಡುತ್ತವೆ ಎನ್ನುವುದನ್ನು ನೂತನ ಅಧ್ಯಯನವೊಂದು ತೋರಿಸಿದೆ.

ವಿಟಾಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ನ್ಯುಮೋನಿಯಾ ಬ್ಯಾಕ್ಟೀರಿಯಾದ ಹೋರಾಡಲು ಶರೀರದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಿತ್ತಳೆ,ಸೇಬು,ಲಿಂಬೆ ಮತ್ತು ಸೀಬೆಯಂತಹ ಹಣ್ಣುಗಳು ವಿಟಾಮಿನ್ ಸಿ ಅನ್ನು ಹೇರಳವಾಗಿ ಒಳಗೊಂಡಿರುತ್ತವೆ ಮತ್ತು ನ್ಯುಮೋನಿಯಾಕ್ಕೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುವವರಿಗೆ ಪೋಷಕಾಂಶಗಳ ಆಗರವಾಗಿವೆ.

ಬ್ಯಾಕ್ಟೀರಿಯಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್‌ನಿಂದಾಗಿ ನಿರೋಧಕ ಶಕ್ತಿಯು ದುರ್ಬಲಗೊಂಡಾಗ ನ್ಯುಮೋನಿಯಾಕ್ಕೆ ಗುರಿಯಾಗುವ ಅಪಾಯವು ಹೆಚ್ಚುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಒಂದು ಬ್ಲೀಚಿಂಗ್ ಏಜೆಂಟ್ ಕೂಡ ಆಗಿದ್ದು,ನಮ್ಮ ಹಲ್ಲುಗಳನ್ನು ಬಿಳಿ ಮತ್ತು ಕಲೆರಹಿತವನ್ನಾಗಿರಿಸುತ್ತದೆ.

ಅಧ್ಯಯನದ ವಿವರಗಳು

  ನಮ್ಮ ಶರೀರವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ತಯಾರಿಸಿಕೊಳ್ಳುತ್ತದೆ. ಅಚ್ಚರಿಯೆಂದರೆ ಕೆಲವು ಬ್ಯಾಕ್ಟೀರಿಯಾಗಳು ಕೂಡ ನಿರೋಧಕ ಶಕ್ತಿಯ ಮೇಲೆ ದಾಳಿ ನಡೆಸಲು ಈ ಸಂಯುಕ್ತವನ್ನು ಉತ್ಪಾದಿಸುತ್ತವೆ. ಇಂತಹ ಸ್ಥಿತಿಯಲ್ಲಿ ಶರೀರಕ್ಕೆ ತನ್ನೊಳಗಿನ ಉರಿಯೂತದ ವಿರುದ್ಧ ಹೋರಾಡಲು ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳು ಬೇಕಾಗುತ್ತವೆ. ಇದಕ್ಕೆ ಹಣ್ಣುಗಳಲ್ಲಿರುವ ವಿಟಾಮಿನ್ ಸಿ ಪರಿಣಾಮಕಾರಿ ಅಸ್ತ್ರವಾಗುತ್ತದೆ. ಈ ವಿಟಾಮಿನ್ ಬ್ಯಾಕ್ಟಿರಿಯಾ ಪ್ರತಿರೋಧಕತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳಿದೆ. ನ್ಯುಮೋನಿಯಾ ಬ್ಯಾಕ್ಟೀರಿಯಾಗಳನ್ನು ಮುಖ್ಯವಾಗಿಟ್ಟುಕೊಂಡು ಈ ಅಧ್ಯಯನವನ್ನು ನಡೆಸಲಾಗಿತ್ತು. ನ್ಯುಮೋನಿಯಾ ಬ್ಯಾಕ್ಟೀರಿಯಾ ಶರೀರದಲ್ಲಿ ಅತಿಯಾಗಿ ಹೈಡ್ರೋಜನ್ ಪೆರಾಕ್ಸೈಡ್‌ನ್ನು ಉತ್ಪಾದಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಸಂಶೋಧಕರು ಬೆಟ್ಟು ಮಾಡಿದ್ದಾರೆ.

ಸಮತೋಲಿತ ಆಹಾರ ಮುಖ್ಯ

 ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನು ಸೇವಿಸಬೇಕಾಗುತ್ತದೆ. ಇದೇ ವೇಳೆ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕಾದ ಕೆಲವು ಅಗತ್ಯ ಪೋಷಕಾಂಶಗಳಿವೆ. ಇವು ಹಲವಾರು ಕಾಯಿಲೆಗಳ ವಿರುದ್ಧ ಶರೀರಕ್ಕೆ ರಕ್ಷಣೆ ನೀಡುತ್ತವೆ.

ಬಸಳೆಯಲ್ಲಿ ವಿಟಾಮಿನ್‌ಗಳು,ಖನಿಜಗಳು ಮತ್ತು ಮ್ಯಾಗ್ನೇಷಿಯಂ ಸಾಕಷ್ಟು ಪ್ರಮಾಣದಲ್ಲಿವೆ. ಕೆಲವರು ಬಸಳೆಯನ್ನು ಇಷ್ಟಪಡದಿರಬಹುದು,ಆದರೆ ಅದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದೆ. ಊತ,ಶರೀರದಲ್ಲಿಯ ಮೃದುತ್ವ, ಉಬ್ಬರ ಮತ್ತು ತೂಕ ಹೆಚ್ಚಳ ಇತ್ಯಾದಿ ಸಮಸ್ಯೆಗಳನ್ನು ತಗ್ಗಿಸಲು ಅದು ನೆರವಾಗುತ್ತದೆ. ಅದು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಅಸ್ತಮಾದ ಅಪಾಯವನ್ನು ತಗ್ಗಿಸುತ್ತದೆ.

ಟೊಮೆಟೊದಲ್ಲಿರುವ ಲೈಕಾಪಿನ್ ಕೂಡ ಉತ್ತಮ ಆರೋಗ್ಯಕ್ಕೆ ಮಹತ್ವದ್ದಾಗಿದೆ. ಟೊಮೆಟೊ ವಿವಿಧ ಕ್ಯಾನ್ಸರ್‌ಗಳ ವಿರುದ್ಧ ಶರೀರಕ್ಕೆ ರಕ್ಷಣೆ ಒದಗಿಸುವಲ್ಲಿ ನೆರವಾಗುತ್ತದೆ ಹಾಗೂ ಅಧಿಕ ಕೊಲೆಸ್ಟ್ರಾಲ್ ಮತ್ತು ಅಸ್ಥಿರಂಧ್ರತೆ ಅಪಾಯಗಳನ್ನು ತಗ್ಗಿಸುತ್ತದೆ ಎನ್ನುವುದನ್ನು ವಿವಿಧ ಅಧ್ಯಯನಗಳು ಸಾಬೀತುಗೊಳಿಸಿವೆ.

ಓಟ್ಸ್ ಅಥವಾ ತೊಕ್ಕೆ ಗೋದಿಯಲ್ಲಿ ಹಲವಾರು ಪೋಷಕಾಂಶಗಳು ಹೇರಳವಾಗಿದ್ದು,ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಓಟ್ಸ್ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ,ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಅದರಲ್ಲಿರುವ ವಿಟಾಮಿನ್ ಬಿ6 ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News