ಸಂಚಾರಿ ನಿಯಮ ಆದಾಯ ಹೆಚ್ಚಳಕ್ಕಲ್ಲ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2019-09-05 17:43 GMT

ಬೆಂಗಳೂರು, ಸೆ.5: ಮೋಟಾರು ವಾಹನ ಕಾಯ್ದೆ ಅನ್ವಯ ಬೆಂಗಳೂರು ವ್ಯಾಪ್ತಿಯಲ್ಲಿ ಪರಿಷ್ಕೃತ ದಂಡದ ಮೊತ್ತ ಚಾಲ್ತಿಯಲ್ಲಿದ್ದು, ಇದು ಆದಾಯ ಹೆಚ್ಚಳಕ್ಕಲ್ಲ. ಬದಲಾಗಿ, ಸಾರಿಗೆ ನಿಯಮ ಪಾಲನೆಗೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಗುರುವಾರ ನಗರದ ಸಂಚಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ದಂಡ ಹೆಚ್ಚಳ ಮಾಡಿರುವುದು ಅಪಘಾತ ನಿಯಂತ್ರಣಕ್ಕಾಗಿಯೇ ಹೊರತು, ಆದಾಯ ಹೆಚ್ಚಿಸಲು ಅಲ್ಲ. ಇದನ್ನು, ವಾಹನ ಸವಾರರು ಅರಿತು, ಸಹಕರಿಸಬೇಕು ಎಂದರು.

ಸೆ.3 ರಂದು ಕೇಂದ್ರ ಸರ್ಕಾರ ಸಂಚಾರ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅದರಿಂದ ಪೊಲೀಸರ ಪಿಡಿಎ ಯಂತ್ರದಲ್ಲಿ ಹೊಸ ದರದ ಪಟ್ಟಿ ಅಳವಡಿಸಲಾಗಿದ್ದು, ಎಲ್ಲ ಭಾಗಗಳಲ್ಲಿ ತಪ್ಪಿತಸ್ಥ ವಾಹನ ಸವಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಅಧಿಸೂಚನೆಯಲ್ಲಿ ಒಟ್ಟು 24 ಸಂಚಾರ ನಿಯಮಗಳ ಉಲ್ಲಂಘನೆಗಳ ಬಗ್ಗೆ ದಂಡ ಹೆಚ್ಚಳವಾಗಿದೆ. ಕೆಲ ನಿಯಮಗಳಲ್ಲಿ ಜೈಲು ಶಿಕ್ಷೆ ಸಹ ಇದೆ ಎಂದ ಅವರು, ಬೆಂಗಳೂರಿನಲ್ಲಿ ಸಾಕಷ್ಟು ಅಪಘಾತಗಳಿಂದ ಸಾರ್ವಜನಿಕರು ಸಾವನ್ನಪ್ಪುತ್ತಿದ್ದಾರೆ. ಉಲ್ಲಂಘನೆಗಳು ಜಾಸ್ತಿಯಾಗುತ್ತಿರುವುದ್ದರಿಂದ ಈ ರೀತಿ ದಂಡ ಹೆಚ್ಚಳವಾಗಿದೆ ಎಂದು ಭಾಸ್ಕರ್ ರಾವ್ ನುಡಿದರು.

ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು, ಅಡ್ಡಾದಿಡ್ಡಿ ಚಾಲನೆ ಮಾಡುವುದೂ ಸೇರಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವುದಲ್ಲದೆ, ಬೇರೆಯವರ ಜೀವಕ್ಕೆ ಅಪಾಯ ತಂದುಕೊಡುವ ಸಂಚಾರ ನಿಯಮಗಳ ಉಲ್ಲಂಘನೆಗಳಿಗೆ ಕಟ್ಟುನಿಟ್ಟಿನ ದಂಡ ವಿಧಿಸಲಾಗುವುದು. ಸಂಚಾರ ಪೊಲೀಸರು ದಂಡ ವಿಧಿಸುವ ವೇಳೆ ಅನಗತ್ಯ ವಾದವಿವಾದಗಳಿಗೆ ಅಂತ್ಯ ಹಾಡಲು 353ರ ಕಲಂನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸಂಚಾರ ಪೊಲೀಸರಿಗೆ ನೀಡಲಾಗುವ ಬಾಡಿವೋರ್ನ್ ಕ್ಯಾಮರಾಗಳನ್ನು 280 ರಿಂದ 600ಕ್ಕೆ ಹೆಚ್ಚಳ ಮಾಡಲಾಗುವುದೆಂದು ತಿಳಿಸಿದರು.

ಶಾಲಾ ಮುಖ್ಯಸ್ಥರ ಸಭೆ: ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ವಾಹನಗಳನ್ನು ಶಾಲೆಯ ಹೊರಗಡೆ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈಗಾಗಲೇ ಶಾಲಾ ಮುಖ್ಯಸ್ಥರಿಗೆ ಶಾಲೆಯ ಆವರಣಗಳಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಈ ಸಂಬಂಧ ಶಾಲಾ ಮುಖ್ಯಸ್ಥರ ಜತೆ ಸದ್ಯದಲ್ಲೇ ಸಭೆ ನಡೆಸಲಾಗುವುದು. ಶಾಲೆಗಳ ಆವರಣದಲ್ಲಿ ವಾಹನಗಳ ನಿಲುಗಡೆ ಅವಕಾಶವಿದ್ದರೆ, ಶಾಲೆಗಳನ್ನು ನಗರದ ಹೊರಗಡೆ ತೆಗೆದುಕೊಂಡು ಹೋಗುವಂತೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ, ಡಿಸಿಪಿಗಳಾದ ಡಾ.ಜಗದೀಶ್, ಡಾ.ಸೌಮ್ಯಲತಾ, ಸಾರಾ ಫಾತೀಮಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News