ಬೃಹತ್ ಗುಪ್ತಚರ ವೈಫಲ್ಯದಿಂದ ಪುಲ್ವಾಮ ದಾಳಿ: ಸಿಆರ್ ಪಿಎಫ್ ಆಂತರಿಕ ವರದಿ

Update: 2019-09-06 10:57 GMT

“39 ಯೋಧರ ಬಳಿ ಇದ್ದದ್ದು, ಕೇವಲ 4 ಶಸ್ತ್ರಾಸ್ತ್ರಗಳು”

ಹೊಸದಿಲ್ಲಿ: 43 ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಫೆಬ್ರವರಿ 14ರ ಪುಲ್ವಾಮ ಉಗ್ರ ದಾಳಿಯು ಬೃಹತ್ ಗುಪ್ತಚರ ವೈಫಲ್ಯದ ನಂತರ ಸಂಭವಿಸಿತ್ತು ಎಂದು ಸಿಆರ್ ಪಿಎಫ್ ಆಂತರಿಕ ವರದಿ ತಿಳಿಸಿದ್ದು, ಕೇಂದ್ರ ಸರಕಾರಕ್ಕೆ ಭಾರೀ ಮುಜುಗರವುಂಟು ಮಾಡುವ ಬೆಳವಣಿಗೆ ಇದಾಗಿದೆ ಎಂದು India Today ವರದಿ ಮಾಡಿದೆ.  

ಪುಲ್ವಾಮ ಉಗ್ರ ದಾಳಿಯು ಗುಪ್ತಚರ ವೈಫಲ್ಯದಿಂದಾಗಿ ಸಂಭವಿಸಿದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯವು ಜೂನ್ ತಿಂಗಳಲ್ಲಿ ಬಲವಾಗಿ ತಿರಸ್ಕರಿಸಿತ್ತಲ್ಲದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಈ ಕುರಿತಂತೆ ಹೇಳಿಕೆ ಕೂಡ ನೀಡಿದ್ದರು.

ಗುಪ್ತಚರ ಏಜನ್ಸಿಗಳು ಐಇಡಿಯಿಂದ ಸಂಭವಿಸಬಹುದಾದ ಸಂಭಾವ್ಯ ಅಪಾಯದ ಕುರಿತಂತೆ ಸಿಆರ್‍ ಪಿಎಫ್ ಅನ್ನು ಎಚ್ಚರಿಸಿದ್ದರೂ, ಕಾರಿನ ಮೂಲಕ ಆತ್ಮಾಹುತಿ ದಾಳಿ ನಡೆಯಬಹುದೆಂಬ ಕುರಿತಂತೆ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎಂದು ಆಂತರಿಕ ವರದಿ ತಿಳಿಸಿದೆ.

ಸಿಆರ್ ಪಿಎಫ್ ಯೋಧರ ದೊಡ್ಡ ಪಡೆಯನ್ನು ಪುಲ್ವಾಮ ಮೂಲಕ ಹಾದು ಹೋಗಲು ಅನುಮತಿಸಿರುವುದು ಕೂಡ ಸರಿಯಾದ ಕ್ರಮವಾಗಿರಲಿಲ್ಲ ಎಂದು ವರದಿ ಹೇಳಿದೆ. ಸಿಆರ್ ಪಿಎಫ್ ಪಡೆಯಲ್ಲಿ 78 ವಾಹನಗಳು ಹಾಗೂ 2,547 ಜವಾನರಿದ್ದರಲ್ಲದೆ ವಾಹನಗಳು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ಈ ದಾಳಿ ನಡೆದಿತ್ತು ಎಂದು India Today ವರದಿ ತಿಳಿಸಿದೆ.

ಸಿಆರ್ ಪಿಎಫ್ ವಾಹನಗಳು ಸಾಗುವಾಗ ಇತರ ನಾಗರಿಕ ವಾಹನಗಳನ್ನೂ ಸಾಗಲು ಅನುಮತಿಸಿದ್ದೂ ಸಿಆರ್ ಪಿಎಫ್ ಗೆ ದುಬಾರಿಯಾಗಿ ಪರಿಣಮಿಸಿತ್ತು ಎಂದು ಆಂತರಿಕ ವರದಿ ಹೇಳಿದೆ. ದಾಳಿಗೊಳಗಾದ ಸಿಆರ್ ಪಿಎಫ್ ವಾಹನದಲ್ಲಿ 39 ಯೋಧರಿದ್ದರೂ ಕೇವಲ ನಾಲ್ಕು ಶಸ್ತ್ರಾಸ್ತ್ರಗಳಿದ್ದವು ಹಾಗೂ ಅವರ ಶಸ್ತ್ರಾಸ್ತ್ರಗಳು ಅವರು ತಮ್ಮ ಘಟಕ ತಲುಪಿದ ನಂತರವಷ್ಟೇ ದೊರೆಯಬಹುದಾಗಿತ್ತು ಎಂದು ವರದಿ ಹೇಳಿದೆ.

ಸ್ಥಿರ ಸಿಆರ್ ಪಿಎಫ್ ಬಂಕರ್ ವಾಹನದಿಂದ ತೆಗೆಯಲಾದ ವೀಡಿಯೋದಲ್ಲಿ ಆರ್‍ಒಪಿ ಕರ್ತವ್ಯದಲ್ಲಿದ್ದ ಎಎಸ್‍ಐ ಮೋಹನ್ ಲಾಲ್ ಎಂಬವರು ಉಗ್ರನ ವಾಹನ ತಡೆಯಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಉತ್ತರಾಖಂಡದ ಬರ್ಕೋಟ್ ಗ್ರಾಮದ ಮೋಹನ್ ಲಾಲ್ ಗೆ  ಮರಣೋತ್ತರ ಶೌರ್ಯ ಪ್ರಶಸ್ತಿಯನ್ನೂ ತನಿಖಾ ವರದಿ ಶಿಫಾರಸು ಮಾಡಿದೆ.

ಆತ್ಮಾಹುತಿ ಬಾಂಬರ್ ಇದ್ದ ಕಾರು ಝಿಗ್ ಝ್ಯಾಗ್ ಮಾದರಿಯಲ್ಲಿ ಸಂಚರಿಸಿತ್ತು ಎಂದೂ ವರದಿ ತಿಳಿಸಿದೆ. ನಿಯಮದ ಪ್ರಕಾರ  ಪ್ರತಿ ನಾಲ್ಕು ಸಿಆರ್‍ಪಿಎಫ್ ವಾಹನಗಳ ನಡುವೆ ಅಂತರವಿರಬೇಕಾಗಿದ್ದು, ಈ ನಿಯಮವನ್ನು ಸಿಆರ್ ಪಿಎಫ್ ಪಾಲಿಸಿದ್ದರಿಂದ ಆತ್ಮಾಹುತಿ ಬಾಂಬರ್ ನ ವಾಹನ  ಕೇವಲ ಒಂದು ಸಿಆರ್‍ಪಿಎಫ್ ವಾಹನಕ್ಕೆ ಹಾನಿಯೆಸಗಿತ್ತು ಎಂದು ವರದಿ ತಿಳಿಸಿದೆ.

ಈ 15 ಪುಟಗಳ ತನಿಖಾ ವರದಿಯನ್ನು ಮೇ ತಿಂಗಳಲ್ಲಿ ಸಿಆರ್‍ ಪಿಎಫ್ ಡಿಜಿಗೆ ಸಲ್ಲಿಸಲಾಗಿದೆ.

ಕೃಪೆ: www.indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News