ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ: ಮೂವರು ಶಂಕಿತರ ಬಂಧನ

Update: 2019-09-06 11:32 GMT

ಮುಂಬೈ, ಸೆ.6: ಹಿರಿಯ ಸಿಪಿಐ ನಾಯಕ ಹಾಗೂ ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಶುಕ್ರವಾರ ಇನ್ನೂ ಮೂವರು ಶಂಕಿತರನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 12ಕ್ಕೇರಿದೆ.

ಶಂಕಿತ ಹಂತಕರಾದ ಸಚಿನ್ ಅಂದೂರೆ, ಅಮಿತ್ ಬಡ್ಡಿ ಹಾಗೂ ಗಣೇಶ್ ಮಿಸ್ಕಿನ್ ಈಗಾಗಲೇ ವಿವಿಧ ಇತರ ಪ್ರಕರಣಗಳಲ್ಲಿ ಮುಂಬೈ ಹಾಗೂ ಪುಣೆ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಅವರನ್ನು ಪನ್ಸಾರೆ ಪ್ರಕರಣದಲ್ಲಿ ಔಪಚಾರಿಕವಾಗಿ ರಾಜ್ಯ ಸಿಐಡಿಯ ಎಸ್‍ಐಟಿ ಶುಕ್ರವಾರ ಬಂಧಿಸಿದೆ.

ಶಾರ್ಪ್ ಶೂಟರ್ ಎಂದು ತಿಳಿಯಲಾದ ಅಂದೂರೆಯನ್ನು ನರೇಂದ್ರ ದಾಭೋಲ್ಕರ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿತ್ತು ಹಾಗೂ ಆತ ಪುಣೆಯ ಯೆರವಾಡ ಜೈಲಿನಲ್ಲಿದ್ದ. ಅತ್ತ ಬಡ್ಡಿ ಹಾಗೂ ಮಿಸ್ಕಿನ್ ಇಬ್ಬರೂ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿದ್ದರು. ಅವರಿಬ್ಬರೂ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲಿ ಹಾಗೂ ಮಹಾರಾಷ್ಟ್ರದ ನಲ್ಲಸೋಪಾರದಲ್ಲಿ ಶಸ್ತ್ರಾಸ್ತ್ರ  ವಶ ಪ್ರಕರಣದಲ್ಲಿ ಜೈಲುಪಾಲಾಗಿದ್ದರು.

ಫೆಬ್ರವರಿ 16, 2015ರಂದು ಕೊಲ್ಲಾಪುರದಲ್ಲಿ ಪನ್ಸಾರೆ ಮೇಲೆ ಗುಂಡು ಹಾರಿಸಲಾಗಿತ್ತು. ಅವರು ಫೆಬ್ರವರಿ 20ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News