2030ರೊಳಗೆ ಗರ್ಭಕಂಠ ಕ್ಯಾನ್ಸರ್ ನಿರ್ಮೂಲನಕ್ಕೆ ಹೆಚ್ಚಿನ ಪ್ರಯತ್ನ: ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಡಬ್ಯ್ಲುಎಚ್‌ಒ ಕರೆ

Update: 2019-09-06 16:53 GMT

ಹೊಸದಿಲ್ಲಿ,ಸೆ.6: ಗರ್ಭಕಂಠ ಕ್ಯಾನ್ಸರ್ ರೋಗವನ್ನು 2030ರೊಳಗೆ ನಿರ್ಮೂಲನಗೊಳಿಸಲು ಪ್ರಯತ್ನಗಳನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಆಗ್ರಹಿಸಿದೆ.

ದಿಲ್ಲಿಯಲ್ಲಿ ಸೆ.2ರಿಂದ ಸೆ.6ರವರೆಗೆ ನಡೆದ ಡಬ್ಯ್ಲುಎಚ್‌ಒ ಪ್ರಾದೇಶಿಕ ಸಮಿತಿಯ 72ನೇ ಅಧಿವೇಶನದ ಸಂದರ್ಭದಲ್ಲಿ ಹೊರಡಿಸಿರುವ ಹೇಳಿಕೆಯಲ್ಲಿ ಡಬ್ಯ್ಲುಎಚ್‌ಒ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ ಸಿಂಗ್ ಅವರು,ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡಲು ಈ ದೇಶಗಳು ಎಲ್ಲರಿಗಾಗಿ ಎಲ್ಲ ಕಡೆಗಳಲ್ಲಿ ಲಸಿಕೆ ನೀಡಿಕೆ, ತಪಾಸಣೆ, ರೋಗ ಪತ್ತೆ ಮತ್ತು ಚಿಕಿತ್ಸೆ ಸೇವೆಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಸೂಕ್ತ ಕಾರ್ಯತಂತ್ರಗಳು ಮತ್ತು ಮಾರ್ಗಸೂಚಿಗಳು ಸೇರಿದಂತೆ ರಾಷ್ಟ್ರೀಯ ಗರ್ಭಕಂಠ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮಗಳನ್ನು ಬಲಗೊಳಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಗರ್ಭಕಂಠ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರ ಜೀವಕ್ಕೆ ಗಂಭೀರ ಬೆದರಿಕೆಗಳಲ್ಲಿ ಒಂದಾಗಿರುವುದರಿಂದ ಅದರ ನಿರ್ಮೂಲನಕ್ಕೆ ತಾನು ಆದ್ಯತೆಯನ್ನು ನೀಡುತ್ತಿರುವುದಾಗಿ ಡಬ್ಲುಎಚ್‌ಒ ತಿಳಿಸಿದೆ.

ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ವಿಧವಾಗಿರುವ ಗರ್ಭಕಂಠ ಕ್ಯಾನ್ಸರ್ ಈ ಪ್ರದೇಶದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. 2018ರಲ್ಲಿ ಈ ರೋಗದ ಅಂದಾಜು 1,58,000 ಹೊಸ ಪ್ರಕರಣಗಳು ಮತ್ತು 95,766 ಸಾವುಗಳು ವರದಿಯಾಗಿವೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News