ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಯುವತಿಯ ಜಾಮೀನು ರದ್ದತಿಗೆ ಕೋರ್ಟ್ ನಕಾರ

Update: 2019-09-06 17:05 GMT

 ಹೊಸದಿಲ್ಲಿ,ಸೆ.6: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದ ಸುಪ್ರೀಂಕೋರ್ಟ್ ಮಾಜಿ ಉದ್ಯೋಗಿಯೊಬ್ಬಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ನೌಕರಿ ಕೊಡಿಸುವ ಅಮಿಷವೊಡ್ಡಿ ಆರೋಪಿ ಮಹಿಳೆಯು ತನ್ನಿಂದ 50 ಸಾವಿರ ರೂ. ಪಡೆದು ವಂಚಿಸಿದ್ದಾಳೆಂದು ನವೀನ್ ಕುಮಾರ್ ಎಂಬಾತ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಮಹಿಳೆಯು ಜಾಮೀನು ಬಿಡುಗಡೆ ಪಡೆದುಕೊಂಡಿದ್ದಳು.

  ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದ ವ್ಯಕ್ತಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಹಲವಾರು ಬಾರಿ ನೋಟಿಸ್ ನೀಡಲಾಗಿದ್ದರೂ, ಆತ ಹಾಜರಾಗಿಲ್ಲವೆಂದು , ಆರೋಪಿ ಯುವತಿ ಪರ ನ್ಯಾಯವಾದಿ ವಿ.ಕೆ. ಓಹ್ರಿ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮನೀಶ್ ಖುರಾನಾ ಅವರು ದಿಲ್ಲಿ ಪೊಲೀಸರ ಅರ್ಜಿಯನ್ನು ತಳ್ಳಿಹಾಕಿದರು.

 ದೂರುದಾರ ಕುಮಾರ್‌ಗೆ, ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಮೂರ್ತಿ ಖುರಾನಾ ಅವರು ಎಪ್ರಿಲ್ 23ರಂದು ಮೊದಲ ಬಾರಿ ನೋಟಿಸ್ ಜಾರಿಗೊಳಿಸಿದ್ದರು. ಆನಂತರ ಮೇ 23 ಹಾಗೂ ತರುವಾಯ ಜುಲೈ 19ರಂದು ನೋಟಿಸ್ ನೀಡಿದ್ದರು. ಕುಮಾರ್ ಆತ ನೀಡಿರುವ ವಿಳಾಸದಲ್ಲಿ ಪತ್ತೆಯಾಗದ ಕಾರಣ ಆತನಿಗೆ ನೋಟಿಸ್ ನೀಡಲಾಗಿಲ್ಲವೆಂದು ಮುಖೇಶ್ ಅನಿಲ್ ತಿಳಿಸಿದ್ದಾರೆ. ಸೆಪ್ಟೆಂಬರ್ 6ರಂದು ನ್ಯಾಯಾಲಯವು ಅವರಿಗೆ ಇನ್ನೊಂದು ನೋಟಿಸ್ ಜಾರಿಗೊಳಿಸಿತು. ಆದರೆ ಶುಕ್ರವಾರದ ನಡೆದ ವಿಚಾರಣೆಯಲ್ಲಿ ದಿಲ್ಲಿ ಪೊಲೀಸರು ಕೂಡಾ ವಿಚಾರಣೆಗೆ ಹಾಜರಾಗಿರಲಿಲ್ಲ.

      ನವೀನ್ ಕುಮಾರ್ ಎಪ್ರಿಲ್ ತಿಂಗಳಿನಿಂದೀಚೆಗೆ ಹರ್ಯಾಣದಲ್ಲಿನ ತನ್ನ ಮನೆಯಿಂದ ನಾಪತ್ತೆಯಾಗಿದ್ದಾರೆ. ಆತ ನೀಡಿದ ದೂರಿನ ಆಧಾರದಲ್ಲಿ ಮಾರ್ಚ್ 3ರಂದು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಾನಸ ರಾಮ್ ಎಂಬಾತ ಜೂನಿಯರ್ ನ್ಯಾಯಾಲಯದ ಸಹಾಯಕ ಹುದ್ದೆಯಲ್ಲಿರುವ ಆರೋಪಿ ಮಹಿಳೆಯನ್ನು ತನಗೆ ಪರಿಚಯ ಮಾಡಿಸಿದ್ದ. 10 ಲಕ್ಷ ರೂ. ನೀಡಿದಲ್ಲಿ ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಆಕೆ ಭರವಸೆ ನೀಡಿದ್ದಳು. ತಾನು ಮುಂಗಡವಾಗಿ ಆಕೆಗೆ 5 ಲಕ್ಷ ರೂ. ನೀಡಿದ್ದೆ ಎಂದು ಕುಮಾರ್ ದೂರಿನಲ್ಲಿ ತಿಳಿಸಿದ್ದನು. ಆದಾಗ್ಯೂ, ಮಹಿಳೆಯು ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದ್ದಳು ಹಾಗೂ ಗೊಗೊಯಿ ವಿರುದ್ಧ ದೂರು ನೀಡಿದ್ದಕ್ಕಾಗಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆಯೆಂದು ಆಕೆ ಆರೋಪಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News