ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ನಿಶ್ಚಿತ: ಸಚಿವ ಸೋಮಣ್ಣ

Update: 2019-09-06 17:10 GMT

ಬೆಂಗಳೂರು, ಸೆ. 6: ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತವಿರುವ ಬಿಬಿಎಂಪಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತ ಅಂತ್ಯವಾಗಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ನಮ್ಮ ಪಾಲಾಗಲಿವೆ ಎಂದರು.

ರಾಜ್ಯದಲ್ಲಿ ಈಗ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ಸೋಮಣ್ಣ ಹೇಳಿದರು.

ಈ ಬಾರಿಯ ಮೈಸೂರು ದಸರಾವನ್ನು ಯಶಸ್ವಿಯಾಗಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಪಕ್ಷಾತೀತವಾಗಿ ಎಲ್ಲರೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ಕೈಗೊಳ್ಳಬೇಕಾಗಿರುವ ತುರ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಪಕ್ಷಗಳ ನಾಯಕರ ಸಲಹೆ ಪಡೆದು ಎಲ್ಲರನ್ನೂಶ್ವಾಸಕ್ಕೆ ತೆಗೆದುಕೊಂಡು ದಸರಾವನ್ನು ಸುಸೂತ್ರವಾಗಿ ನಡೆಸಲು ಸಿದ್ಧತೆಗಳು ನಡೆದಿವೆ ಎಂದು ವಿವರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಪಕ್ಷ ಸಂಘಟನೆಯ ಬಗ್ಗೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಪಕ್ಷದ ಕೋರ್ ಕಮಿಟಿ ಸಭೆಯಿದ್ದು, ಪಕ್ಷದ ಕುರಿತು ಚರ್ಚೆ ನಡೆಯಲಿದೆ. ಈ ಸಂಬಂಧ ಸಚಿವರ ಸಲಹೆ-ಸೂಚನೆಗಳನ್ನು ಪಡೆದಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News