ಪ್ರತ್ಯೇಕ ರಸ್ತೆ ಅಪಘಾತ: ಮಹಿಳೆ ಸೇರಿ ಮೂವರು ಮೃತ್ಯು

Update: 2019-09-06 17:20 GMT

ಬೆಂಗಳೂರು, ಸೆ.6: ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮಹಿಳೆ ಸೇರಿ ಮೂವರು ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ನಡೆದಿದೆ.

ವೇಗವಾಗಿ ಬಂದ ವಾಟರ್ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಮಹಿಳೆ ಮೃತಪಟ್ಟರೆ, ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಗದೂರಿನ ಪ್ರೇಮ(35) ಮೃತಪಟ್ಟಿದ್ದು, ಗಾಯಗೊಂಡಿರುವ ಪಾದಚಾರಿ ಮಹದೇವಯ್ಯ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಇಮ್ಮಡಿಹಳ್ಳಿ ಮುಖ್ಯರಸ್ತೆಯ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಕರಣ ಸಂಬಂಧ ಚಾಲಕನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

ಹಿಂದಿನಿಂದ ವೇಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್ ಬೈಕ್‌ಗೆ ಢಿಕ್ಕಿ ಹೊಡೆದು, ಓರ್ವ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಶವಂತಪುರದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ನಡೆದಿದೆ.

ಲಗ್ಗೆರೆಯ ಸುಹೇಲ್ ಪಾಷ(20) ಎಂಬುವರು ಮೃತಪಟ್ಟಿದ್ದು, ಗಾಯಗೊಂಡಿರುವ ಇಮ್ರಾನ್ ಹಾಗೂ ಸಿರಾಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಸಿರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಈ ಮೂವರು ಲಗ್ಗೆರೆಯಲ್ಲಿ ವಾಸಿಸುತ್ತಿದ್ದು, ಗುರುವಾರ ಒಂದೇ ಬೈಕ್‌ನಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎಸ್‌ಆರ್‌ಎಸ್ ಸಿಗ್ನಲ್ ಬಳಿ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಸುಹೇಲ್ ಪಾಷ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಯಶವಂತಪುರದ ಸಂಚಾರ ಪೊಲೀಸರು, ಬಸ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಾಲಕ ಸಾವು: ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಮಾಲಕ ಮಲ್ಲಿಕಾರ್ಜುನ್ ಅವರು ಆಯತಪ್ಪಿಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ಕೆ.ಆರ್.ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಕೆ.ಆರ್.ರಸ್ತೆ ಬಳಿಯ ಮನೆಗೆ ಗುರುವಾರ ರಾತ್ರಿ 9.30ರ ವೇಳೆ ಮಲ್ಲಿಕಾರ್ಜುನ್ (66) ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಾಯ ಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News