ಕಂಠೀರವ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಪಂದ್ಯಾವಳಿ ಬೇಡ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಸದಸ್ಯರಿಂದ ಪ್ರತಿಭಟನೆ

Update: 2019-09-06 17:23 GMT

ಬೆಂಗಳೂರು, ಸೆ.6: ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಸ್ ಫುಟ್‌ಬಾಲ್ ಪಂದ್ಯಗಳನ್ನು ಆಯೋಜಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ)ಯ ಸದಸ್ಯರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಪುರಭವನ ಮುಂಭಾಗ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರೊಂದಿಗೆ ಕರ್ನಾಟಕ ಅಥ್ಲೇಟಿಕ್ಸ್‌ನ(ಕೆಎಎ) ನೂರಾರು ಸದಸ್ಯರು, ಫುಟ್‌ಬಾಲ್‌ಗಾಗಿಯೇ ಸರಕಾರ ನೀಡಿರುವ ಕ್ರೀಡಾಂಗಣ ಇದೆ. ಅಲ್ಲಿ ಐಎಸ್‌ಎಲ್ ಪಂದ್ಯ ಆಯೋಜಿಸಿಕೊಳ್ಳಲಿ. ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್‌ಗಾಗಿ ಮಾತ್ರ ಉಳಿಸಬೇಕು. ಯಾವುದೇ ಕಾರಣಕ್ಕೂ ಫುಟ್‌ಬಾಲ್ ಪಂದ್ಯಾವಳಿಗಳನ್ನು ನಡೆಸಬಾರದು ಎಂದು ಘೋಷಣೆಕೂಗಿ ಒತ್ತಾಯ ಮಾಡಿದರು.

ಕೆಎಎ ಪ್ರಧಾನ ಕಾರ್ಯದರ್ಶಿ ರಾಜವೇಲು ಮಾತನಾಡಿ, ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್‌ಗಳನ್ನು ಹಾಳು ಮಾಡಲಾಗಿದೆ. ಹೀಗಾಗಿ ಇಲ್ಲಿ ನಡೆಯಬೇಕಿದ್ದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ರಾಂಚಿಗೆ ಸ್ಥಳಾಂತರವಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೆಎಸ್‌ಡಬ್ಲ ಸಂಸ್ಥೆಗೆ ಎಲ್ಲ ಅನುಕೂಲಗಳನ್ನೂ ಮಾಡಿ ಕೊಡುತ್ತಿದೆ. ಆದರೆ, ಅಥ್ಲೆಟಿಕ್ಸ್‌ಗಾಗಿಯೇ ಇರುವ ಕ್ರೀಡಾಂಗಣದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಕೆಎಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಲ್ವಿಸ್ ಜೋಸೆಫ್ ಮಾತನಾಡಿ, ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿದೆ. ಅಥ್ಲೀಟ್‌ಗಳು ಗಾಯಗೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಕೂಟವನ್ನು ಸ್ಥಳಾಂತರಿಸಲಾಗಿದೆ. ಹೊಸ ಟ್ರ್ಯಾಕ್ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಮಾಡುತ್ತಿರುವುದಾಗಿ ಇಲಾಖೆ ಹೇಳುತ್ತಲೇ ಇದೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಕೂಟ ನಡೆಸಲು ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ, ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ವಿನೋದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News