ಮಹಾಮಳೆ, ಪ್ರವಾಹ: ರಾಜ್ಯ, ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ

Update: 2019-09-06 17:44 GMT

ಬೆಂಗಳೂರು, ಸೆ.6: ನೆರೆ ಸಂತ್ರಸ್ತರ ನೋವುಗಳಿಗೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಬೆಂಗಳೂರು ನಗರ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕಳೆದ ತಿಂಗಳು ರಾಜ್ಯದಲ್ಲಿ ಸುರಿದ ಮಹಾಮಳೆಯಿಂದ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಸ್ತಿ, ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೂ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರದ ನಾಯಕರು ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಹಾವಳಿಗೆ ಸಿಲುಕಿ ರಾಜ್ಯದಲ್ಲಿ 50ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂದಾಜಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಸೂಕ್ತವಾದ ಅನುದಾನ ಕೇಳಲು ಹಿಂಜರಿಯುತ್ತಿದ್ದಾರೆ. ಇಂತಹ ನಿರ್ಲಕ್ಷ್ಯ, ಉದಾಸೀನ, ಸ್ವಾರ್ಥಪರ ಜನಪ್ರತಿನಿಧಿಗಳಿಂದಾಗಿ ಜನತೆ ಮತ್ತಷ್ಟು ಬಳಲುವಂತಾಗಿದೆ ಎಂದು ಬೆಂಗಳೂರು ನಗರ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ದನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಿಲುವುಗಳಿಂದ ಮಳೆ ಪ್ರವಾಹ ಪೀಡಿತ ಜನರು ಬೀದಿ ಪಾಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಲೆ ರಾಜ್ಯಕ್ಕೆ 50 ಸಾವಿರ ಕೋಟಿ ಪರಿಹಾರ ನೀಡಲಿ ಎಂದು ಅವರು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆನಂದ್, ಕೆಪಿಸಿಸಿ ವಕ್ತಾರ ಸಲೀಮ್, ಕಾಂಗ್ರೆಸ್ ಮುಖಂಡರಾದ ಇ.ಶೇಖರ್, ಜಯಸಿಂಹ, ಆದಿತ್ಯ, ಹೇಮರಾಜು, ಆಶಾರಾಜು, ರಚನಾ, ಉಮಾಬಾಯಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News