ಸರಳಾತಿಸರಳ ಭಾಷೆಯಲ್ಲಿ ಗಹನಾತಿಗಹನ ವಿಷಯಮಂಡನೆ: ಡಾ. ಎಂ. ಬಸವಣ್ಣನವರ ಬದುಕು ದರ್ಶನ

Update: 2019-09-06 18:23 GMT

‘‘ಸೋಮವಾರ ಬೆಳಗ್ಗೆ ಮೊದಲ ಪಿರಿಯಡ್ ನನ್ನದಾಗಿರುತ್ತಿತ್ತು. ನಾನು ಎಲ್ಲೇ ಇದ್ದರೂ, ಎಷ್ಟೇ ಕಷ್ಟವಿದ್ದರೂ ಆ ಕ್ಲಾಸ್ ತೆಗೆದುಕೊಳ್ಳಲೇಬೇಕು. ಆ ದಿನ ನಾನು ಕ್ಲಾಸಿಗೆ ಹೋದೆ. ಒಬ್ಬ ವಿದ್ಯಾರ್ಥಿನಿಯ ಮದುವೆ. (ತಿರುಪತಿಯಲ್ಲಿ ‘ನಿತ್ಯ ಮದುವೆ ಪಚ್ಚ ತೋರಣ’ ಎಂಬ ಗಾದೆಯೇ ಇದೆ) ಅವಳನ್ನು ಕ್ಲಾಸ್‌ನಲ್ಲಿ ನೋಡಿ ನೀನ್ಯಾಕೆ ಬಂದೆ ಇವತ್ತು? ನಿನ್ನ ಮದುವೆ ಅಲ್ಲವಾ? ಎಂದು ಬೈದೆ. ಅದಕ್ಕವಳು: ‘ಸರ್ ನಾನು ನಿಮ್ಮ ಕ್ಲಾಸನ್ನ ಮಿಸ್ ಮಾಡ್ಕೊಳ್ಳಲ್ಲ. ಮೊದಲ ಪಿರಿಯಡ್ ಮುಗಿಸ್ಕೊಂಡ್ ಹೋಗ್ತೀನಿ’ ಎಂದಳು. ಮನೆಗೆ ಬಂದು ಪರವಾಗಿಲ್ಲ ಮೇಷ್ಟ್ರಾಗಿದ್ದದ್ದಕ್ಕೆ ಸಾರ್ಥಕವಾಯ್ತು ಎಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ’’ ಇದು ಭಾರತದ ಮನೋವಿಜ್ಞಾನದ ಪ್ರೊಫೆಸರ್ ಗೋಪಾಲಸ್ವಾಮಿ ಅಯ್ಯರ್ ಅವರ ಶಿಷ್ಯ ಮತ್ತು ಆಂಧ್ರಪ್ರದೇಶದಲ್ಲಿ ಮೊದಲು ಮನೋವಿಜ್ಞಾನ ಅಧ್ಯಯನ ಕೇಂದ್ರವನ್ನು ಆರಂಭಿಸಿದ ಡಾ. ಎಂ. ಬಸವಣ್ಣ ಅವರ ಅನುಭವ. ಡಾ. ಬಸವಣ್ಣ ಅವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲ್ಲಿ(1933). ಪ್ರೈಮರಿ ಶಾಲೆಯ ನಂತರ ಊರು ಬಿಟ್ಟ ಬಸವಣ್ಣನವರು ಹೆಚ್ಚು ತಂಗಿದ್ದು ಹಾಸ್ಟೆಲ್‌ಗಳಲ್ಲಿ. ಹೀಗಾದದ್ದರಿಂದ ನನಗೆ ಅನುಕೂಲವೇ ಆಯಿತು. ಯಾಕೆಂದರೆ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುವುದನ್ನು ಕಲಿತೆ ಎನ್ನುವುದು ಅವರ ಅನುಭವದ ಮಾತು. ಚಾಮರಾಜನಗರದಲ್ಲಿ ಮಿಡ್ಲ್‌ಸ್ಕೂಲ್, ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ ಎಂ.ಎ. ಪದವಿ(1955), ನಿಮ್ಹಾನ್ಸ್‌ನಿಂದ ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ಡಿಪ್ಲೊಮಾ(1958) ಗಳಿಸಿದರು. ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ (1970). ಇದೇ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು(1993). ಸಾಹಿತ್ಯದಲ್ಲಿ ಒಲವಿದ್ದ ಬಸವಣ್ಣನವರು ಆಗಾಗ ಬರೆಯುತ್ತಿದ್ದರು. ಸ್ನೇಹಿತರೊಬ್ಬರು ‘‘ಸಾಹಿತ್ಯದಲ್ಲಿ ಬರೆಯುವವರು ಹಲವರಿದ್ದಾರೆ. ನೀನು ಸೈಕಾಲಜಿಯ ಬಗೆಗೆ ಬರಿ’’ ಎಂದರು. ಅವರ ಮಾತನ್ನೇ ಸೀರಿಯಸ್ಸಾಗಿ ತೆಗೆದುಕೊಂಡ ಬಸವಣ್ಣನವರು ಹಲವು ಲೇಖನಗಳನ್ನು ಬರೆದರು. ಆ ಲೇಖನಗಳನ್ನು ಗಮನಿಸಿದ ಜಿ. ಎಸ್. ಶಿವರುದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ‘‘ಯೂಂಗನ ಮನೋವೈಜ್ಞಾನಿಕ ಸಿದ್ಧಾಂತಗಳು’’ ಎನ್ನುವ ಪುಸ್ತಕವನ್ನು ಬರೆಸಿ ಪ್ರಕಟಿಸಿದರು. ಈ ಹೊತ್ತಿಗೂ ಬಸವಣ್ಣ ಅವರ ಪರಿಚಯವಿಲ್ಲದವರು ಕೂಡ ಆ ಪುಸ್ತಕವನ್ನು ಓದಿದ್ದಾರೆ. ವಿಶ್ರಾಂತರಾದ ಮೇಲೆ ಶ್ರೀನಿವಾಸರಾಜು ಅವರ ಸಂಪರ್ಕದಿಂದ ‘ಈಡಿಪಸ್ ಕಾಂಪ್ಲೆಕ್ಸ್’(2007) ಪ್ರಕಟವಾಯಿತು. ಈ ಪುಸ್ತಕದ ಬಗೆಗೆ ಯಾವ ಪ್ರತಿಕೆಯಲ್ಲೂ ಒಂದು ಸಾಲೂ ವಿಮರ್ಶೆ ಬರಲಿಲ್ಲ. ಆದರೆ ಅದು ಈವರೆಗೆ ನಾಲ್ಕು ಮುದ್ರಣಗಳನ್ನು ಕಂಡಿದೆ. ಪುಸ್ತಕ ಓದಿದ ಯಶವಂತ ಚಿತ್ತಾಲರು ಫೋನ್ ಮಾಡಿ ‘‘ತುಂಬಾ ಚೆನ್ನಾಗಿ ಬರೆದಿದ್ದೀರಿ’’ ಎಂದದ್ದೇ ಅವರಿಗೆ ಪ್ರಶಸ್ತಿ ಬಂದಷ್ಟೇ ಖುಷಿಯಾಯಿತು. ಕಾರ್ಲ್‌ಯೂಂಗ್ (2011), ಕನಸಿನ ಕಥೆ (2012), ಅರ್ಧನಾರೀಶ್ವರ (2013), ಲೂಸಿಫರ್ ಎಫೆಕ್ಟ್ (2015), ಸೈಕಲಾಜಿಕಲ್ ಕಾಂಪ್ಲೆಕ್ಸ್(2018), ಸಿಗ್ಮಂಡ್ ಫ್ರಾಯ್ಡಾ(2019). ಈ ಮಧ್ಯೆ ಇಂಗ್ಲಿಷಿನಲ್ಲಿಯೂ ಹಲವಾರು ಲೇಖನಗಳು, ಪುಸ್ತಕಗಳು ಪ್ರಕಟಗೊಂಡವು.

  ‘‘ಸಾಮಾನ್ಯವಾಗಿ ನಾವೆಲ್ಲರೂ ನಮ್ಮಲ್ಲಿಲ್ಲದ್ದನ್ನು ಪಡೆಯಲಿಕ್ಕೆ, ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತೇವೆ. ಅದಕ್ಕೆ ಬೇಕಾದ ಜೀವನಕ್ರಮವೊಂದನ್ನು ರೂಪಿಸಿಕೊಳ್ಳುತ್ತೇವೆ. ದೈಹಿಕವಾಗಿ, ಮಾನಸಿಕವಾಗಿರುವ ಕೀಳರಿಮೆಯನ್ನು ಪರಿಹರಿಸಿಕೊಳ್ಳಲು ನಾವು ಮಾಡುವ ಒಟ್ಟಾರೆ ಪ್ರಯತ್ನಗಳ ಸಮೂಹವನ್ನೇ ಆಡ್ಲರ್ ಜೀವನಶೈಲಿ ಎಂದು ಕರೆಯುವುದು. ಪ್ರತಿಯೊಬ್ಬರಿಗೂ ಅವರವರದೇ ಆದ ಒಂದು ವಿಶಿಷ್ಟ ಜೀವನಶೈಲಿ ಇರುತ್ತದೆ. ಯಾರಿಬ್ಬರ ಜೀವನಶೈಲಿಗಳು ಒಂದೇ ತೆರನಾಗಿರುವುದಿಲ್ಲ. ಕೆಲವರದು ಇತರರ ಮೇಲೆ ಅಧಿಕಾರ ನಡೆಸುವ, ಜನರನ್ನು ನಿಯಂತ್ರಿಸುವ, ಆಳುವ ಶೈಲಿ, ಕೆಲವರದು ಯಾವಾಗಲೂ ಯಾರಿಗಾದರೂ ಏನನ್ನಾದರೂ ಕೊಡುವ ಶೈಲಿ, ಇನ್ನೂ ಕೆಲವರದು ಎಲ್ಲರಿಂದ ಯಾವಾಗಲೂ ಏನನ್ನಾದರೂ ಪಡೆಯುವ ಶೈಲಿ, ಇನ್ನೂ ಕೆಲವರದು ಎಲ್ಲರಿಂದಲೂ ಎಲ್ಲದರಿಂದಲೂ ತಪ್ಪಿಸಿಕೊಳ್ಳುವ ಶೈಲಿ, ಇಲ್ಲಿ ಯಾವ ಶೈಲಿ? ಸರಿ, ಯಾವುದು ತಪ್ಪುಎಂದು ನಿರ್ದಿಷ್ಟವಾಗಿ ಹೇಳಬರುವುದಿಲ್ಲ. ಅದು ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಆಡ್ಲರ್ ಪ್ರಕಾರ ಸಮಾಜೋಪಯುಕ್ತ ಜೀವನ ಶೈಲಿ ಉತ್ತಮವಾದುದು. ಅವನ ಪ್ರಕಾರ ಸಾಮಾಜಿಕ ಆಸಕ್ತಿ ಮಾನವನ ಹುಟ್ಟುಗುಣ. ಉತ್ತಮ ಸಮಾಜವನ್ನು ನಿರ್ಮಿಸಬೇಕೆಂಬ ಅಭೀಪ್ಸೆ ಅವನಿಗೆ ರಕ್ತಗತವಾಗಿ ಬಂದಿರುತ್ತದೆ. ಸಮಾಜದಲ್ಲಿ ಎಲ್ಲರೂ ಚೆನ್ನಾಗಿದ್ದರೆ ತಾನೂ ಚೆನ್ನಾಗಿರುತ್ತೇನೆ ಎಂಬುದು ಅವನ ಆಶಯ’’ ಎಂದು ನಂಬಿರುವ ಬಸವಣ್ಣನವರು ಮಾನವೀಯತೆಗೆ ಹೆಚ್ಚು ಬೆಲೆಕೊಡುತ್ತಾರೆ. ಇವತ್ತಿನ ಎಲ್ಲ ಸಾಮಾಜಿಕ ಸಮಸ್ಯೆ, ಮನುಷ್ಯ ವ್ಯಾಪಾರಗಳನ್ನು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತಾರೆ. ‘‘ಬದುಕಿನಲ್ಲಿ ನಾವೇನಾಗಬಲ್ಲೆವೋ ಅದಾಗಬೇಕು. ಅದೇ ಆತ್ಮಸಾಕ್ಷಾತ್ಕಾರ(ರಿಯಲೈಸೇಜನ್). ನಾನು ಮೇಷ್ಟ್ರಾಗಬೇಕು ಎಂದುಕೊಂಡಿದ್ದವ. ಆದೆ ಅಷ್ಟೆ. ಈಗಲೂ ಆ ಬಗೆಗೆ ನನಗೆ ಪಶ್ಚಾತ್ತಾಪವಿಲ್ಲ. ಹಣ ಮಾಡಲಿಲ್ಲ ಅದು ಬೇರೆ ಪ್ರಶ್ನೆ. ಆ ಕೊರಗು ನನ್ನಲ್ಲಿಲ್ಲ. ಐಯಾಮ್ ಪೂರ್; ಬಟ್ ನಾಟ್ ಸಫರ್ಡ್ ಪಾವರ್ಟಿ. ಇದು ಸತ್ಯ’’ ಎನ್ನುತ್ತಾರೆ. ಅವರ ಮಕ್ಕಳು ಬಹಳ ದೊಡ್ಡ ಹುದ್ದೆಗಳಲ್ಲಿದ್ದಾರೆ. ಎಲ್ಲರ ಹತ್ತಿರವೂ ಕಾರಿದೆ. ಅವರ ಹೆಂಡತಿಗೂ ಮಗ ಒಂದು ಕಾರನ್ನು ಕೊಟ್ಟಿದ್ದಾನೆ. ಈಗಲೂ ಬಸವಣ್ಣನವರು ಕಾರನ್ನು ಬಳಸುವುದಿಲ್ಲ. ‘‘ನಮ್ಮಪ್ಪ, ನಮ್ಮಜ್ಜ ಎಲ್ಲರೂ ನಡೆದುಕೊಂಡೇ ಬದುಕಿದವರು. ಯಾರ ಮುಲಾಜಿನಲ್ಲೂ ಇರಬಾರದು ಎಂಬುದು ನನ್ನ ರೀತಿ. ಇದನ್ನೇ ನೀವು ಒಳ್ಳೆಯತನವೆನ್ನಿ, ಅಹಂಕಾರ ಎನ್ನಿ ಅದು ನನ್ನಲ್ಲಿದೆ. ಮುಖ್ಯವಾದ ಸಂಗತಿಯೆಂದರೆ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದು ನನ್ನ ಜೀವನದ ಪರಮ ಧ್ಯೇಯ. ಉಪಕಾರವಾಗದಿದ್ದರೆ ಹೋಗಲಿ ತೊಂದರೆ ಆಗಬಾರದು ಅಷ್ಟೆ. ಇದು ಸಣ್ಣವನಾಗಿದ್ದಾಗಿನಿಂದಲೂ ಬಂದುಬಿಟ್ಟಿದೆ.’’ ಅವರ ಮಾತಿನಲ್ಲಿರುವ ಸಹಜತೆ ಪ್ರಾಮಾಣಿಕತೆಯೇ ಜನರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ.

ನಿವೃತ್ತಿಯ ನಂತರವೂ ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸುತ್ತಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿಗೂ ಮನಃಶಾಸ್ತ್ರದ ಕ್ರಿಯಾಶೀಲ ವಿದ್ಯಾರ್ಥಿಯಾಗಿ ಅನೇಕ ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಒಮ್ಮೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರಂತೆ. ಇವರು ಮುಂದೆ ಹೋಗುತ್ತಿದ್ದರೆ ಅವರ ಹಿಂದೆ ಒಬ್ಬ ಹುಡುಗಿ ಇವರ ಹೆಜ್ಜೆಯ ಗುರುತಿನ ಮೇಲೆ ತನ್ನ ಹೆಜ್ಜೆಯನ್ನು ಇಟ್ಟು ನಡೆಯುತ್ತಿದ್ದಳಂತೆ. ‘‘ಯಾಕೆ ಹೀಗೆ ಮಾಡುತ್ತಿದ್ದೀಯಾ?’’ ಎಂದು ಕೇಳಿದರೆ ಅವಳು ಹೇಳಿದಳಂತೆ ‘‘ಸರ್ ನಿಮ್ಮನ್ನು ಅನುಕರಿಸುವುದಂತೂ ಸಾಧ್ಯವಿಲ್ಲ. ನಿಮ್ಮ ಹೆಜ್ಜೆಯನ್ನಾದರೂ ಅನುಸರಿಸೋಣ ಎನ್ನಿಸಿದೆ’’ ಎಂದು. ಒಬ್ಬ ಅಧ್ಯಾಪಕನಿಗೆ ಇದಕ್ಕಿಂತ ಹೆಚ್ಚಿನ ಗೌರವ ಸಿಗಲಾರದು.

 ಅಂದ ಹಾಗೆ ಬಸವಣ್ಣನವರಿಗೆ ಈ ವರೆಗೆ ಯಾವ ಪ್ರಶಸ್ತಿಯೂ ಬರಲಿಲ್ಲ. ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಶಿಫಾರಸು ಮಾಡಿದ ಸದಸ್ಯರಿಗೆ ಅಲ್ಲಿದ್ದವರು ಹೇಳಿದ ಮಾತೆಂದರೆ ‘‘ಇವು ಸಾಹಿತ್ಯದ ಪುಸ್ತಕಗಳಲ್ಲ ಹೀಗಾಗಿ ಪ್ರಶಸ್ತಿ ಕೊಡಲಾಗದು’’ ಎಂದು. ಬಸವಣ್ಣ ಅವರ ಪುಸ್ತಕಗಳು ಸಾಹಿತ್ಯ ಲೋಕದವಲ್ಲ ಎಂದರೆ ಇನ್ಯಾವುದನ್ನು ಸಾಹಿತ್ಯ ಎಂದು ಕರೆಯುವುದು. ಅಂದಹಾಗೆ ಇದೇ ರವಿವಾರ ಬೆಳಗ್ಗೆ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಬಸವಣ್ಣ ಅವರಿಗೆ ಮನೋವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಿ. ಕೃ. ಗೋಕಾಕ್ ವಾಗ್ಮಯ ಟ್ರಸ್ಟ್ ವಿ. ಕೃ. ಗೋಕಾಕ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ‘‘ಬಸವಣ್ಣನವರ ಗದ್ಯ ಸರಳಾತಿಸರಳವಾದರೂ ಗಹನಾತಿಗಹನ ವಿಚಾರಗಳನ್ನು ಮನಂಬುಗುವಂತೆ ಮಂಡಿಸಬಲ್ಲರು’’ ಎಂಬ ಎಚ್. ಎಸ್. ಶಿವಪ್ರಕಾರ ಮಾತು ಅಕ್ಷರಶಃ ಸತ್ಯ.

Writer - ನ. ರವಿಕುಮಾರ

contributor

Editor - ನ. ರವಿಕುಮಾರ

contributor

Similar News