ಯು.ಎಸ್. ಓಪನ್: ರಫೆಲ್ ನಡಾಲ್ ಫೈನಲ್‌ಗೆ ಪ್ರವೇಶ

Update: 2019-09-07 06:52 GMT

ನ್ಯೂಯಾರ್ಕ್, ಸೆ.7: ಹದಿನೆಂಟು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್ ಮೊದಲ ಸೆಮಿ ಫೈನಲ್‌ನಲ್ಲಿ ಇಟಲಿಯ ಮಟ್ಟೆವೊ ಬೆರೆಟ್ಟೆನಿ ಅವರನ್ನು 7-6(8/6), 6-4, 6-1 ಸೆಟ್‌ಗಳಿಂದ ಮಣಿಸಿ ಯು.ಎಸ್. ಓಪನ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

33ರ ಹರೆಯದ ಸ್ಪೇನ್ ಆಟಗಾರ ನಡಾಲ್ ರವಿವಾರ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ನಡೆಯುವ ಫೈನಲ್‌ನಲ್ಲಿ ರಶ್ಯದ ಡನಿಲ್ ಮಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ನಡಾಲ್ ಯು.ಎಸ್. ಓಪನ್‌ನಲ್ಲಿ ನಾಲ್ಕನೇ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.
ಐದನೇ ಶ್ರೇಯಾಂಕದ ಮಡ್ವಡೆವ್ ಮತ್ತೊಂದು ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್‌ರನ್ನು 7-6(7/5), 6-4, 6-3 ಸೆಟ್‌ಗಳಿಂದ ಮಣಿಸಿದ್ದಾರೆ.
ಒಂದು ವೇಳೆ ರವಿವಾರದ ಫೈನಲ್‌ನಲ್ಲಿ ವಿಶ್ವದ ನಂ.2ನೇ ಆಟಗಾರ ನಡಾಲ್ ಜಯಶಾಲಿಯಾದರೆ ಒಟ್ಟು 20 ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ರೋಜರ್ ಫೆಡರರ್ ದಾಖಲೆ ಮುರಿಯಲು ಮತ್ತಷ್ಟು ಸನಿಹವಾಗಲಿದ್ದಾರೆ.

ನಡಾಲ್ ವೃತ್ತಿಜೀವನದ 27ನೇ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಆಡಲಿದ್ದು, ನ್ಯೂಯಾರ್ಕ್‌ನಲ್ಲಿ ಐದನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ನಡಾಲ್ ಹಾಗೂ ಮಡ್ವೆಡೆವ್ ಕಳೆದ ತಿಂಗಳು ನಡೆದಿದ್ದ ಮಾಂಟ್ರಿಯಲ್ ಟೆನಿಸ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಆಗ ಮಡ್ವೆಡೆವ್‌ರನ್ನು ಮಣಿಸಿದ್ದ ನಡಾಲ್ ಪ್ರಶಸ್ತಿ ಜಯಿಸಿದ್ದರು.

23ರ ಹರೆಯದ ಮೆಡ್ವಡೆವ್ ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕಳೆದ ಆರು ವಾರಗಳಲ್ಲಿ ವಾಶಿಂಗ್ಟನ್ ಹಾಗೂ ಕೆನಡಾದಲ್ಲಿ ರನ್ನರ್ಸ್ ಅಪ್ ಆಗಿದ್ದ ಮಡ್ವೆಡೆವ್ ಸಿನ್ಸಿನಾಟಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News