ವಂಚನೆ ಆರೋಪ: ‘ಓಯೋ’ ಸ್ಥಾಪಕನ ವಿರುದ್ಧ ಪ್ರಕರಣ ದಾಖಲು

Update: 2019-09-07 09:19 GMT

ಬೆಂಗಳೂರು, ಸೆ.7:  ನಗರದ ಹೋಟೆಲ್ ಮಾಲಕರೊಬ್ಬರ ದೂರಿನಂತೆ ‘ಓಯೋ ಹೋಟೆಲ್ಸ್ ಆ್ಯಂಡ್ ಹೋಮ್ಸ್’ ಸಿಇಒ ಹಾಗೂ ಸ್ಥಾಪಕ ರಿತೇಶ್ ಅಗರ್ವಾಲ್ ಹಾಗೂ ಇತರ ಇಬ್ಬರು ಓಯೋ ಪ್ರತಿನಿಧಿಗಳಾದ ಆನಂದ್ ರೆಡ್ಡಿ ಹಾಗೂ ಪ್ರತೀಕ್ ಸಿಂಗ್ ವಿರುದ್ಧ   ವಂಚನೆ ಹಾಗೂ ಕ್ರಿಮಿನಲ್ ವಿಶ್ವಾಸ ದ್ರೋಹದ ಪ್ರಕರಣವನ್ನು  ವೈಟ್ ಫೀಲ್ಡ್ ಪೊಲೀಸರು ದಾಖಲಿಸಿದ್ದಾರೆ. 

ರಾಜಗುರು ಶೆಲ್ಟರ್ ಹೋಟೆಲ್ಸ್ ಮಾಲಕ ನಟರಾಜನ್  ತಮ್ಮ ದೂರಿನಲ್ಲಿ  ‘ಓಯೋ ಸಂಸ್ಥೆ’ ಒಪ್ಪಂದದ ಪ್ರಕಾರ ಪ್ರತಿ ರಿಸರ್ವೇಶನ್ ಗೆ ಕೇವಲ ಶೇ 20ರಷ್ಟು ಕಮಿಷನ್ ಪಡೆದುಕೊಳ್ಳಬೇಕಿದ್ದರೂ ಅದಕ್ಕಿಂತ ಹೆಚ್ಚು  ಕಮಿಷನ್ ಸಂಗ್ರಹಿಸಿ 1 ಕೋಟಿ ರೂ. ತನಕ ವಂಚಿಸಿದ್ದಾಗಿ ಆರೋಪಿಸಿದ್ದರು. ಓಯೋ ಹಾಗೂ ರಾಜಗುರು ಶೆಲ್ಟರ್ ಹೋಟೆಲ್ಸ್ ನಡುವೆ ಫೆಬ್ರವರಿ 2017ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 34, 406 ಹಾಗೂ 420 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ಕುರಿತಂತೆ ವೈಟ್ ಫೀಲ್ಡ್ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆರೋಪಗಳನ್ನು ಓಯೋ ವಕ್ತಾರ ನಿರಾಕರಿಸಿದ್ದಾರೆ ಹಾಗೂ  ಸಾಮಾನ್ಯ ವಿವಾದವನ್ನು ಹಿಡಿದುಕೊಂಡು ಸುಳ್ಳು ದೂರು ದಾಖಲಿಸಲಾಗಿದೆ ಎಂದು  ಹೇಳಿದ್ದಾರೆ. ಆದರೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. 
ಓಯೋ ವಿರುದ್ಧ ಈಗಾಗಲೇ ಹಲವು ಹೋಟೆಲಿಗರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಓಯೋ ವಿವಿಧ ರೀತಿಯ ಗಿಮಿಕ್  ಮುಖಾಂತರ  ಹೋಟೆಲ್ ಮಾಲಕರಿಗೆ ನಷ್ಟವುಂಟು ಮಾಡುತ್ತಿದೆ ಎಂದು ಈ ಹಿಂದೆ ಹೋಟೆಲ್ ಆ್ಯಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಆಫ್ ವೆಸ್ಟರ್ನ್ ಇಂಡಿಯಾ  ಇದರ ಸಮಿತಿ ಸದಸ್ಯ ಪ್ರದೀಪ್ ಶೆಟ್ಟಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News