ಮುಂಬೆಳಕು

Update: 2019-09-07 13:29 GMT

ಆಗೊಮ್ಮೆ ಈಗೊಮ್ಮೆ ದೊಪ್ಪನೆ ಸುರಿದು ಮಾಯವಾಗುವ ಮಳೆ ಮಾಧವನ ಹಂಚಿನ ಮನೆಯ ಪಕ್ಕಾಸು ರೀಪುಗಳು ಹುಳುಕುಬಿದ್ದುದರಿಂದ ಕಳಚಿ ಬೀಳುವ ಸ್ಥಿತಿಯಲ್ಲಿತ್ತು. ಬೆಳಗ್ಗಿನಿಂದ ಕಾಗೆಯೊಂದು ಮನೆಯ ಮುಂದಿನ ಮರದಲ್ಲಿ ಕುಳಿತು ಒಂದೇ ಸವನೆ ಕ್ರಾವ್ ಕ್ರಾವ್ ಎನ್ನುತ್ತಿತ್ತು. ಯಾರೋ ನೆಂಟರು ಬರುತ್ತಾರೆಂದು ಕಾಣಿಸುತ್ತದೆ... ಮಾಧವನ ಮಾತಿಗೆ ಅವನ ಹೆಂಡತಿ ಸಿಟ್ಟಿನಿಂದ ಸಧ್ಯಕ್ಕೆ ಈ ಕುಂಬಟೆ ಮನೆಗೆ ಯಾರೂ ಬರುವುದು ಬೇಡಪ್ಪಾ ಅನ್ನುತ್ತಾ ಒಳನಡೆದಳು.

 ಅಲ್ಲಲ್ಲಿ ಮಾಡಿನಿಂದ ನೀರು ಬಿದ್ದು ನೆಲವೆಲ್ಲಾ ಒದ್ದೆಯಾಗಿತ್ತು. ಬಾಡಿಗೆ ಮನೆಯಾದುದರಿಂದ ರಿಪೇರಿಯೂ ಅಸಾಧ್ಯವಾಗಿತ್ತು. ಅಡುಗೆ ಮನೆಯಲ್ಲಿ ತೊಟ್ಟಿಕ್ಕಿದ್ದ ನೀರನ್ನು ಹಳೇ ವಸ್ತ್ರದಿಂದ ಒರಸುತ್ತಾ ಈ ಗ್ರಹಚಾರ ಯಾವಾಗ ಮುಗಿಯುತ್ತದೋ ಅಂತ ಗೊಣಗುತ್ತಿದ್ದಳು ಅವನ ಹೆಂಡತಿ ಒಲೆಯನ್ನು ದೊಡ್ಡ ಮಾಡಿದಳು. ಅಕ್ಕಿ ಬೇಯುತ್ತಿದ್ದಂತೆ ಗೋಡೆಗೆ ನೇತು ಹಾಕಿದ್ದ ಪ್ಲಾಸ್ಟಿಕ್ ತೊಟ್ಟೆಯಿಂದ ಸ್ವಲ್ಪ ಒಣ ಮೀನು ತೆಗೆದು ರಪರಪ ಕೆರೆದು ತೊಳೆದು ಒಂದಿಷ್ಟು ಸಾರು ಮಾಡಹತ್ತಿದಳು. ಅಡುಗೆ ಅನಿಲಮುಗಿದು ತಿಂಗಳೇ ಕಳೆದಿದೆ ತರಿಸೋಣವೆಂದರೆ ಇಬ್ಬರ ಕೈಯಲ್ಲಿ ದುಡ್ಡಿಲ್ಲ. ಮಾಡಿನಂತೆ ಹರಕುಗೊಂಡ ಮಾಧವನ ಶರೀರ ಮತ್ತು ಮನಸ್ಸು ಎದ್ದರೆ ನಿಲ್ಲಲು ಕಷ್ಟ ನಿಂತರೆ ಸೊಂಟ ಹಿಡಿದು ಕೂರಬೇಕು. ಬೆಂಚಿನಲ್ಲಿ ಕುಳಿತಿದ್ದವನಿಗೆ ಒಮ್ಮೆ ಈ ಮನೆ ಪೂರ್ತಿ ಕಳಚಿ ಮೈ ಮೇಲೆ ಬಿದ್ದಿರೆ ಚೆನ್ನಾಗಿತ್ತು. ಅದರೊಳಗೆ ಸಾಯಬಹುದಿತ್ತು. ಆಮೇಲೆ ಈ ಕಷ್ಟಗಳನ್ನೆಲ್ಲಾ ಅನುಭವಿಸುವ ತಾಪತ್ರಯ ಇರುವುದಿಲ್ಲವಲ್ಲಾ ಎಂಬ ಆಲೋಚನೆ ಬರತ್ತಿತ್ತು. ರಸ್ತೆ ಬದಿಗೆ ಜೋಗಣ್ಣ ನ ಅಂಗಡಿಗೆ ಹೋಗಿ ಬರೋಣವೆನಿಸಿದರೂ ಕೈಯಲ್ಲಿ ದುಡ್ಡಿಲ್ಲದೆ ಹೋಗಿ ಮಾಡುವುದಾದರೂ ಏನು? ನಿನ್ನೆ ತಾನೇ ಹೋಗಿ ಒಂದಿಷ್ಟು ಅಕ್ಕಿ ಒಣ ಮೀನು ತಂದಾಗಿದೆ. ಪುನಃ ಸಾಲ ಅಂತ ಕೈಚಾಚಿದರೆ ತೀರಿಸುವುದಾದರೂ ಹೇಗೆ? ಬೀಡಿಕಟ್ಟುವ ಕೆಲಸ ಇಲ್ಲದಾಗ ಅವನ ಹೆಂಡತಿ ಒಂದೆರಡು ಮನೆಗಳಿಗೆ ಹೋಗಿ ಅಲ್ಲೆಲ್ಲಾದರೂ ಸಣ್ಣಪುಟ್ಟ ಕೆಲಸ ಅಂತ ಮಾಡಿ ಅವರು ಕೊಡುವ ಹಣದಲ್ಲಿ ಸಾಲದ ಬದುಕಿನ ಜೊತೆ ಬದುಕೂ ಸಾಗುತ್ತಿತ್ತು.

 ಈ ಎಲ್ಲಾ ಪ್ರಾರಾಬ್ದಗಳು ಬಂತು ಎಲ್ಲಿಂದ. ಅಯ್ಯೋ ಅದು ಬಂದದ್ದಲ್ಲ ಮಾಡಿಕೊಂಡಿದ್ದು ಅಂದರೂ ತಪ್ಪಾಗಲಾರದು ಅಥವಾ ಮಾಧವನ ಹಣೆಬರಹವೋ ಎಂದರೂ ಆಗಬಹುದು. ಯಾಕೆಂದರೆ ಅವನ ಬದುಕಿನ ಪುಸ್ತಕಗಳ ಪುಟಗಳನ್ನು ತಿರುಗಿಸಿದರೆ ಹಿಂದಿನ ಐಷಾರಾಮಿ ಜೀವನ ಯಾವ ಸುಲ್ತಾನನಿಗೂ ಕಮ್ಮಿಯಲ್ಲದ್ದು.

 ಖಾದರ್ ಸಾಹೇಬರು ಕೈಗೆತ್ತಿಕೊಳ್ಳುತ್ತ್ತಿದ್ದ ದೊಡ್ಡ ದೊಡ್ಡ ಮನೆಯ ಕೆಲಸಗಳ ಕಂಟ್ರಾಕ್ಟ್ ಎಲ್ಲಾ ಮಾಧವನಿಗೆ. ಕಾರಣ ಸಾಹೇಬರಿಗೆ ಮಾಧವನನ್ನು ಬಿಟ್ಟರೆ ಯಾರೂ ಸರಿಹೊಂದುತ್ತಿರಲಿಲ್ಲ. ಮಾಧವನ ಕೆಲಸ ಹಾಗಿತ್ತು. ಐದಾರು ಕಡೆ ಕೆಲಸ. ಕೆಲಸಕ್ಕೆ ಬೇಕಾದಷ್ಟು ಜನ. ನಿರೀಕ್ಷಿಸಿದ್ದ ಹಣ ಕೈಸೇರುವ ಸಮಯ. ಖಾದರ್ ಸಾಹೇಬರಿಗೆ ತನ್ನ ಬಂಧು ಬಳಗದವರೆಲ್ಲಾ ಇಲ್ಲದ ಒಂದು ಬಾಂಧವ್ಯ ಮಾಧವನಲ್ಲಿ. ಇದು ಕೆಲಸಕ್ಕಷ್ಟೇ ಸೀಮಿತ ಅಂದರೆ ಖಂಡಿತಾ ತಪ್ಪಾದೀತು. ಪರಸ್ಪರ ನಂಬಿಕೆ ವಿಶ್ವಾಸಗಳು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಂತೆ ಮಾಡಿತ್ತು. ಕೆಲವೊಮ್ಮೆ ನಡೆಯುವ ಮಾಧವನ ಗೈರುಹಾಜರಿ ಸಾಹೇಬರಿಗೆ ಅಸಾಧ್ಯ ಸಿಟ್ಟನ್ನೂ ತರಿಸುತ್ತಿತ್ತು ಆಗೆಲ್ಲಾ ಖಡಾಖಂಡಿತವಾಗಿ ಬೈಯುತ್ತಿದ್ದರು. ವ್ಯವಹಾರ ವಿಷಯದಲ್ಲಿ ಮಾಧವನಿಗೆ ಅಸಡ್ಡೆ. ಆದರೆ ಹಬ್ಬ ಹರಿದಿನಗಳ ಬಂತೆಂದರೆ ಇಬ್ಬರಿಗೂ ಖುಷಿಯೇ ಖುಷಿ ಅಷ್ಟಮಿ- ಚೌತಿ ಗಳ ದಿನಗಳಲ್ಲಿ ಮಾಧವನ ಮನೆಗೆ ಬಂದು ಹಬ್ಬದಡುಗೆಯ ಸವಿ. ಸವಿಯುತ್ತಿದ್ದರೆ ಸಾಹೇಬರ ರಮಝಾನ್ ಇನ್ನಿತರ ಹಬ್ಬಗಳಲ್ಲಿ ಗಮ್ಮತ್ತೇ ಗಮ್ಮತ್ತು. ಅತ್ತಿತ್ತ ಸಿಹಿ ತಿನಿಸುಗಳ ರವಾನೆಯೂ ನಡೆಯುತ್ತಿತ್ತು. ಅದೊಂದು ಸಂತೋಷವೇ ಬೇರೆ. ಮಾಧವನ ಮನೆ ನಿರ್ಮಾಣದಲ್ಲಿ ತನ್ನ ಕೆೈಲಾದ ಸಹಾಯವನ್ನೂ ಕೊಟ್ಟಿದ್ದರು. ಒಂದು ರೀತಿಯಲ್ಲಿ ಮಾಧವನಿಗೆ ಆ ದಿನಗಳು ಗೆಲುವಿನ ದಿನಗಳೆಂದೇ ಹೇಳಬಹುದು. ಈ ಮಧ್ಯೆ ಮಾಧವನಿಗೆ ಅಂಟಿಕೊಂಡ ‘ಕುಡಿವ’ ಚಟವನ್ನು ಆಕ್ಷೇಪಿಸಿ ‘‘ ನೋಡು ಬೇರೆಯವರ ವಿಷಯ ನಾನು ಹೇಳೋದಿಲ್ಲ. ಆದರೆ ನನ್ನ ವಿಷಯದಲ್ಲಿ ಈ ರೀತಿ ಖಂಡಿತಾ ಒಪ್ಪಲಾರೆ. ಇದು ವ್ಯವಹಾರಕ್ಕೂ ಮಾರಕ. ಮಾತ್ರವಲ್ಲ ಹೀಗೇ ಇದ್ದರೆ ನಾನು ನಿನ್ನೊಡನೆ ಇರುವ ಸ್ನೇಹವನ್ನು ತೊರೆಯಲೂ ಸಿದ್ಧ...’’ ಎಂದು ಬಲವಾಗಿ ಆಕ್ಷೇಪಿಸಿದ್ದರು... ‘‘ಬಿಟ್ಟರೆ ಬಿಡು ಇಲ್ಲದಿದ್ದರೆ ನಿನ್ನಿಷ್ಟ... ಹಾಳಾಗ್ತಿಯಾ ಇದರಿಂದ...’’ ಎಂದು ಹೇಳುವಾಗ ಅವರೊಳಗೆ ನೋವಿನ ಧ್ವನಿಯಿತ್ತು. ಇಷ್ಟಾದರೂ ಮಾಧವ ಕದ್ದು ಮುಚ್ಚಿ ಕುಡಿವ ಸುದ್ದಿ ಸಾಹೇಬರಿಗೆ ತಿಳಿದಾಗಳಂತೂ ಬಹಳ ವ್ಯಥೆ ಪಡುತ್ತಿದ್ದರು. ‘‘ಕುಡಿಯುವುದು ಬಿಡುವುದು ನಿನ್ನಿಷ್ಟ... ಕೆಲಸದಲ್ಲಿ ನಿಗಾ ಇರಲಿ...’’ ಎಂದು ಬೇಸರದಿಂದ ನುಡಿದಿದ್ದರು. ದಿನದಿನ ಮಾಧವನ ನಡೆನುಡಿಗಳು ಭಿನ್ನವಾಗುತ್ತಲೇ ಸಾಹೇಬರಿಗೆ ‘‘ಇದೊಂದು ಪ್ರಾರಾಬ್ದ ಅಂಟಿಕೊಂಡಂತೆ ಅನಿಸತೊಡಗಿತು. ಖಿನ್ನತೆ ಮನಸ್ಸನು ಆವರಿಸತೊಡಗಿತು. ಅದೊಂದು ದಿನ ಮಾಧವನಲ್ಲಿ ‘‘ಮುಟ್ಟಿದ ಈ ಕೆಲಸ ಮುಗಿಸಿಕೊಂಡು.. ಇನ್ಮೇಲೆ ಹೊಸ ಕೆಲಸವನ್ನು ನಾನು ಒಪ್ಪಿಕೊಳ್ಳುವುದಿಲ್ಲ... ಯಾಕೋ ನನಗೆ ಈಗೀಗ ಮೈ ಮನಗಳು ಬಳಲಿದಂತಾಗಿದೆ’’ ಎಂದು ಹೇಳಿ ರಪ್ಪನೆ ಹೊರಟು ಹೋಗಿದ್ದರು.

ಅನಾರೋಗ್ಯ ಪೀಡಿತರಾಗಿ ಮಲಗಿದ್ದವರು ಒಂದೇ ವಾರದಲ್ಲಿ ಅಂತ್ಯ ಯಾತ್ರೆ ಕೈಗೊಂಡಿದ್ದರು. ಈಗ ಮಾಧವನಿಗೆ ಬಲಗೈ ಮುರಿದಂತಾಗಿತ್ತು.

ಮಾಧವನ ಕೆಲಸದ ವೇಗ ಕುಸಿಯಿತು. ಕೆಲಸದ ಆಳುಗಳು ಕಮ್ಮಿಯಾದರು.ಲಗಾಮು ಇಲ್ಲದೆ ಓಡುತ್ತಿದ್ದ ಬದುಕಿನ ಬಂಡಿಯ ಕೀಲು ತಪ್ಪಿ ಕುಸಿದು ಬಿದ್ದು ಎತ್ತಲೂ ಆಗದ ಸ್ಥಿತಿ ಉಂಟಾಯಿತು. ಮೋಜು ಮಸ್ತಿಗಾಗಿ ಅಂಟಿಕೊಂಡ ‘ಕುಡಿತ’ ಮಾಧವ ಈಗ ಅದರ ಕಬಂಧ ಬಾಹುಗಳೊಳಗೆ ಬಂದಿಯಾಗಿದ್ದ. ಒಂದೆಡೆ ಅಗಲಿ ಹೋದ ಆತ್ಮೀಯತೆ ಇನ್ನೊಂದೆಡೆ ಕಳಚಿಕೊಳ್ಳಲಾಗದೆ ಈ ಅನಿಷ್ಟ ಬಂಧನದ ವ್ಯಾಕುಲತೆ. ರೀತಿ ನೀತಿ ಇಲ್ಲದ ಬದುಕಿನ ಅಲೆದಾಟದಲ್ಲಿ ಮಾಧವನಿಗೆ ಈಗ ಎಲ್ಲವೂ ಅಸ್ಪಷ್ಟಗಳೇ ತುಂಬಿ ಕೊಂಡಂತಾಯಿತು. ಮುಂಬಾಗಿಲಿನಿಂದ ಒಳಗೆ ಕಾಲಿಟ್ಟಿದ್ದ ಸಕಲ ಐಶ್ವರ್ಯಗಳೂ ಹಿಂಬಾಗಿಲಿನಿಂದ ಹೊರ ನಡೆದವು. ಸೊತ್ತು ಸಂಪತ್ತುಗಳು ಒಂದೊಂದಾಗಿ ಖಾಲಿಯಾಗತೊಡಗಿದವು.

‘‘ ಇರುವುದೆಲ್ಲವನ್ನೂ ನುಂಗಿ ನೀರು ಕುಡಿಯುತ್ತಿದ್ದೀರಿ. ಇರುವ ಆ ಒಬ್ಬ ಮಗನಿಗಾದರೂ ಏನಾದರೂ ಸ್ವಲ್ಪ ಉಳಿಸಿ’’ ಎಂದು ಅಂಗಲಾಚಿದ ಹೆಂಡತಿಗೆ ಸಿಕ್ಕಿದ್ದು ಏಟುಗಳು. ಮಗನಿಗೆ ಬೈಗುಳಗಳು.

‘‘ ಅಲ್ಪಮತಿಗೆ ಐಶ್ವರ್ಯ ಬಂದರೆ ಅದೂ ಒಂದು ರೀತಿಯಲ್ಲಿ ಶಾಪವಾಗಿಬಿಡುತ್ತದೆ’’ ಮನಸ್ಸಿನಲ್ಲೇ ಅಂದುಕೊಂಡಳು. ಎಲ್ಲವನ್ನೂ ಸಹಿಸಿದಳು. ಆದರೆ ಆ ಪುಟ್ಟ ಹುಡುಗನ ಮನಸ್ಸಿನಲ್ಲಿ ತುಂಬಿಕೊಂಡಿದ್ದು ಅಗಾಧ ನೋವು, ಹತಾಶೆ ಏಕಾಂಗಿತನದ ಬೇಸರದಿಂದ ರಾತ್ರಿ ಬೆಳಗಾಗುವುದರೊಳಗೆ ಯಾರಿಗೂ ಹೇಳದೆ ಹೊರಟು ಹೋಗಿದ್ದ. ಎಷ್ಟು ಹುಡುಕಾಡಿ ಅಲೆದಾಟ ನಡೆಸಿದರೂ ಮಗ ಪತ್ತೆಯಾಗಲಿಲ್ಲ. ಸಾಹೇಬರ ನೆನಪಾಗಿ ಅಲ್ಲಿಗೆ ಹೋದರೆ ‘‘ಅವರು ಸಾಹೇಬರ ನಿಧನದ ನಂತರ ಸೊತ್ತುಗಳನ್ನೆಲ್ಲಾ ಮಾರಿ ಕುಟುಂಬ ಸಮೇತ ದೂರದ ಊರಿಗೆ ಹೋಗಿದ್ದಾರೆ’’ ಎಂಬ ವಿಷಯ ತಿಳಿಯಿತು.

ರಥವೇರಿ ಸಾಗುತ್ತಿದ್ದವ ಆಯತಪ್ಪಿ ಬಿದ್ದು ರಥದ ಚಕ್ರಕ್ಕೆ ಸಿಲುಕಿ ನಲುಗಿದಂತಾಗಿತ್ತು ಮಾಧವನ ಪರಿಸ್ಥಿತಿ. ಬದುಕಿನ ಹಂತ ಹಂತವೂ ಕುಸಿ ಕುಸಿದು ಪ್ರಪಾತದ ಆಳಕ್ಕೆ ಬಿದ್ದಂತಾಯಿತು. ಮೇಲೇರಲು ಪ್ರಯತ್ನಿಸಿದಷ್ಟೂ ಒಳಸೆಳೆವ ಕೊರಕಲು. ಐವತ್ತರ ಹರೆಯದ ಮಾಧವ ಎಪ್ಪತ್ತರ ವನಂತೆ ಕಾಣತೊಡಗಿದ.

ಇಷ್ಟಾದರೂ ಬೆನ್ನಿಗೆ ಅಂಟಿದ್ದ ‘ಅಮಲಿನ ’ ಬೇತಾಳ ಅವನನ್ನು ಬಿಡಲೇ ಇಲ್ಲ. ಅವನಲ್ಲಿದ್ದ ಚೂರು, ಪಾರನ್ನೂ ಕಸಿದುಕೊಂಡೇ ಹೋಯಿತು. ಈಗ ಮಾಧವ ಯಾರಿಗೂ ಬೇಡದ ಕಾಲಕಸವಾಗಿದ್ದ. ಯಾರ್ಯಾರದೋ ಕೈ ಬಾಯಿ ನೋಡುವ ಹಾಗಿದ್ದಾನೆ. ಹಿಂದಿನ ಅ ದಿನಗಳ ಬಗೆಗೆ ಮೆಲುಕು ಹಾಕುತ್ತಾ ಕೈ ಚಾಚುವ ಹಂಬಲದಲ್ಲಿದ್ದಾನೆ. ಇನ್ನೆಲ್ಲಿಂದ ಬರಬೇಕು ಆ ಸುದಿನಗಳು ಹೆಂಡತಿ ತಂದಿಟ್ಟ ಊಟ, ಒಣ ಮೀನಿನ ಸಾರು ಹೊಟ್ಟೆಗೆ ಇಳಿಸಿದವನೇ ಎದ್ದು ಬೆಂಚಿಗೆ ಅಂಟಿಕೊಳ್ಳುವಷ್ಟರಲ್ಲಿ ಮನೆಯ ಮುಂಭಾಗದ ರಸ್ತೆಯಲ್ಲಿ ಕಾರು ನಿಂತ ಶಬ್ದ. ಪಕ್ಕದ ಮನೆಯವರಿಗೆ ನೆಂಟರಿರಬಹುದೆಂದು ಆಲೋಚಿಸಿದರೆ ಅದರಿಂದ ಇಳಿದ ವ್ಯಕ್ತಿ ನೇರವಾಗಿ ಇವನ ಕಡೆಗೆ ಬರುವುದು ಕಾಣಿಸಿತು. ಬಂದ ಆ ನವ ತರುಣ ಕೇಳಿದ ‘‘ನೀವು ಮಾಧವ ಅಲ್ಲವೇ?’’ ‘‘ಹೌದು ನೀವು ಯಾರು?’’ ಎಂದು ಕೇಳಿದ.

‘‘ ನಿಮ್ಮ ಗುರುತೇ ಸಿಗಲಿಲ್ಲ. ಮೂವತ್ತು ವರ್ಷಗಳ ಮೊದಲು ನೋಡಿದ್ದಲ್ಲ ಅದಕ್ಕೆ...ಮೈಗೆ ಹುಷಾರಿರಲಿಲ್ಲವೇ..? ಎಷ್ಟೊಂದು ಸಣಕಲಾಗಿದ್ದೀರಿ..’’ ಅಂದ ‘‘ನಿಮ್ಮ ಗುರುತು ನನಗೂ ಹತ್ತಿಲ್ಲ... ನೀವು?’’ ಮರುಪ್ರಶ್ನೆ ಹಾಕಿದ ಮಾಧವ ‘‘ಹಾಂ.. ನಾನು ಖಾದರ್ ಸಾಹೇಬರ ಮಗ ಜೈನುದ್ದೀನ್.. ಅರ್ಧಗಂಟೆ ಆಯ್ತು. ನಿಮ್ಮ ಮನೆಯ ದಾರಿ ಹುಡುಕೋದು... ಅಂದ ಹಾಗೇ ನಿಮ್ಮ ಆ ಮನೆ ಆಸ್ತಿ ಎಲ್ಲಾ ಮಾರಿದ್ದೀರಲ್ಲಾ...’’ ಮನೆಯ ಸುತ್ತಮುತ್ತ ವೀಕ್ಷಿಸುತ್ತಾ ಕೇಳಿದ ಆತ.

ಹೌದೆಂದು ತಲೆಯಾಡಿಸಿದ ಮಾಧವ ಅಲ್ಲಾ ನನ್ನ ಪ್ರಾರಬ್ದ ಕರ್ಮದಿಂದ ಹಾಗಾಯಿತು ಎಂದು ಹೇಳದಿದ್ದರೂ ಒಳಗೊಳಗೆ ಅಂದುಕೊಂಡವನೇ ‘‘ ಏನು ವಿಷಯ..? ಅಂತ ಪ್ರಶ್ನಿಸಿದ.

‘‘ನಿಮಗೊಬ್ಬ ಮಗ ಇದ್ದನಲ್ಲಾ ಅವನೆಲ್ಲಿ?’’ ಆತ ಕೇಳಿದ. ‘‘ಗೊತ್ತಿಲ್ಲ... ಜಗಳವಾಡಿ ಹೋದವನ ಪತ್ತೆಯೇ ಇಲ್ಲ’’ ಮಾಧವ ಆಡಿದ ಸುಳ್ಳಿನ ಮಾತುಗಳನ್ನು ಕೇಳುತ್ತಿದ್ದ ಅವನ ಹೆಂಡತಿ ‘‘ಎಲ್ಲಾ ನಿಮ್ಮ ಕರ್ಮಕಾಂಡದಿಂದ ಆದದ್ದು ... ಈಗ ಪಾಪ ಆ ಮಗುವಿನ ಮೇಲೆ ಆರೋಪ ಹೊರಿಸುತ್ತಿದ್ದೀರಲ್ಲಾ..’’ ಎಂದು ಮನಸ್ಸಿನಲ್ಲಿ ಅಂದುಕೊಂಡು ಒಳಗೊಳಗೆ ದುಃಖಿಸಿದಳು. ‘‘ಇಲ್ಲ ಮಾಧವಣ್ಣ ಅವನು ನನ್ನ ಜತೆಯಲ್ಲೇ ಇದ್ದಾನೆ.. ಅದೊಂದು ದಿನ ನನ್ನ ಕಾರು ಹಾಳಾಗಿ ಮನೆಯಲ್ಲಿ ಬಾಕಿಯಾಗಿದ್ದಾಗ ಮೆಕ್ಯಾನಿಕ್‌ನನ್ನು ಬರ ಹೇಳಿದ್ದೆ. ಆವತ್ತು ಮನೆಗೆ ಬಂದಿದ್ದ ಆತನಲ್ಲಿ ಕುಶಲೋಪರಿ ಮಾತನಾಡುವಾಗ ಸತ್ಯ ತಿಳಿಯಿತು. ಒಳ್ಳೆ ಕೆಲಸದವ, ಬುದ್ಧಿವಂತ .. ನಿಮ್ಮ ಮಗ ಅಂತ ತಿಳಿದ ಮೇಲೆ ನನಗೊಂದು ಅಭಿಪ್ರಾಯ ಹೊಳೆಯಿತು. ನನಗೊಂದು ಕಾರ್‌ನ ಶೋರೂಂ ಇದೆ. ಅವನನ್ನು ಅಲ್ಲಿಗೆ ಆಹ್ವಾನಿಸಿದೆ. ನನ್ನ ಜೊತೆಯಲ್ಲೇ ಇದ್ದಾನೆ. ಅವನನ್ನು ನಾನು ಯಾವತ್ತೂ ಬಿಟ್ಟು ಹೋಗೋದಿಲ್ಲ. ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವನಿಗೊಂದು ರೂಮು ಕೊಟ್ಟು ಊಟ- ತಿಂಡಿಯ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇನೆ. ನೀವು ಮಾತ್ರ ನನ್ನಲ್ಲಿ ಸುಳ್ಳು ಹೇಳಿದ್ದೀರಿ’’ ಅವನು ಅಂದಾಗ ಮಾಧವನು ನಾಚಿಕೆಯಿಂದ ತಲೆತಗ್ಗಿಸಿದ. ಒಳಗೆ ಪಾಪ ಪ್ರಜ್ಞೆ ಕಾಡುತ್ತಿತ್ತು.

‘‘ಅವನನ್ನು ನೋಡಬೇಕು ಅನ್ನಿಸ್ತಿದೆ. ದಯವಿಟ್ಟು ಕರಕೊಂಡು ಬರ್ತೀರ?’’ ಮಾಧವನ ಹೆಂಡತಿಯ ಮಾತಿನಲ್ಲಿ ಅಂಗಲಾಚುವಿಕೆ ಎದ್ದು ಕಾಣಿಸುತ್ತಲಿತ್ತು. ಜೊತೆಯಲ್ಲಿ ಕಣ್ಣಂಚಿನಲ್ಲಿ ನೀರಿನ ಹನಿ.

‘‘ಖಂಡಿತವಾಗಿಯೂ’’ ಮಾಧವನ ಕೈ ಹಿಡಿದು ಭರವಸೆಯಿತ್ತ ಆತ. ಒಳ ಬನ್ನಿ ಒಂದಿಷ್ಟು ಕಾಫಿ ಕುಡಿದು ಹೋಗುವಿರಂತೆ. ಮಾಧವನ ಹೆಂಡತಿ ಸಂಭ್ರಮದಿಂದಲೇ ಹೇಳಿದಳು.

‘‘ಇಲ್ಲಕ್ಕಾ... ಇನ್ನೊಮ್ಮೆ ನಾವು ಅವನೂ ಜೊತೆಯಾಗೇ ಬರ್ತೇವೆ.. ಇನ್ನು ಹೇಗೂ ಹಬ್ಬಗಳು ಬರ್ತಾ ಇವೆಯಲ್ಲಾ ಆವಾಗ ನೋಡೋಣವಂತೆ...’’ ಅಂದ ಆತ.

ಹಳೆಯ ವಿಚಾರಗಳು, ಒಂದಿಷ್ಟು ಮಾತುಗಳು ಹರಿದಾಡುತ್ತಿದ್ದಂತೆ ತಂದೆಯ ನೆನಪಾಗಿ ಜೈನುದ್ದೀನ್‌ನ ಕಣ್ಣುಗಳಲ್ಲಿ ನೋವಿನ ಛಾಯೆ ಕಾಣಿಸಿತು. ಮಾಧವನ ಕಣ್ಣುಗಳೂ ತೇವವಾದವು.

ವ್ಯಾಪಾರ ಈಗ ತಾನೇ ಹಸಿರು ಹಿಡಿಯ ತೊಡಗಿದೆ... ಎಂದವನೇ ಜೋಬಿನೊಳಗೆ ಕೈ ತೂರಿ ಸ್ವಲ್ಪ ನೋಟುಗಳನ್ನು ತೆೆದು ಮಾಧವನ ಕೈಗಿತ್ತ. ಮಾಧವ ಬೇಡವೆಂದರೂ ಕೇಳಲಿಲ್ಲ.

‘‘ನಾನಿನ್ನು ಬರ್ತೇನೆ... ಮಗನ ಬಗ್ಗೆ ಯಾವ ಕಳವಳವೂ ಬೇಡ...’’ ಎಂದವನೇ ಕಾರು ಹತ್ತಿದ. ಭರವಸೆಯ ಬೆಳಕೊಂದು ಮಾಧವನ ಕಣ್ಣಮುಂದೆ ಮೂಡಿದಂತಾಯಿತು. ಯಾರಿಗೂ ತಿಳಿಯದ ಯಾವುದೋ ಬಂಧಗಳು ಯಾರ್ಯಾರನ್ನೊ ಹೇಗೆಲ್ಲಾ ಒಂದಕ್ಕೊಂದು ಬೆಸೆದು ಬಿಡುತ್ತದೆ... ಮನಸ್ಸಿನಲ್ಲೇ ಯೋಚಿಸಿದ ಮಾಧವನಿಗೆ ನೂರಾರು ಸಂಕಲ್ಪಗಳನ್ನು ಹುಟ್ಟುಹಾಕಿತು. ಅಗೋಚರ ಆ ಶಕ್ತಿಗೆ ಮನದಲ್ಲೇ ವಂದಿಸಿದ. ಆಗಸ ತುಂಬಾ ಕಪ್ಪನೆ ಮೋಡ ದಟ್ಟೈಸಿಕೊಂಡಿದ್ದರೂ ಹಿತವಾದ ತಂಗಾಳಿ ಬೀಸಿ ಬಂದು ಒಂದೆರಡು ದಪ್ಪನೆಯ ಹನಿಗಳನ್ನು ಪಟಪಟನೆ ಉದುರಿಸಿ ಮುಂದೆ ಸಾಗಿತು. ಕೈಯಲ್ಲಿದ್ದ ಆ ನೋಟಗಳನ್ನು ಹೆಂಡತಿಯ ಕೈಗೆ ವರ್ಗಾಯಿಸಿದ.

Writer - ಕೆ. ಆನಂದ ಆಚಾರ್ಯ ಕುಂಬಳೆ

contributor

Editor - ಕೆ. ಆನಂದ ಆಚಾರ್ಯ ಕುಂಬಳೆ

contributor

Similar News