ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧಕ್ಕೆ ನಿಯಮಾವಳಿಗಳ ರಚನೆ: ಡಾ.ಕೆ.ಸುಧಾಕರ್

Update: 2019-09-07 14:09 GMT

ಬೆಂಗಳೂರು, ಸೆ.7: ರಾಜ್ಯಾದ್ಯಂತ ಹಂತಹಂತವಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರಕಾರಕ್ಕೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಶನಿವಾರ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಅಂಗವಾಗಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಗೂಬೆಗಳ ಮುಗ್ಧ ಲೋಕ ಎಂಬ ಛಾಯಾಚಿತ್ರ, ಸಾಕ್ಷಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಕರೆ ನೀಡಿದ್ದಾರೆ. ಆದರೆ, ನಾವು ಅವರಿಗಿಂತಲೂ ಮೊದಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ, ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ. ಅಲ್ಲದೆ, ರಾಜ್ಯಾದ್ಯಂತ ಸಂಚಾರ ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಾರ್ಯೋನ್ಮುಖರಾಗಿದ್ದೇವೆ ಎಂದರು.

ನಾವು ಇಂದು ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್ ಸಾವಿರಾರು ಟನ್‌ಗಳಷ್ಟು ಸಮುದ್ರದ ಪಾಲಾಗುತ್ತಿದೆ. ಅಲ್ಲಿನ ಮೀನುಗಳು ಸೇರಿ ಹಲವು ಜಲಚರಗಳು ಪ್ಲಾಸ್ಟಿಕ್ ಸೇವಿಸಿ ಸಾಯುತ್ತಿವೆ. ಅಲ್ಲದೆ, ಸಮುದ್ರದ ಮೀನುಗಳು ಮನುಷ್ಯರು ತಿಂದು, ಕ್ಯಾನ್ಸರ್‌ರಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಮಲೆನಾಡು, ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಜನ ತತ್ತರಿಸಿದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬರದಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇದಕ್ಕೆಲ್ಲಾ ನಾವೆಲ್ಲರೂ ಸೇರಿ ಪರಿಸರಕ್ಕೆ ಮಾಡುತ್ತಿರುವ ಹಾನಿಯೇ ಕಾರಣವಾಗಿದೆ. ಆದುದರಿಂದಾಗಿ ನಾವು ಪ್ರಕೃತಿಯನ್ನು ನಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದು ನುಡಿದರು.

ಬೆಂಗಳೂರು ನಗರ ಕಾಂಕ್ರೀಟ್ ಜಂಗಲ್ ಆಗಿದೆ. ಹಿಂದಿನ ದಿನಗಳಲ್ಲಿ ನಗರದಲ್ಲಿ ಸುಮಾರು 800-900 ಕೆರೆಗಳಿದ್ದವು. ಆದರೆ, ಈಗ ಎಲ್ಲವನ್ನೂ ಲೆಕ್ಕ ಹಾಕಿದರೂ 100-150 ಕೆರೆಗಳು ಸಿಗುವುದಿಲ್ಲ. ಎಲ್ಲ ಕಡೆ ಬಸ್ ನಿಲ್ದಾಣಗಳು, ದೊಡ್ಡ ದೊಡ್ಡ ಕಂಪೆನಿಗಳು ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಪರಿಸರದ ಕುರಿತು, ಅಲ್ಲಿನ ಪ್ರಾಣಿ, ಪಕ್ಷಿಗಳ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಉದ್ಯಾನನಗರಿಯಾಗಿದ್ದ ಬೆಂಗಳೂರು ಇಂದು ಕಾಂಕ್ರೀಟ್ ನಗರವಾಗಿದೆ. ಮಾಲಿನ್ಯ ಅಧಿಕವಾಗುತ್ತಿದೆ ಎಂದ ಅವರು, ಹಿಂದೆ ಒಬ್ಬರಿಗೆ 7 ಮರಗಳಿದ್ದವು. ಆದರೆ, ಈಗ 17 ಜನರಿಗೆ ಒಂದು ಮರವಿದೆ ಎಂದರು.

ಇತ್ತೀಚಿಗೆ ಮಲೆನಾಡಿನಲ್ಲಿ ಆದ ಭೂ ಕುಸಿತ ಹಾಗೂ ಪ್ರಕೃತಿ ವಿಕೋಪಗಳಿಗೆ ಮಾನವ ನಿರ್ಮಿತ ವ್ಯವಸ್ಥೆಯೇ ಕಾರಣವಾಗಿದೆ. ಅರಣ್ಯದಲ್ಲಿ ಶೇ.25 ರಷ್ಟು ಬಿದಿರು, ಶೇ.50 ರಷ್ಟು ಹಣ್ಣು, ಹಂಪಲು ಬಿಡುವ ಮರಗಳನ್ನು ಬೆಳೆಸಬೇಕು. ಅಲ್ಲದೆ, ಪ್ರತಿ 2-3 ಕಿ.ಮೀ.ಗೆ ಒಂದು ಕೆರೆ ನಿರ್ಮಾಣದ ಅಗತ್ಯವಿದೆ. ಸರಕಾರಿ ಜಮೀನಿನಲ್ಲಿ ಅರಣ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೂಬೆ ವಿಜ್ಞಾನಿ ಡಾ.ಎರಿಕ್ ರಾಮಾನುಜಂ, ಛಾಯಾಗ್ರಾಹಕ ಸರವಣನ್ ಜನಕರಾಜನ್, ಈಶ್ವರ್ ಪ್ರಸಾದ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News