ಸಿಎಂ ಪರಿಹಾರ ನಿಧಿಗೆ ಕೆಎಂಎಫ್‌ನಿಂದ 2 ಕೋಟಿ ರೂ. ನೆರವು

Update: 2019-09-07 14:44 GMT

ಬೆಂಗಳೂರು, ಸೆ. 7: ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳ(ಕೆಎಂಎಫ್)ನಿಂದ 2ಕೋಟಿ ರೂ.ಚೆಕ್ ಅನ್ನು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹಸ್ತಾಂತರ ಮಾಡಿದರು.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಚಾಲಚಂದ್ರ ಜಾರಕಿಹೊಳಿ, ಸಿಎಂಗೆ ಚೆಕ್ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರಿ ಮಳೆ, ಪ್ರವಾಹ ಪರಿಸ್ಥಿತಿ ಪರಿಣಾಮದಿಂದ ಬೆಳಗಾವಿ, ರಾಯಚೂರು, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದರಿಂದ ಅಲ್ಲಿನ ಜನರು ನಿರಾಶ್ರಿತರಾಗಿ ತಮ್ಮ ದೈನಂದಿನ ಚಟುವಟಿಕೆಗಳು ನಿರ್ವಹಿಸಲು ತೀವ್ರ ಕಷ್ಟ ಎದುರಿಸಲಾಗುತ್ತಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರೈತ ಸಮುದಾಯದ ಸಂಸ್ಥೆಯಾದ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ(ಕೆಎಂಎಫ್) ವತಿಯಿಂದ ಲಕ್ಷಾಂತರ ಹಾಲು ಉತ್ಪಾದಕರ ಪರವಾಗಿ ಸಿಎಂ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ಚೆಕ್‌ನ್ನು ಹಸ್ತಾಂತರಿಸಲಾಗಿದೆ ಎಂದರು.

ಕೆಎಂಎಫ್ ವತಿಯಿಂದ ಈಗಾಗಲೇ ಆಗಸ್ಟ್ 20ರಂದು ಸಿಎಂ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 1ಕೋಟಿ ರೂ., ಇದಲ್ಲದೇ ಬೆಂಗಳೂರು ಹಾಲು ಒಕ್ಕೂಟದಿಂದ 1.16ಕೋಟಿ ರೂ., ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ 30 ಲಕ್ಷ ರೂ.ದೇಣಿಗೆ ನೀಡಲಾಗಿದ್ದು, ಒಟ್ಟಾರೆಯಾಗಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಾಲು ಉತ್ಪಾದಕ ರೈತ ವರ್ಗದಿಂದ 4.46 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ ಎಚ್.ಜಿ.ಹೀರೇಗೌಡ್ರು, ಕಾಪು ದಿವಾಕರ್‌ ಶೆಟ್ಟಿ, ಶ್ರೀಶೈಲ ಬಿ.ಪಾಟೀಲ್, ಆನಂದ್‌ ಕುಮಾರ್, ಎಂ.ನಂಜುಂಡಸ್ವಾಮಿ, ಸಿ.ವೀರಭದ್ರ ಬಾಬು ಮತ್ತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News