ಅ.1 ರಿಂದ ಒಣಕಸ ವಿಲೇವಾರಿಗೆ ಸ್ತ್ರೀ ಶಕ್ತಿ ಬಳಸಲು ಬಿಬಿಎಂಪಿ ಚಿಂತನೆ

Update: 2019-09-07 15:04 GMT

ಬೆಂಗಳೂರು, ಸೆ.7: ರಾಜಧಾನಿಯ ಒಣಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಅ.1ರಿಂದ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಬಳಸಿಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ.

ನಗರದಲ್ಲಿ ಒಣ, ಹಸಿ ಕಸ ಪ್ರತ್ಯೇಕಿಸಲು ಹಾಗೂ ಸಂಗ್ರಹಿಸಲು ಈಗಾಗಲೇ ಏಳು ಸಾವಿರಕ್ಕೂ ಅಧಿಕ ಚಿಂದಿ ಆಯುವವರನ್ನು ಬಿಬಿಎಂಪಿ ಗುರುತಿಸಿದ್ದು, ಇವರಿಂದ 145 ವಾರ್ಡ್‌ಗಳಲ್ಲಿ ಮಾತ್ರ ಒಣ ಕಸ ಸಂಗ್ರಹಿಸಲಾಗುತ್ತಿದೆ. ಉಳಿದ 54 ವಾರ್ಡ್‌ಗಳಿಗೆ ಮಹಿಳಾ ಸ್ವಸಹಾಯ ಗುಂಪುಗಳ ನೆರವು ಪಡೆಯುವ ಉದ್ದೇಶವಿದೆ.

ಮನೆಗಳಲ್ಲಿ ಒಣ ಕಸ ಸಂಗ್ರಹಿಸಲು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಪಾಲಿಕೆಯಿಂದ ಆಟೋ ನೀಡಲಾಗುವುದು. ಈ ಕಸವನ್ನು ಮಾರಾಟ ಮಾಡಿ ಅದರಿಂದ ಬರುವ ಹಣ ಅವರೇ ಪಡೆಯಬಹುದು. ಸ್ತ್ರೀ ಶಕ್ತಿ ಸಂಘಟನೆಗಳು ಒಣ ಕಸ ಸಂಗ್ರಹ ಮಾಡುವುದರಿಂದ ಕೇಂದ್ರ, ರಾಜ್ಯ ಮತ್ತು ಪಾಲಿಕೆಯ ಹಲವು ಯೋಜನೆಗಳ ನೆರವು ಪಡೆಯಲು ಅರ್ಹತೆ ಪಡೆಯಲಿವೆ.

ಒಣ ಕಸ ಸಂಗ್ರಹಿಸಲು ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮ್ಯಾಪಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಕೆಲ ವಾರ್ಡ್‌ಗಳ ವಿಸ್ತೀರ್ಣ, ಜನಸಂಖ್ಯೆ ಹೆಚ್ಚಿದ್ದು, ಶೀಘ್ರವೇ ಯಾವ ರಸ್ತೆಗೆ ಯಾರು ಒಣ ಕಸ ಸಂಗ್ರಹಿಸಬೇಕೆಂದು ತಿಳಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಣದೀಪ್ ತಿಳಿಸಿದ್ದಾರೆ.

ಸೆ.1ರಿಂದಲೇ ಹೊಸ ಟೆಂಡರ್ ಜಾರಿಯಾಗಬೇಕಾಗಿತ್ತು. ಆದರೆ, ಸರಕಾರ ಬಜೆಟ್ ತಡೆಹಿಡಿದ ಕಾರಣ ವಿಳಂಬವಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡುತ್ತಿದ್ದು, ಒಂದು ತಿಂಗಳೊಳಗೆ ಕಸ ಸಂಗ್ರಹಣೆ ಕಾರ್ಯ ಆರಂಭಿಸಬೇಕೆಂದು ಪಾಲಿಕೆ ಆದೇಶಿಸಿದೆ. ಇನ್ನು ಪಾಲಿಕೆ ವ್ಯಾಪ್ತಿಯ ಮನೆಗಳಲ್ಲಿ ಒಣ ಕಸ ಸಂಗ್ರಹಿಸಲು ಅನುಮತಿ ಸಿಕ್ಕಿದೆ. ಆದರೆ, ಮನೆಯ ಒಣ ಕಸ ಸಂಗ್ರಹದಿಂದ ನಮಗೆ ಆದಾಯ ಬರುವುದಿಲ್ಲ. ಆದ್ದರಿಂದ ವಾಣಿಜ್ಯ ಕಸ ಸಂಗ್ರಹಿಸಲು ಅನುಮತಿ ನೀಡಬೇಕೆಂದು ಮನವಿ ನೀಡಲಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಗರುಡಾಚಾರ್ ಪಾಳ್ಯ ವಾರ್ಡ್‌ನಲ್ಲಿ 25,600 ಮನೆಗಳಿದ್ದು, 1.5ರಿಂದ 2ಟನ್ ಒಣ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಪುನರ್ ಬಳಕೆಯಾಗುವ ಕಸ 50 ಕೆ.ಜಿ. ಮಾತ್ರ. ಆದ್ದರಿಂದ ಪಾಲಿಕೆ ಆಟೋ ಜತೆ ನಿರ್ವಹಣೆ ವೆಚ್ಚ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಮಹದೇವಪುರ ಮಹಿಳಾ ಒಕ್ಕೂಟದ ಕಾರ್ಯದರ್ಶಿ ನಾಗರತ್ನ ತಿಳಿಸಿದ್ದಾರೆ.

ಹೊಸ ಟೆಂಡರ್ ಪ್ರಕಾರ ಹಸಿ ತ್ಯಾಜ್ಯ ವಿಲೇವಾರಿಗೆ 308 ಕೋಟಿ ರೂ.ಗಳನ್ನು ಪಾಲಿಕೆ ವ್ಯಯಿಸಲಿದೆ. ಒಣಕಸ ಸಂಗ್ರಹ ಮಾಡಲು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಅನುಮತಿ ನೀಡಲು ಚಿಂತಿಸಲಾಗಿದ್ದು, ಅವರಿಗೆ ಪಾಲಿಕೆಯಿಂದ ವೇತನ ನೀಡುವುದಿಲ್ಲ. ಒಣಕಸ ಮಾರಾಟದಿಂದ ಬಂದ ಹಣ ಪಡೆಯಬಹುದು. ಇದರಿಂದ ಅವರ ಗುಂಪು ಮತ್ತು ಜೀವನಮಟ್ಟ ಸುಧಾರಣೆಯಾಗಲಿದೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News